Advertisement

ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಮನವಿ

10:49 AM Jun 19, 2018 | Team Udayavani |

ಚಿಕ್ಕಮಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Advertisement

ನಗರದ ತಾಲೂಕು ಕಚೇರಿಯಿಂದ ಆಜಾದ್‌ಪಾರ್ಕ್‌ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ  ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೇ.30ರಂದು ಸಿ.ಎಂ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ 15 ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದರು. ಅವಧಿ ಮುಗಿದಿದ್ದರೂ ಸಾಲಮನ್ನಾ ಘೋಷಣೆ ಮಾಡದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ಸಾಲಮನ್ನಾ ಮಾಡುವ ಜೊತೆಗೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ರೈತರಿಗೆ ನೀಡುವ ಹಾಲಿನ ದರವನ್ನು ಕಡಿಮೆ ಮಾಡಿದ್ದು, ಹಾಲಿನ ದರವನ್ನು ಏರಿಕೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆ.ಕೆ. ಕೃಷ್ಣೇಗೌಡ ಮಾತನಾಡಿ, ರೈತರ, ಕೃಷಿ ಕಾರ್ಮಿಕರ ಮತ್ತು ಸ್ವ-ಸಹಾಯ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಿ ರೈತರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

Advertisement

ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿ ಈಗ ನುಣುಚಿಕೊಳ್ಳುತ್ತಿದೆ. ರೈತರ ಸಾಲಮನ್ನಾ ಮತ್ತು ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಚಿಂತನೆ ಮಾಡಬೇಕು. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ರೈತ ಸಮುದಾಯ ಸಂಕಷ್ಟದಲ್ಲಿದೆ ಎಂದರು. ಸತತ ಬರಗಾಲದಿಂದ ರೈತ ಸಮುದಾಯ ತತ್ತರಿಸಿ ಹೋಗಿದ್ದು, ರಾಜ್ಯ ಸರ್ಕಾರ ಶೇ.35ರಷ್ಟು ಹಾಗೂ ಕೇಂದ್ರ ಸರ್ಕಾರ ಶೇ. 65ರಷ್ಟು ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿದರು.

ಸಿ.ಎಂ. ಕುಮಾರಸ್ವಾಮಿಯವರು ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಮಾತಿಗೆ ತಪ್ಪಿದ್ದಾರೆ. ಸಿ.ಎಂ.ರವರನ್ನು ಎಚ್ಚರಿಸುವ ಸಲುವಾಗಿ ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಕ್ಷಣ ಸಾಲಮನ್ನಾ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.

ರೈತ ಸಂಘ ಜಿಲ್ಲಾ ಖಜಾಂಚಿ ಎಂ.ಬಿ. ಚಂದ್ರಶೇಖರ್‌, ಲಕ್ಷ್ಮಣ ಗೌಡ ಮೂಡಿಗೆರೆ, ಪುಟ್ಟಸ್ವಾಮಿ, ಕೃಷ್ಣಮೂರ್ತಿ, ಪರಮೇಶ್‌ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next