Advertisement

ಅನ್ನದಾತರಿಗೆ ಬಾಡಿಗೆ ದರ “ಭಾರ’

09:23 PM Jun 28, 2021 | Team Udayavani |

ವೀರೇಶ ಮಡ್ಲೂರ

Advertisement

ಹಾವೇರಿ: ದಿನದಿಂದ ದಿನಕ್ಕೆ ಪೆಟ್ರೋಲ್‌- ಡೀಸೆಲ್‌ ಬೆಲೆ ಹೆಚ್ಚಳದ ಬಿಸಿ ಕೃಷಿ ಕ್ಷೇತ್ರಕ್ಕೂ ತಟ್ಟಿದ್ದು, ಕೃಷಿ ಯಂತ್ರೋಪಕರಣಗಳ ಬಾಡಿಗೆ ದರದಲ್ಲಿ ಗಣನೀಯ ಏರಿಕೆಯಾಗಿದೆ. ಮೊದಲೇ ಕೊರೊನಾ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ದರ ಹೆಚ್ಚಳಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೊರೊನಾ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಸಾಲಸೋಲ ಮಾಡಿ ರೈತರು ಬಿತ್ತನೆ ಬೀಜ- ಗೊಬ್ಬರ ಖರೀದಿಸುತ್ತಿದ್ದಾರೆ. ಈ ನಡುವೆ ಮೇಲಿಂದ ಮೇಲೆ ಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಳವಾಗುತ್ತಿರುವುದು ಆಧುನಿಕ ಕೃಷಿ ಕ್ಷೇತ್ರದ ಮೇಲೆ ಕರಿನೆರಳು ಬಿರುತ್ತಿದೆ. ಇಂದಿನ ಆಧುನಿಕ ಕೃಷಿ ಪದ್ಧತಿ ಸಂಪೂರ್ಣ ಯಂತ್ರೋಪಕರಣಗಳನ್ನೇ ಅವಲಂಬಿಸಿದ್ದು, ಪೆಟ್ರೋಲ್‌-ಡೀಸೆಲ್‌ ಬಳಕೆ ಸಾಮಾನ್ಯವಾಗಿದೆ. ಸದ್ಯ ಪ್ರತಿ ಲೀಟರ್‌ ಡೀಸೆಲ್‌ ಬೆಲೆ 93.71 ರೂ., ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದೆ.

ಸದ್ಯ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು, ಕೃಷಿ ಯಂತ್ರೋಪಕರಣಗಳ ಬಳಕೆ ಸಾಮಾನ್ಯವಾಗಿದೆ. ತೈಲ ಬೆಲೆಯಲ್ಲಿ ಏರಿಕೆಯಾದ ಬೆನ್ನಲ್ಲೇ ಕೃಷಿಗೆ ಉಪಯುಕ್ತವಾದ ಟ್ರ್ಯಾಕ್ಟರ್‌, ಕಟಾವು ಯಂತ್ರ, ಜೆಸಿಬಿ, ಟಂಟಂ, ಆಟೋಗಳ ಬಾಡಿಗೆ ದರ ಮಾಲೀಕರು ಸದ್ದಿಲ್ಲದೇ ಹೆಚ್ಚಿಸಿದ್ದಾರೆ. ಇದರಿಂದ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ರೈತರು ಯಂತ್ರೋಪಕರಣಗಳಿಗೆ ದುಬಾರಿ ಬೆಲೆ ತೆತ್ತು ಬಾಡಿಗೆ ಪಡೆದು ಕೃಷಿ ಚಟುವಟಿಕೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ತೈಲ ದರ ಇಳಿಕೆಗೆ ರೈತರ ಒತ್ತಾಯ: ಪೆಟ್ರೋಲ್‌- ಡೀಸೆಲ್‌ ದರ ಹೆಚ್ಚಳ ಎಲ್ಲ ಕ್ಷೇತ್ರಗಳ ಮೇಲು ಪರಿಣಾಮ ಬೀರಿದ್ದು, ಆದರೆ ಕೃಷಿ ಕ್ಷೇತ್ರ ಉಳಿದ ಕ್ಷೇತ್ರಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆ ಎದುರಿಸುತ್ತಿದೆ. ಇಂದಿನ ಆಧುಕಿನ ಕೃಷಿ ಪದ್ಧತಿ ಬಹುತೇಕ ಯಂತ್ರೋಪಕರಣಗಳನ್ನೇ ಅವಲಂಬಿಸಿದ್ದು, ದಿನದಿಂದ ದಿನಕ್ಕೆ ದರದಲ್ಲಿ ಏರಿಕೆಯಾಗುತ್ತಿರುವ ಡೀಸೆಲ್‌ ಖರೀದಿಸಿ, ಕೃಷಿ ಮಾಡುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಪೆಟ್ರೋಲ್‌-ಡೀಸೆಲ್‌ ಬೆಲೆ ತಗ್ಗಿಸುವ ಜತೆಗೆ ಇಂಧನದ ಮೇಲೆ ವಿಧಿ ಸುವ ತೆರಿಗೆ ಪ್ರಮಾಣ ಕೇಂದ್ರ-ರಾಜ್ಯ ಸರ್ಕಾರಗಳು ಕೂಡಲೇ ಕಡಿತಗೊಳಿಸಬೇಕು ಎಂಬುದು ರೈತರ ಆಗ್ರಹ.

Advertisement

ಯಂತ್ರೋಪಕರಣಗಳ ಬಾಡಿಗೆ ದರ ಏರಿಕೆ: ಸದ್ಯ ಕೊರೊನಾ ಸೋಂಕಿನ ಪರಿಣಾಮ ಲಾಕ್‌ ಡೌನ್‌ ಘೋಷಿಸಿದ್ದರಿಂದ ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ನಡುವೆ ಕೃಷಿ ಸಂಬಂಧಿತ ಯಂತ್ರೋಪಕರಣಗಳ ಬಾಡಿಗೆ ದರ ಏರಿಕೆ ಮಾಡಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಅಲ್ಲದೇ ಅನೇಕ ರೈತರು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ. ಕೃಷಿ ಸಂಬಂಧಿತ ರೋಟರ್‌ ಹೊಡೆಯಲು, ಮಣ್ಣು ಲೆವಲ್‌ ಮಾಡಲು, ರೆಂಟಿ ಹೊಡೆಯಲು, ಟ್ರಾÂಕ್ಟರ್‌ ಕೂರಿಗೆಯಿಂದ ಬಿತ್ತನೆ, ಜೆಸಿಬಿಯಿಂದ ಕಾಲುವೆ ಹೂಳು ತೆಗೆಯಲು, ಜಮೀನುಗಳಗೆ ಒಡ್ಡು ಹಾಕಲು, ಕೂಲಿಕಾರರನ್ನು ಜಮೀನುಗಳಿಗೆ ಕರೆದೊಯ್ಯುವ ಟಂಟಂ, ಆಟೋಗಳ ಬಾಡಿಗೆ ದರ ಏರಿಕೆ ಮಾಡಿದ್ದರಿಂದ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next