Advertisement

ಕಾಮರೂಪಿ ಖ್ಯಾತಿಯ ಹಿರಿಯ ಪತ್ರಕರ್ತ ಎಂ.ಎಸ್. ಪ್ರಭಾಕರ್ ವಿಧಿವಶ

03:25 PM Dec 29, 2022 | Team Udayavani |

ಬೆಂಗಳೂರು: ಕನ್ನಡ ಸಾಹಿತ್ಯ ವಲಯದಲ್ಲಿ ‘ಕಾಮರೂಪಿ’ ಎಂಬ ಕಾವ್ಯನಾಮದಿಂದ ಪರಿಚಿತರಾಗಿದ್ದ ಹಿರಿಯ ಪತ್ರಕರ್ತ, ಬರಹಗಾರ ಎಂ.ಎಸ್. ಪ್ರಭಾಕರ್ ಅವರು ಅಲ್ಪಕಾಲದ ಅಸೌಖ್ಯದಿಂದ ಕೋಲಾರದ ಕಠಾರಿಪಾಳ್ಯದ ಪೂರ್ವಜರ ನಿವಾಸದಲ್ಲಿ ಗುರುವಾರ ವಿಧಿವಶ ರಾಗಿದ್ದಾರೆ.

Advertisement

ಮೋಟನಹಳ್ಳಿ ಸೂರಪ್ಪ ಪ್ರಭಾಕರ್ ಅವರು ಕೋಲಾರದಿಂದ 12 ಕಿ.ಮೀ. ದೂರದಲ್ಲಿರುವ ಮೋಟನಹಳ್ಳಿ ಗ್ರಾಮದಲ್ಲಿ 1936 ರಲ್ಲಿ ಜನಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಗಳಿಸಿದ ನಂತರ ಅವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯಕ್ಕೆ ತೆರಳುವ ಮೊದಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಗುವಾಹಟಿ ವಿಶ್ವವಿದ್ಯಾನಿಲಯವು ಉಗ್ರರ ಚಟುವಟಿಕೆಗಳ ಕೇಂದ್ರವಾಗಿದ್ದರಿಂದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಬಂಧನವಾಗುವುದನ್ನು ತಪ್ಪಿಸಲು ಪ್ರಭಾಕರ್ ಗುವಾಹಟಿಯಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದರು.ನಂತರ, ಅವರು ಮುಂಬೈನ ಎಕನಾಮಿಕ್ ಮತ್ತು ಪೊಲಿಟಿಕಲ್ ವೀಕ್ಲಿಯನ್ನು ಸೇರಿಕೊಂಡು ಪತ್ರಕರ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಏಳು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ ನಂತರ, ಅವರನ್ನು 1983 ರಲ್ಲಿ ‘ದಿ ಹಿಂದೂ’ ಪತ್ರಿಕೆಯು ಅಸ್ಸಾಂನ ವಿಶೇಷ ವರದಿಗಾರರನ್ನಾಗಿ ನೇಮಿಸಿತ್ತು.

ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆಗಾಗಿ 2018 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಸಣ್ಣ ಕಾದಂಬರಿಗಳು ಕುದುರೆ ಮೊಟ್ಟೆ, ಅಂಜಿಕಿನ್ಯಾತಕಯ್ಯ ಅವರ ಪ್ರಮುಖ ಸಾಹಿತ್ಯ ಕೃತಿಗಳಾಗಿವೆ.

ಎಂ.ಎಸ್. ಪ್ರಭಾಕರ್ ಅವರ ಆಸೆಯಂತೆ ದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next