ಹುಣಸೂರು: ಪರಿಶಿಷ್ಟ ಪಂಗಡಗಳಿಗೆ ಕೇಂದ್ರ ಸರಕಾರವು ಸಂವಿಧಾನ ಬದ್ಧವಾಗಿ ನೀಡುತ್ತಿರುವ ಶೇ.7.5 ಮೀಸಲಾತಿಯಂತೆ ರಾಜ್ಯ ಸರಕಾರವು ಸಹ ಅಷ್ಟೇ ಪ್ರಮಾಣದ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ತಾಲೂಕು ನಾಯಕರ ಸಂಘವು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಾಯಕ ಜನಾಂಗಕ್ಕೆ ಮೀಸಲಾತಿ ಸೌಲಭ್ಯ ಹೆಚ್ಚಿಸಿ, ತಾರತಮ್ಯ ಸರಿಪಡಿಸಿ, ಕೇಂದ್ರ ಸರಕಾರದಂತೆ ಸರಿ ಸಮಾನ ಮೀಸಲಾತಿ ನೀಡಿರೆಂದು ಘೋಷಣೆ ಮೊಳಗಿಸಿದರು.
ನಂತರ ಸಂಘದ ಅಧ್ಯಕ್ಷ ಹರವೆ ಶಿವಣ್ಣ ಮಾತನಾಡಿ, ರಾಜ್ಯ ಸರಕಾರವು ಪರಿಶಿಷ್ಟ ಪಂಗಡಗಳಿಗೆ ನ್ಯಾಯಬದ್ಧವಾಗಿ ನೀಡಬೇಕಾದ ಮೀಸಲಾತಿಯಲ್ಲಿ ಕೇವಲ ಶೇ.3 ರಷ್ಟು ನೀಡಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದೆ.
ಕೇಂದ್ರ ಸರಕಾರವು ಶೇ.7.5 ಮೀಸಲಾತಿ ನೀಡುತ್ತಿದ್ದು, ಅದೇ ರೀತಿ ನೀಡಬೇಕಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಈಗಲಾದರೂ ತಾರತಮ್ಯ ಕೈ ಬಿಟ್ಟು ನ್ಯಾಯಬದ್ಧವಾಗಿ ನೀಡಬೇಕಾದ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ, ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ತಾಲೂಕು ಯುವ ಜನತಾ ದಳದ ಅಧ್ಯಕ್ಷ ಎಸ್.ಲೋಕೇಶ್ ಮಾತನಾಡಿ, ಇತ್ತೀಚೆಗೆ ಇತರೆ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಅನ್ಯಾಯವೆಸಗುತ್ತಿದೆ. ಈ ನೀತಿ ಕೈಬಿಡಬೇಕೆಂದರೆ, ಜಿಪಂ ಮಾಜಿ ಸದಸ್ಯ ದೇವರಾಜ್ ಉದ್ಯೋಗ ಹಾಗೂ ರಾಜಕೀಯವಾಗಿ ಪರಿಶಿಷ್ಟ ಪಂಗಡಕ್ಕೆ ಅನ್ಯಾಯವಾಗುತ್ತಿದ್ದು ಮೀಸಲಾತಿಯನ್ನು ಸಂವಿಧಾನ ಬದ್ಧವಾಗಿ ಹೆಚ್ಚಿಸುವ ಮೂಲಕ ನೆರವಾಗಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಜಿಪಂ ಸದಸ್ಯ ಕಟ್ಟನಾಯ್ಕ, ಉಪಾಧ್ಯಕ್ಷ ಕೆ.ಎಸ್. ಅಣ್ಣಯ್ಯನಾಯ್ಕ, ಮಾಜಿ ಅಧ್ಯಕ್ಷ ತಿಮ್ಮನಾಯ್ಕ, ಮುಖಂಡರಾದ ಕಾಳಿದಾಸನಾಯ್ಕ, ಕಾರ್ ಗೋವಿಂದಯ್ಯ, ಸ್ವಾಮಿನಾಯ್ಕ, ಚೌಡನಾಯ್ಕ, ರಾಚಪ್ಪ, ರಾಮನಾಯ್ಕ ಸೇರಿದಂತೆ ಇತರರು ಇದ್ದರು.
ಶಾಸಕರ ಭರವಸೆ: ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎಚ್.ವಿಶ್ವನಾಥ್ ಮನವಿ ಸ್ವೀಕರಿಸಿ, ಪರಿಶಿಷ್ಟ ಪಂಗಡಕ್ಕೆ ಅನ್ಯಾಯವಾಗುತ್ತಿರುವುದು ಸತ್ಯ, ಈ ಬಗ್ಗೆ ಮುಖ್ಯ ಮಂತ್ರಿಗಳ ಜೊತೆ ಚರ್ಚಿಸಿ ಮೀಸಲಾತಿ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ಇತ್ತರು. ತಹಶೀಲ್ದಾರ್ ಬಸವರಾಜುರಿಗೂ ಸಹ ಮನವಿ ಸಲ್ಲಿಸಿದರು.