ಲಿಂಗಸುಗೂರು: ರೈತರ ಬದುಕಿಗಾಗಿ ಇರುವ ಹೈನುಗಾರಿಕೆಯನ್ನು ಸಂಪೂರ್ಣ ಸರ್ವನಾಶ ಮಾಡುವ ಹುನ್ನಾರದಿಂದ ಬಿಜೆಪಿ ಸರ್ಕಾರ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ರೈತ ಸಂಘದ ತಾಲೂಕು ಘಟಕ ಸೋಮವಾರ ಹಮ್ಮಿಕೊಂಡಿದ್ದ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹೈನುಗಾರಿಕೆಯನ್ನೇ ನೆಚ್ಚಿಕೊಂಡ ಎಷ್ಟೋ ಕುಟುಂಬಗಳು ಜೀವನ ನಡೆಸುತ್ತಿವೆ. ಈ ಹಿಂದಿನಿಂದಲೂ ಜಾನುವಾರು ಮಾರಾಟ ಹಾಗೂ ಖರೀದಿಸುವುದು ರೈತರ ಕೃಷಿ ಅಂಗವಾಗಿದೆ. ಇದು ರೈತರಿಗೆ ಸಂಬಂಧಪಟ್ಟ ವಿಷಯವಾಗಿದೆ.
ಆದರೆ, ರಾಜ್ಯ ಸರ್ಕಾರ ಗೋಹತ್ಯೆ ನಿಷೇಧದ ಬದಲಿಗೆ ಜಾನುವಾರು ಹತ್ಯೆ ನಿಷೇದ ಜಾರಿಗೆ ತಂದಿದ್ದಾರೆ. ಲಿಂಗಸುಗೂರು ತಾಲೂಕಿನಲ್ಲಿ ಜಾನುವಾರು ಮಾರಾಟ ಮಾಡಿದ ಮೂವರು ರೈತರ ಮೇಲೆ ಪ್ರಕರಣ ದಾಖಲಾಗಿರುವುದು ಖಂಡನೀಯ. ಕೂಡಲೇ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು. ರೈತರ ಮೇಲಿನ ಪ್ರಕರಣ ರದ್ದುಗೊಳಿಸಿ ಜಪ್ತಿ ಮಾಡಿದ ವಾಹನಗಳನ್ನು ಬಿಡುಗಡೆಗೊಳಿಸಿ ಅಧಿಕಾರಿಗಳು ರೈತರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಅಜೆಂಡಾಗಳನ್ನು ಈಗಿನ ಬಿಜೆಪಿ ಸರ್ಕಾರ ಜಾರಿ ಮಾಡುತ್ತಿದೆ. ನೋಟು ಅಮಾನ್ಯಕರಣ, ಜಿಎಸ್‌ಟಿ ಕಾಯ್ದೆಗಳು ಕಾಂಗ್ರೆಸ್ ನ ಚಿಂತನೆಗಳಾಗಿವೆ. ಇದನ್ನು ಬಿಜೆಪಿ ತನ್ನ ಹೊಸ ಆಲೋಚನೆಗಳನ್ನು ಎಂದು ಜಾರಿಗೊಳಿಸಿದೆ. ಬಿಜೆಪಿಗೆ ಆರ್ಥಿಕ ನೀತಿಯೇ ಇಲ್ಲದಾಗಿದೆ. ವಿದ್ಯುತ್, ಹೆದ್ದಾರಿ, ರೈಲು, ಎಲ್‌ಐಸಿ, ಬ್ಯಾಂಕ್ ಹೀಗೆ ಒಂದೊಂದಾಗಿ ಗುತ್ತಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.ಈಗಾಗಲೇ ಬೆಂಗಳೂರು ವಿಮಾನ ನಿಲ್ದಾಣ ಕೆನಡಾ ಮೂಲದ ಎಂಎನ್‌ಸಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಮುಂದೊಂದು ದಿನ ದೇಶವನ್ನೇ ಗುತ್ತಿಗೆ ನೀಡುವುದರಲ್ಲಿ ಬಿಜೆಪಿ ಹಿಂಜರಿಯೊಲ್ಲ ಎಂದರು.
ರೈತರ ವಿರೋಧ ಕೃಷಿ ಕಾಯ್ದೆಗಳ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ್ದಾರೆ. ಯಾವ ರಾಜ್ಯದಲ್ಲಿ ಕೃಷಿ ಕಾಯ್ದೆ ತಿದ್ದುಪಡಿ ಮಾಡಿಲ್ಲ. ಅಂತಹದರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪನವರು ತಿದ್ದುಪಡಿ ಮಾಡಿ ರೈತರ ವಿರೋಧಿಯಾಗಿದ್ದಾರೆ. ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಸೆ.27ಕ್ಕೆ ಭಾರತ ಬಂದ್‌ಗೆ ಕರೆ ನೀಡಲಾಗಿದೆ. ಅದರ ಭಾಗವಾಗಿ ಕರ್ನಾಟಕಬಂದ್‌ಮಾಡಲಾಗುವುದು. ಇದಕ್ಕೆ ರೈತರು ಬಂದ್‌ನಲ್ಲಿ ಭಾಗವಹಿಸಬೇಕು ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ, ಭಕ್ತರಳ್ಳಿ ಭೆ„ರೇಗೌಡ, ಜೆ.ಕಾರ್ತೀಕ್, ರಾಜ್ಯ ಕಾರ್ಯದರ್ಶಿಗಳಾದ ಬಸವಂತಪ್ಪಕಾಂಬ್ಳೆ, ಹನುಮಂತಪ್ಪ ಹೊಳೆಯಾಚಿ, ಜಿಲ್ಲಾಧ್ಯಕ್ಷ ಶರಣಪ್ಪ ಮಳ್ಳಿ, ತಾಲೂಕು ಅಧ್ಯಕ್ಷ ಶಿವುಪುತ್ರಗೌಡ ನಂದಿಹಾಳ, ರೂಪಾ ಶ್ರೀನಿವಾಸ ನಾಯಕ, ಗೋಡಹಳ್ಳಿ ಬಸವರಾಜ, ಅನಿತಾ ಸಿರವಾರ, ಬಸವರಾಜ ನಾಯಕ, ಸದಾನಂದ ಮಡಿಹಾಳ, ಚೇತನ್ ಹಾಗೂ ಇನ್ನಿತರಿದ್ದರು.