Advertisement

ಎಂಜಿನಿಯರಿಂಗ್‌, ವೈದ್ಯಕೀಯ ಪ್ರವೇಶ ಮೀಸಲಾತಿ ಹೆಚ್ಚಳಕ್ಕೆ ಮನವಿ

11:15 PM Jun 24, 2023 | Team Udayavani |

ಬೆಂಗಳೂರು: ಸ್ಕೌಟ್ಸ್‌ ಹಾಗೂ ಗೈಡ್ಸ್‌ನಲ್ಲಿ ರಾಜ್ಯ ಪುರಸ್ಕಾರ ಪಡೆದುಕೊಂಡವರಿಗೆ ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಪ್ರವೇಶಕ್ಕೆ ನೀಡಲಾದ ಮೀಸಲಾತಿಯನ್ನು ಹೆಚ್ಚಳ ಮಾಡುವಂತೆ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಸ್ಕೌಟ್ಸ್‌ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್‌.ಸಿಂಧ್ಯಾ ತಿಳಿಸಿದರು.

Advertisement

ಶನಿವಾರ ನಗರದ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನ ವಾರ್ಷಿಕ ಕಾರ್ಯಕ್ರಮಗಳ ಯೋಜನೆ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

6000 ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಎಂಜಿನಿಯರಿಂಗ್‌ ಪ್ರವೇಶಕ್ಕೆ ಕಾಯ್ದಿರಿಸಲಾದ 15 ಸೀಟುಗಳನ್ನು 300ಕ್ಕೆ ಏರಿಕೆ ಮಾಡುವಂತೆ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ನಿಭಾಯಿಸುತ್ತಿರುವ ಶಿಕ್ಷಕರಿಗೆ ಮಾಸಿಕ ಗೌರವಧನ 250ರೂ. ನೀಡುವಂತೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ವಾರ್ಷಿಕ 5ರಿಂದ 6 ಕೋಟಿ ರೂ. ಅನುದಾನದ ಅಗತ್ಯವಿದೆ. ಜತಗೆ ವೈದ್ಯಕೀಯ ವಿಭಾಗದಲ್ಲಿ ರಾಜ್ಯಕ್ಕೆ 2 ಸೀಟು ಮೀಸಲಿರಿಸಿದ್ದು, ಅದನ್ನು ಸಹ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಾರ್ಷಿಕ ಯೋಜನಾ ಪುಸ್ತಕ
ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಪ್ರತಿ ವರ್ಷ ಮಕ್ಕಳು ಹಾಗೂ ಶಿಕ್ಷಕರಿಗಾಗಿ ಕಾರ್ಯಕ್ರಮ, ಚಟುವಟಿಕೆ, ತರಬೇತಿ ವಿವರಗಳನ್ನೊಳಗೊಂಡ ಯೋಜನಾ ಪುಸ್ತಕ ರೂಪಿಸಲಾಗಿದೆ. ಅದನ್ನು ಕಬ್‌-ಬುಲ್‌ಬುಲ್‌, ಸ್ಕೌಟ್ಸ್‌-ಗೈಡ್ಸ್‌, ರೋವರ್‌- ರೇಂಜರ್‌ ದಳಗಳ ನಡೆಸುತ್ತಿರುವ ಶಿಕ್ಷಕರಿಗೆ ನೀಡಲಾಗುತ್ತದೆ. ಅದರಂತೆಯೇ 2023-24ನೇ ಸಾಲಿನಲ್ಲಿ ಸಂಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.

6.5ಲಕ್ಷ ವಿದ್ಯಾರ್ಥಿ
ಕರ್ನಾಟಕದಲ್ಲಿ ಸ್ಕೌಟಿಂಗ್‌ ಹೆಮ್ಮರವಾಗಿ ಬೆಳೆದು ನಿಂತಿದೆ. ಬನ್ನೀಸ್‌ (3ರಿಂದ 5ವರ್ಷ), ಕಬ್ಸ್-ಬುಲ್‌ಬುಲ್‌ (5ರಿಂದ 10ವರ್ಷ), ಸ್ಕೌಟ್ಸ್‌-ಗೈಡ್ಸ್‌ (10-16ವರ್ಷ), ರೋವರ್-ರೇಂಜರ್ (16-25 ವರ್ಷ)ನ ಒಟ್ಟು 6.5ಲಕ್ಷ ವಿದ್ಯಾರ್ಥಿಗಳು ತರಬೇತಿ ಪಡೆದ 20,000 ಶಿಕ್ಷಕರಿಂದ ಕೌಶಲ್ಯಾತ್ಮಕ ತರಬೇತಿ ಪಡೆದು ಸ್ಕೌಟಿಂಗ್‌-ಗೈಡಿಂಗ್‌ನಲ್ಲಿ ಕಲಿಯುತ್ತಿದ್ದಾರೆ ಎಂದು ಹೇಳಿದರು.

Advertisement

ಸ್ಕೌಟಿಂಗ್‌ನಲ್ಲಿ ರಾಜ್ಯ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿ ಕೋವಿಡ್‌ ಅವಧಿಯಲ್ಲಿ 1 ಕೋಟಿ ಮಾಸ್ಕ್, 1 ಕೋಟಿಯನ್ನು ಕೋವಿಡ್‌ ಪರಿಹಾರ ನಿಧಿಗೆ ಹಣ ಸಂಗ್ರಹ, ಆಹಾರ, ಬಟ್ಟೆ, ಔಷಧಿ ಸೇರಿದಂತೆ ಇತರೆ ತುರ್ತು ಅಗತ್ಯದ ವಸ್ತುಗಳನ್ನು ವಿತರಣೆ ಮಾಡಲಾಗಿದೆ. ಅದಕ್ಕಾಗಿಯೇ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಅವರು ಅಭಿನಂದಿಸಿ ಅಭಿನಂದನಾ ಪತ್ರವನ್ನು ನೀಡಿದ್ದಾರೆ ಎಂದರು.

ಚಿಣ್ಣರ ದರ್ಶನ
ಪ್ರಸ್ತುತ ಚಿಣ್ಣರ ದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಅರಣ್ಯಕ್ಕೆ ಕರೆದುಕೊಂಡು ಹೋಗಿ ಅರಣ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಒಂದು ರಾತ್ರಿ ಅಲ್ಲಿಯೇ ವಾಸಕ್ಕೆ ಅನುವು ಮಾಡಿಕೊಡಲಾಗುತ್ತದೆ. ಪ್ರಸ್ತುತ 5000 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ಅದನ್ನು 50,000ಕ್ಕೆ ಏರಿಕೆ ಮಾಡಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next