ಮಸ್ಕತ್: ಮಸ್ಕತ್‌ನ ಬಿಲ್ಲವ ಸಂಘಟನೆ ಓಮನ್ ಬಿಲ್ಲವಾಸ್ ವತಿಯಿಂದ ಹೊನಲು ಬೆಳಕಿನ ಕ್ರೀಡಾಕೂಟವು ಸಂಘದ ಅಧ್ಯಕ್ಷ ಸುಜಿತ್ ಅಂಚನ್ ನೇತೃತ್ವದಲ್ಲಿ ಫೆ. 9ರಂದು ಅಲ್ ಹೈಲ್ ಕ್ರಿಕೆಟ್ ಮೈದಾನ ಮಸ್ಕತ್‌ನಲ್ಲಿ ನಡೆಯಿತು.
ಸಂಘಟನೆಯ ಸ್ಥಾಪಕ ಅಧ್ಯಕ್ಷ ದಿ| ಪಿ. ಬಿ. ಅಲ್ಕೆ ಸ್ಮರಣಾರ್ಥ ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ಕ್ರಿಕೆಟ್ ಮತ್ತು ತ್ರೋಬಾಲ್ ಮತ್ತು ಮಕ್ಕಳಿಗೆ, ಹಿರಿಯರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪುರುಷರ 8 ತಂಡಗಳು ಹಾಗೂ ಮಹಿಳೆಯರ 4 ತಂಡಗಳು ಪ್ರಪ್ರಥಮವಾಗಿ ಆಯೋಜಿಸಲ್ಪಟ್ಟ ದಿ| ಪಿ. ಬಿ. ಅಲ್ಕೆ ಟ್ರೋಫಿ 2024ಕ್ಕಾಗಿ ತಲಾ 5 ಓವರ್‌ಗಳ ಲೀಗ್ ಮಾದರಿಯಲ್ಲಿ ರೋಚಕವಾಗಿ ಸೆಣಸಾಟ ನಡೆಯಿತು.
ಪುರುಷರ ತಂಡಗಳಾದ ಕುದ್ರೋಳಿ ಇಲೆವೆನ್, ಬೆದ್ರ ಇಲೆವೆನ್, ಬಿರ್ವಾಸ್ಮ್ಯಾಶರ್ಸ್, ಜೇನುಗೂಡು, ಗೆಜ್ಜೆಗಿರಿ ಇಲೆವೆನ್, ಕಟಾ³ಡಿ ಇಲೆವೆನ್, ಸೋಹಾರ್ ವಾರಿಯರ್ಸ್ ಹಾಗೂ ಕಾನ್ಸೆಪ್ಟ್ ಇಲೆವೆನ್ ತಂಡಗಳು ಭಾಗವಹಿಸಿದ್ದವು. ಅಂತಿಮ ಸೆಣಸಾಟದಲ್ಲಿ ಸುಕುಮಾರ್ ಅಂಚನ್ ಪಾಂಗಾಳ ಮಾಲಕತ್ವದ ಗೆಜ್ಜೆಗಿರಿ ಇಲೆವೆನ್ ತಂಡವು ಸಂದೀಪ್ ಕರ್ಕೇರಾ ಮಾಲಕತ್ವದ ಬೆದ್ರ ಇಲೆವೆನ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯಭೇರಿ ಪಡೆದು ಪ್ರತಿಷ್ಠಿತ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ಬಿರ್ವಾ ಬೊಳ್ಳಿಲು, ಟೀಮ್ ಶಕ್ತಿ, ಸೋಹಾರ್ ವಾರಿಯರ್ಸ್ ಹಾಗೂ ಟೀಮ್ ಭೈರವಿ ತಂಡಗಳು ಭಾಗವಹಿಸಿದ್ದವು. ಫೈನಲ್ ಹಣಾಹಣಿಯಲ್ಲಿ ಟೀಮ್ ಶಕ್ತಿ ತಂಡವು ಟೀಮ್ ಭೈರವಿ ವಿರುದ್ಧ 6 ವಿಕೆಟ್‌ಗಳ ರೋಚಕ ಗೆಲುವಿನೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿತು. ತ್ರೋಬಾಲ್ ಪಂದ್ಯದಲ್ಲಿ ಟೀಂ ಶಕ್ತಿ, ಬಿರ್ವಾ ಬೊಳ್ಳಿಲು ಹಾಗೂ “ಬ್ರಾಮರಿ’ ತಂಡಗಳು ಭಾಗವಹಿಸಿದ್ದವು.
ಫೈನಲ್ ಮುಖಾಮುಖಿಯಲ್ಲಿ ಟೀಮ್ ಶಕ್ತಿ ತಂಡವು ಬಿರ್ವಾ ಬೊಳ್ಳಿಲು ವಿರುದ್ಧ ಜಯಸಾಧಿಸಿ ಪ್ರಶಸ್ತಿ ಗಳಿಸುವಲ್ಲಿ ಸಫಲತೆಯನ್ನು ಕಂಡಿತು. ಕಾರ್ಯಕ್ರಮದ ಕೊನೆಯಲ್ಲಿ ಉತ್ತಮ ಆಟಗಾರರಿಗೆ, ವಿಜೇತ ತಂಡಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ನವೀನ್ ಪೂಜಾರಿ, ಗಣೇಶ್ ಪೂಜಾರಿ ಮತ್ತು ನಿತೇಶ್ ನೇತೃತ್ವದ ಅಡುಗೆ ತಂಡವು ದಿನದ ಮೂರು ಹೊತ್ತಿನ ಊಟೋಪಚಾರದ ನೇತೃತ್ವ ವಹಿಸಿದ್ದರು. ಈ ಕ್ರೀಡಾಮಹೋತ್ಸವದಲ್ಲಿ ಅಧ್ಯಕ್ಷ ಸುಜಿತ್ ಅಂಚನ್, ಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಅಶೋಕ್ ಸುವರ್ಣ, ಎಸ್. ಕೆ. ಪೂಜಾರಿ, ಡಾ|ಅಂಚನ್ ಸಿ.ಕೆ., ಓಮನ್ ತುಳುವೆರ್ ಅಧ್ಯಕ್ಷ ರಮಾನಂದ ಶೆಟ್ಟಿ, ಮಸ್ಕತ್ ಮೊಗವೀರ್ ಪ್ರತಿನಿಧಿ ಶ್ರೀಶ ಕಾಂಚನ್, ಕರಾವಳಿ ಫ್ರೆಂಡ್ಸ್‌ನ ಹಿತೇಶ್, ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.