ಬೆಂಗಳೂರು: ಹೆಸರಾಂತ ಛಾಯಾಗ್ರಾಹಕ ಡಿ.ಸಿ.ನಾಗೇಶ್ (66) ಅನಾರೋಗ್ಯ ಹಿನ್ನೆಲೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.
‘ದಶಕಗಳ ಕಾಲ ಸಿನಿಮಾ ಛಾಯಾಗ್ರಹಣ ವೃತ್ತಿಯಲ್ಲಿ ತೊಡಗಿಕೊಂಡಿದ್ದ ನಾಗೇಶ್ ಅವರು ಸಿನಿಮಾ ಚರಿತ್ರೆಯ ಹಲವು ಕ್ಷಣಗಳನ್ನು ತಮ್ಮ ಕ್ಯಾಮರಾದ ಮೂಲಕ ಸೆರೆ ಹಿಡಿದಿದ್ದರು.
ಕನ್ನಡ ಚಿತ್ರರಂಗದ ಹಿರಿಕಿರಿಯ ನಟರ ಜತೆಗೆ ನಂಟು ಹೊಂದಿದ್ದ ನಾಗೇಶ್ ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕ ಸಂಪರ್ಕದ ಕೊಂಡಿಯಾಗಿಯೂ ಕೆಲಸ ಮಾಡಿದ್ದಾರೆ. ಉದಯವಾಣಿ, ರೂಪತಾರ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅವರ ಫೋಟೋಗಳು ಪ್ರಕಟವಾಗಿದ್ದವು.
ನಾಗೇಶ್ ನಿಧನಕ್ಕೆ ಸಿಎಂ ಬೊಮ್ಮಾಯಿ,ಸಂಸದೆ ಸುಮಲತಾ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಗೇಶ್ ಅವರ ಅಗಲುವಿಕೆಯಿಂದ ಪ್ರತಿಭಾವಂತ ಫೋಟೋಗ್ರಾಫರ್ ಒಬ್ಬರನ್ನು ಕಳೆದುಕೊಂಡಿ ದ್ದೇವೆ. ಸಿನಿಮಾ ಛಾಯಾಗ್ರಹಣ ಕ್ಷೇತ್ರದಲ್ಲಿ ಅವರೊಂದು ಮಾದರಿ ಆಗಿದ್ದರು ಎಂದು ಸಚಿವ ಡಾ.ಅಶ್ವತ್ಥನಾರಾಯಣ ಸ್ಮರಸಿದ್ದಾರೆ.
ನಾಗೇಶ್ ಅವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ ನೀಡಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.