Advertisement

ಜನಪ್ರತಿನಿಧಿಗಳ ಕ್ರೀಡಾಕೂಟ

03:58 PM Oct 04, 2017 | Team Udayavani |

ಉಪ್ಪಿನಂಗಡಿ : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಗ್ರಾಮ, ಪಟ್ಟಣ, ನಗರ ಹಾಗೂ ಜಿಲ್ಲಾ ಪಂಚಾಯತ್‌ ಸಹಿತ ಸ್ಥಳೀಯ ಆಡಳಿತದ ಸದಸ್ಯರಿಗಾಗಿ ಅ. 29ರಂದು ಉಡುಪಿ ಜಿಲ್ಲೆ ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊಳಪು-2017 ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ, ಕ್ರೀಡಾಕೂಟ ಸಮಿತಿ ಸಂಚಾಲಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ಉಪ್ಪಿನಂಗಡಿ ಸದಸ್ಯರಿಗೆ ಮಂಗಳವಾರ ಆಮಂತ್ರಣ ಪತ್ರ ನೀಡಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೀಡಾಕೂಟದ ಮೂಲಕ ಎರಡು ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆಗೂ ಇದು ಪಕ್ಷ ರಹಿತವಾಗಿ ವೇದಿಕೆ ಒದಗಿಸಲಿದೆ. ಆ ಮೂಲಕ ಗ್ರಾಮ ಪಂಚಾಯತ್‌ ವ್ಯವಸ್ಥೆಯನ್ನು ಗಟ್ಟಿ ಮಾಡಿ, ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಡಲಿದೆ ಎಂದರು.

ಕ್ರೀಡಾಕೂಟದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಿಂದ ಸುಮಾರು 5,000 ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 100 ಮೀಟರ್‌ ಓಟ, ಗುಂಡು ಎಸೆತ, ರಿಂಗ್‌ ಇನ್‌ ದಿ ವಿಕೆಟ್‌ (ವಿಕೆಟ್‌ಗೆ ರಿಂಗ್‌ ಹಾಕುವುದು). ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸೂಪರ್‌ ಮಿನಿಟ್‌, ಗಾಯನ, ಛದ್ಮವೇಷ, ರಸಪ್ರಶ್ನೆ (3 ಜನರ ತಂಡ) ಇರುತ್ತವೆ. 100 ಮಂದಿ
ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕ್ರೀಡಾಕೂಟವನ್ನು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಉದ್ಘಾಟಿಸಲಿದ್ದಾರೆ. ಕೇಂದ್ರ
ಸಚಿವ ಡಿ.ವಿ. ಸದಾನಂದ ಗೌಡ ಧ್ವಜ ವಂದನೆ ನೆರವೇರಿಸಲಿದ್ದಾರೆ. 

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌, ಆರೋಗ್ಯ ಸಚಿವ ಯು.ಟಿ. ಖಾದರ್‌ ಸಹಿತ ಎರಡು ಜಿಲ್ಲೆಗಳ ಶಾಸಕರು, ಜಿ.ಪಂ. ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳಬೇಕು ಎಂದು ಮನವಿ
ಮಾಡಿದರು.

Advertisement

ಡಿಸಿಯೊಂದಿಗೆ ಚರ್ಚಿಸುವೆ
ದ.ಕ. ಜಿಲ್ಲೆಯಲ್ಲಿ ಮರಳು ಅಭಾವದಿಂದಾಗಿ ಬಸವ ವಸತಿ ಯೋಜನೆ ಮನೆಗಳ ಕಾಮಗಾರಿ, ಇತರ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿರುವುದನ್ನು ಸದಸ್ಯರು ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ್‌, ಶುಕ್ರವಾರ ದ.ಕ. ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲಿದ್ದು, ಸಮಸ್ಯೆಗಳ ಬಗ್ಗೆ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌, ಜಿ.ಪಂ. ಸದಸ್ಯೆ ಶಯನಾ ಜಯಾನಂದ, ತಾ.ಪಂ. ಸದಸ್ಯರಾದ ಸುಜಾತಾ ಕೃಷ್ಣ, ಮುಕುಂದ ಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಸುನೀಲ್‌ ದಡ್ಡು, ಸುರೇಶ್‌ ಅತ್ರಮಜಲು, ಯು.ಕೆ. ಇಬ್ರಾಹಿಂ, ರಮೇಶ್‌ ಭಂಡಾರಿ, ಭಾರತಿ, ಸುಂದರಿ, ಸುಶೀಲಾ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಸಮಿತಿ ಸದಸ್ಯ ಡಾ| ರಾಜಾರಾಮ್‌, ಉಪ್ಪಿನಂಗಡಿ ಸರಕಾರಿ ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಮೊದಿನ್‌ ಕುಟ್ಟಿ, ಜಯಂತ ಪೊರೋಳಿ, ಉಷಾ ಮುಳಿಯ, ಮಹಮ್ಮದ್‌ ಕೆಂಪಿ, ಸಿದ್ದಿಕ್‌ ಕೆಂಪಿ ಉಪಸ್ಥಿತರಿದ್ದರು.ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ಸ್ವಾಗತಿಸಿ, ಕಾರ್ಯದರ್ಶಿ ಶಾರದಾ ಅವರು ವಂದಿಸಿದರು.

ಶ್ರೀನಿವಾಸ ಪೂಜಾರಿ ಭೇಟಿ
ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಉಪ್ಪಿನಂಗಡಿ ಗ್ರಾ.ಪಂ.ಗೆ ಆಗಮಿಸುವ ಮುನ್ನ ಬಜತ್ತೂರು ಹಾಗೂ ಹಿರೇಬಂಡಾಡಿ ಗ್ರಾಮ ಪಂಚಾಯತ್‌ ಕಚೇರಿಗಳಿಗೆ ಭೇಟಿ ನೀಡಿ, ಅಲ್ಲಿನ ಸದಸ್ಯರಿಗೂ ಆಮಂತ್ರಣ ಪತ್ರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next