Advertisement

ಜನಪ್ರತಿನಿಧಿಗಳು ಒಂದೇ ಕಂಪನಿ ಕಲಾವಿದರಿದ್ದಂತೆ

12:50 PM Jul 18, 2017 | Team Udayavani |

ಹುಬ್ಬಳ್ಳಿ: ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮನ್ನಾಳುವ ಜನಪ್ರತಿನಿಧಿಗಳು ಒಂದೇ ನಾಟಕ ಕಂಪನಿಯ ಕಲಾವಿದರಂತಿದ್ದು, ಕಳಸಾ-ಬಂಡೂರಿ ಯೋಜನೆ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಇಲ್ಲದೆ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 

Advertisement

ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮುನ್ಸಿಪಲ್‌ ಎಂಪ್ಲಾಯಿಜ್‌ ಹಾಲ್‌ನಲ್ಲಿ ಆಯೋಜಿಸಿದ್ದ ಮಠಾಧೀಶರು ಹಾಗೂ ರೈತ ಸಂಘಟನೆಗಳ ಸಮಾವೇಶದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಉಭಯ ಸರ್ಕಾರಗಳಿಗೆ ರೈತರು ಉದ್ಧಾರವಾಗುವುದು ಬೇಕಿಲ್ಲ. ರೈತರನ್ನು ಆರ್ಥಿಕ ಸಂಕಷ್ಟದಲ್ಲಿಡಲು ಸರ್ಕಾರಗಳು ಹುನ್ನಾರ ನಡೆಸಿವೆ. ರೈತರ ನೋವಿಗೆ ಸ್ಪಂದಿಸದ ಸರ್ಕಾರಗಳು ಇದ್ದೂ ಸತ್ತಂತೆ ಎಂದರು. 

ಕರ್ನಾಟಕ ಭಾರತದಲ್ಲಿದೆಯೇ?: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಅದಕ್ಕೆ ತಕ್ಷಣವೇ ಸ್ಪಂದಿಸುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ರೈತರು ಎರಡು ವರ್ಷಗಳಿಂದ ನೀರಿಗಾಗಿ ಹೋರಾಟ ಮಾಡುತ್ತಿದ್ದರೂ ಸ್ಪಂದಿಸುತ್ತಿಲ್ಲ.

ಇದರಿಂದ ನಮ್ಮ ಕರ್ನಾಟಕ ಭಾರತ ದೇಶದಲ್ಲಿದೆಯೋ ಇಲ್ಲವೋ ಎಂಬ ಸಂದೇಹ ಮೂಡುತ್ತದೆ ಎಂದರು.  ಪ್ರಧಾನಿ ಮೋದಿ ಕರೆದ ಸಭೆಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಸಂಸದರೂ ಕಳಸಾ-ಬಂಡೂರಿ ಬಗ್ಗೆ ತುಟಿ ಬಿಚ್ಚದಿರುವುದು ದುರ್ದೈವ ಸಂಗತಿ ಎಂದರು.  

ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ನಡೆಸಿದರೆ 3 ತಿಂಗಳಲ್ಲಿ, ಪ್ರಧಾನಿ ಮಧ್ಯ ಪ್ರವೇಶ ಮಾಡಿದರೆ 3 ನಿಮಿಷಗಳಲ್ಲಿ ಕಳಸಾ-ಬಂಡೂರಿ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದರು. ರೈತರು ಒಗ್ಗಟ್ಟಾಗಿ ಹೋರಾಟ ಸಂಘಟಿಸಿದರೆ ಖಂಡಿತಾ ಹೋರಾಟಕ್ಕೆ ಸೂಕ್ತ ಪ್ರತಿಫ‌ಲ ಸಿಗಲಿದೆ. 

Advertisement

ರಾಷ್ಟ್ರೀಯ ಪಕ್ಷಗಳ ಮುಖಂಡರಲ್ಲ, ನೇಗಿಲಯೋಗಿಗಳೇ ನಮಗೆ ನಾಯಕರಾಗಬೇಕು. ರೈತರ ಸಂಘಟನೆ ಒಡೆಯುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಅಭಿಪ್ರಾಯಪಟ್ಟರು. ಕಳಸಾ-ಬಂಡೂರಿ ಅನುಷ್ಠಾನ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂಬ ಸಾಮಾನ್ಯ ಕನಿಷ್ಟ ಕಾರ್ಯಕ್ರಮದಡಿ ರೈತರು ಹೋರಾಟ ಸಂಘಟಿಸಬೇಕು. 

ಅದಕ್ಕೆ ಮಠಾಧೀಶರು ಸಹಕಾರ ನೀಡಬೇಕು. ಈ ದಿಸೆಯಲ್ಲಿ ಉತ್ತರ ಕರ್ನಾಟಕದ ಮಠಾಧೀಶರ ಸಭೆ ಕರೆಯಲಾಗುವುದು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಹಕಾರಿ ಬ್ಯಾಂಕ್‌ ಸಾಲ ಮನ್ನಾ ಮಾಡಿದ್ದಾರೆ. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ನೀವೇ ತೀರಿಸಿ ಇತಿಹಾಸ ಸೃಷ್ಟಿಸಿ. ಹೀಗೆ ಮಾಡಿದರೆ ರೈತರು ನಿಮ್ಮನ್ನು ಸದಾ ಸ್ಮರಿಸುತ್ತಾರೆ ಎಂದರು.

ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರ್ಕಾರ ಅದಾನಿ-ಅಂಬಾನಿ ಅವರಿಗೆ ನೀಡಿದ ಸಾಲ ಮನ್ನಾ ಮಾಡಿದ್ದು ಯಾಕೆ? ಎಂಬುದನ್ನು ಸ್ಪಷ್ಟಪಡಿಸಲಿ ಎಂದರು. ಹಿರೇವಡ್ಡಟ್ಟಿಯ ಶಾಂತಲಿಂಗ ಸ್ವಾಮೀಜಿ, ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ವೈ.ಬಿ.ಇನಾಮತಿ, ರಾಮಣ್ಣ ಬೊಮ್ಮೊಜಿ, ಲೋಕನಾಥ ಹೆಬಸೂರ, ವಜ್ರಗೌಡ ಪಾಟೀಲ, ಸುಭಾಸಗೌಡ ಪಾಟೀಲ, ಸಿದ್ದರಾಜು, ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ ವೇದಿಕೆ ಮೇಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next