ಬೆಂಗಳೂರು: ಕ್ರೈಸ್ತ ಸಮುದಾಯದವರ ಜೀವನ ಮಟ್ಟ, ಅವರ ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿ ಅರಿಯಲು ಪ್ರತ್ಯೇಕ ಆಯೋಗ ರಚಿಸುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ 200 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಈ ಮೂಲಕ ಕ್ರೈಸ್ತ ಸಮುದಾಯಕ್ಕೆ ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ಒದಗಿಸಲಾಗಿದೆ. ಅತಿ ಹೆಚ್ಚು ಅನುದಾನ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪಕ್ಷದ ನಾಯಕರನ್ನು ಸಮುದಾಯದಿಂದ ಅಭಿನಂದಿಸಲಾಗುವುದು ಎಂದು ಹೇಳಿದರು.
ರಾಜ್ಯದ 27 ಜಿಲ್ಲೆಗಳಲ್ಲಿ ಶೇ.4ರಷ್ಟು ಕ್ರೈಸ್ತ ಸಮುದಾಯದ ಜನ ವಾಸಿಸುತ್ತಿದ್ದಾರೆ. ಕ್ರೈಸ್ತರಲ್ಲಿ ಆರ್ಥಿಕವಾಗಿ ಅತ್ಯಂತ ಹಿಂದುಳಿದ ವರ್ಗಗಳಿಗೆ ಶಿಕ್ಷಣ, ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಸ್ವ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಲು ಶೀಘ್ರವೇ ನಿಗಮದ ಕಚೇರಿ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿರುವ ಕ್ರೈಸ್ತ ಸಮುದಾಯಗಳ ಪುರಾತನ ಚರ್ಚ್‌ಗಳ ರಕ್ಷಣೆ, ಸ್ಮಶಾನ ಅಭಿವೃದ್ಧಿ, ಸಮುದಾಯ ಭವನ ನಿರ್ಮಾಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಅಧ್ಯಯನಕ್ಕಾಗಿ ನಗರಕ್ಕೆ ಆಗಮಿಸುವ ಕ್ರೈಸ್ತ ಸಮುದಾಯ ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ವಸತಿ ನಿಲಯ ನಿರ್ಮಾಣ ಮಾಡುವುದು ಹಾಗೂ ಕ್ರೈಸ್ತರ ಪವಿತ್ರ ಸ್ಥಳಗಳ ಪ್ರವಾಸ ಕೈಗೊಳ್ಳಲು ಸರ್ಕಾರ ರಿಯಾಯಿತಿ ದರದಲ್ಲಿ ಯೋಜನೆ ರೂಪಿಸಬೇಕು ಎಂದು ಕೋರಿದರು.
ಹಿಂದೂ, ಸಿಖ್ ಮತ್ತು ಬೌದ್ಧ ದಲಿತರಂತೆ ದಲಿತ ಕ್ರೈಸ್ತರೂ ಕೂಡ ಶೋಷಣೆ ಹಾಗೂ ತಾರತಮ್ಯ ಎದುರಿಸುತ್ತಿದ್ದಾರೆ. ಆದರೆ, ಪರಿಶಿಷ್ಟ ಜಾತಿಯ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ದಲಿತ ಕ್ರೈಸ್ತರನ್ನು ಪ್ರವರ್ಗ 1ರ ಅಡಿಯಲ್ಲಿ ಸೇರಿಸಲಾಗಿದೆ. ಆದರೆ, ಪ್ರವರ್ಗ 1ರ ಅಡಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆ ಅಧಿಕಾರಿಗಳಿಂದ ಪಡೆಯಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ತರ ಧರ್ಮಗಳ ದಲಿತರಂತೆ ಕ್ರೈಸ್ತ ದಲಿತರಿಗೂ ಮೀಸಲಾತಿ ಒದಗಿಸಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಬೇಕು ಎಂದು ಮನವಿ ಮಾಡಿದರು. ರಾಜ್ಯ ಹೈಕೋರ್ಟ್ ತೀರ್ಪಿನಂತೆ ರಾಜ್ಯ ಅಲ್ಪಸಂಖ್ಯಾತ ಆಯೋಗಕ್ಕೆ ಕ್ರೈಸ್ತ ಸಮುದಾಯದವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.