ಆಳಂದ: ರಾಜ್ಯ ಸರ್ಕಾರ ತಾಲೂಕಿನಲ್ಲಿ ಪಾತಾಳಗಂಗೆ ಬಗೆದು ತೆಗೆಯಲು ಮುಂದಾಗಿರುವುದು ಪರಿಸರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪಾತಾಳ ಗಂಗೆ ಅಲ್ಲಿಯೇ ಇರಲಿ, ಆಕಾಶ ಗಂಗೆ ಇಲ್ಲಿಗೆ ಬರಲಿ ಎಂದು ಒತ್ತಾಯಿಸಿ ಪಾತಾಳಗಂಗೆ ಲೂಟಿ ವಿರೋಧಿ ಹೋರಾಟ ಸಮಿತಿ ಕಾರ್ಯಕರ್ತರು ತಹಶೀಲ್ದಾರಗೆ ಮನವಿ ಸಲ್ಲಿಸಿದರು.
ಸರ್ಕಾರ ಕ್ವೆಸ್ಟ್ ಕಂಪನಿಗೆ ಪಾತಾಳ ಗಂಗೆ ಬಗೆದು ನೀರು ತೆಗೆಯುವ ಕೆಲಸ ಕೊಟ್ಟಿದೆ. ಇದು ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ನಮ್ಮ ಸಂಘಟನೆಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿವೆ. ವಿಜ್ಞಾನಿಗಳೂ ವಿರೋಧಿಸಿದ್ದಾರೆ. ಸಂಘಟನೆಗಳ ಸಭೆಗೆ ಈ ಕಂಪನಿಯವರನ್ನು ಕರೆದಿರಲಿಲ್ಲ.
ಕಂಪನಿ ಸಲಹೆ ಮೇರೆಗೆ ಯೋಜನೆಗಾಗಿ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರದ ಇಂತಹ ನಿಲುವು ಅತ್ಯಂತ ಅಪಾಯಕಾರಿ. ಯೋಜನೆಗೆ ಮೊದಲು ಪ್ರಾಯೋಗಿಕವಾಗಿ ವಿಜಯಪುರ ಜಿಲ್ಲೆ ಇಂಡಿ ಮತ್ತು ಕಲಬರುಗಿ ಜಿಲ್ಲೆಯ ಆಳಂದ ಪ್ರದೇಶ ಬಲಿ ಮಾಡಲು ಹೊರಟಿದೆ. ನಾಡಿನ ಪ್ರಜ್ಞಾವಂತರು, ವಿಜ್ಞಾನಿಗಳು, ಜಲತಜ್ಞರು, ಪರಿಸರವಾದಿಗಳು, ಮಾಧ್ಯಮದವರು ಇದನ್ನು ವಿರೋಧಿಸಿದ್ದಾರೆ.
ಆಳಂದದಲ್ಲಿ ಪಾತಾಳಗಂಗೆ ಸಂಬಂಧ ಭೂಮಿ ಕೊರೆಯಲು ಬಿಡುವುದಿಲ್ಲ ಎಂದರು. ಪಾತಾಳ ಗಂಗೆ ಬಗೆಯುವ ಬದಲು ನರೇಗಾ ಜಾರಿ ಮಾಡಿ ನೀರು ಸಂಗ್ರಹಿಸಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಲಿ. ಬಹುದೊಡ್ಡ ಸಂಖ್ಯೆಯಲ್ಲಿರುವ ದುಡಿವ ಜನರ ಕೈಗೆ ಕೆಲಸವೂ ಸಿಕ್ಕಂತಾಗುತ್ತದೆ.
ಕೆರೆ, ಚೆಕ್ ಡ್ಯಾಂ, ಗೋಕಟ್ಟೆ, ಕೃಷಿ ಹೂಂಡ, ಕ್ಷೇತ್ರ ಬದು ನಿರ್ಮಾಣದ ಮೂಲಕ ಬಸಿನೀರು ಸಂಗ್ರಹಣೆಗೆ ಅವಕಾಶವಿದೆ. ಕಳೆದ ವರ್ಷ ನರೇಗಾವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿದ ಕಾರಣ ಅನೇಕ ಕೆರೆಗಳು ತುಂಬಿವೆ. ಅಂತರ್ಜಲ ಮಟ್ಟ ಹೆಚ್ಚಾಗಿದೆ. ಸರ್ಕಾರ ಇಂಥ ಕಾರ್ಯಕ್ಕೆ ರಾಜಕೀಯ ಇಚ್ಛೆ ತೋರಿಸಲಿ.
ಪಾತಾಳಗಂಗೆ ಬಗೆದು ಜನರ ಬದುಕಿಗೆ ಅಪಾಯ ತಂದೊಡ್ಡುವ ಜನವಿರೋಧಿ ನೀತಿ ಕೈಬಿಡಬೇಕು ಎಂದು ಒತ್ತಾಯಿಸಿದರು. ಸರ್ಕಾರವೇನಾದರೂ ಆಳಂದ ತಾಲೂಕಿನಲ್ಲಿ ಪಾತಾಳಗಂಗೆ ಬಗೆಯಲು ಮುಂದಾದರೆ ತೀವ್ರತರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಬಳಿಕ ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಅವರಿಗೆ ಮನವಿ ಸಲ್ಲಿಸಿದರು.
ಹಿರಿಯ ಬಂಡಾಯ ಸಾಹಿತಿ ಡಾ| ಪ್ರಭು ಖಾನಾಪುರೆ, ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ಕೆ. ನೀಲಾ, ನಂದಾದೇವಿ ಮಾಗೊಂಡ, ಚಂದಮ್ಮ ಗೊಳಾ, ಮಹಾಂತಪ್ಪ ಮುಲಗೆ, ನಾಗಮ್ಮ ಕೆರಮಗಿ, ನಿಂಗಪ್ಪ ಮಾಗೊಂಡಿ, ಸುದೇವಿ ಮುನ್ನೊಳ್ಳಿ, ರಮೇಶ ಬಿರಾದಾರ, ಸಂತೋಷ ಬಾವಿ, ಬಲಭೀಮ ಪಾಟೀಲ, ಸೋಮಶಂಕರ ಮುನ್ನೋಳಿ, ಬಸವರಾಜ ಯಲೆª, ಖೇಮಲಿಂಗ ಮರಡಿ ಪಾಲ್ಗೊಂಡಿದ್ದರು.