Advertisement

Jayarama Acharya: ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

08:49 PM Oct 21, 2024 | Team Udayavani |

ಬಂಟ್ವಾಳ: ಯಕ್ಷಗಾನ ಪ್ರದರ್ಶನ ನೀಡುವ ದೃಷ್ಟಿಯಿಂದ ಬೆಂಗಳೂರಿಗೆ ತೆರಳಿದ್ದ ಯಕ್ಷಗಾನದ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಅ. 21ರಂದು ಹೃದಯಾಘಾತದಿಂದ ಬೆಂಗಳೂರಿನ ಆರ್‌.ಕೆ. ಭಟ್ಟರ ಮನೆಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಪುತ್ರಿ, ಪುತ್ರ ಹಾಗೂ ಅಪಾರ ಅಭಿಮಾನಿ ವರ್ಗವನ್ನು ಅಗಲಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಜತೆ ಬೆಂಗಳೂರಿಗೆ ತೆರಳಿದ್ದ ಅವರಿಗೆ ಸೋಮವಾರ ಮುಂಜಾನೆ 4ರ ಸುಮಾರಿಗೆ ಹೃದಯಸ್ತಂಭನಗೊಂಡಿದ್ದು, ಸಹಕಲಾವಿದರು ತತ್‌ಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದು, ಅದಾಗಲೇ ಅವರು ಇಹಲೋಹ ತ್ಯಜಿಸಿದ್ದರು. ಬಳಿಕ ಅವರ ಮೃತದೇಹವನ್ನು ಬೆಂಗಳೂರಿನಿಂದ ಬಂಟ್ವಾಳದ ಬೈಪಾಸ್‌ ರಸ್ತೆಯ ಸ್ವಗೃಹಕ್ಕೆ ತಂದು ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ವಿವಿಧ ಕ್ಷೇತ್ರದ ಗಣ್ಯರು, ಯಕ್ಷಗಾನ ಮೇಳಗಳ ಪ್ರಮುಖರು, ಕಲಾವಿದರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ಅವರು ತಂದೆಯ ಪ್ರಭಾವದಿಂದ ಯಕ್ಷಗಾನದ ಕುರಿತು ಆಕರ್ಷಿತರಾಗಿದ್ದು, ತಂದೆ ಬಂಟ್ವಾಳ ಗಣಪತಿ ಆಚಾರ್ಯರು ಚಿನ್ನದ ಕುಲಕಸುಬಿನ ಜತೆಗೆ ವಿವಿಧ ಮೇಳಗಳಲ್ಲಿ ಹಾಸ್ಯ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದರು. ತಾಳಮದ್ದಳೆಗಳನ್ನು ನೋಡುತ್ತಾ ಬೆಳೆದಿದ್ದ ಜಯರಾಮ ಆಚಾರ್ಯರು ತಂದೆಯವರ ಜತೆ ಯಕ್ಷಗಾನ ಪ್ರದರ್ಶನಗಳಿಗೆ ಹೋಗಿ ಆಸಕ್ತಿ ಬೆಳೆಸಿಕೊಂಡಿದ್ದರು. ನಾಟ್ಯಾಭ್ಯಾಸ ಮಾಡುವ ಮೊದಲೇ ಒಂದಷ್ಟು ಮೇಳಗಳಲ್ಲಿ ಅವರು ವೇಷ ಧರಿಸಿದ್ದರು.

ಹಿರಿಯಡ್ಕ ಮೇಳದಲ್ಲಿ ಸೇವೆ ಸಲ್ಲಿಸಬೇಕಿತ್ತು
ಮುಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಾ ಕಲಾಕೇಂದ್ರದಲ್ಲಿ ಯಕ್ಷಗುರು ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯವನ್ನು ಕಲಿತಿದ್ದು, ಆ ಸಂದರ್ಭದಲ್ಲಿ ಈಗಿನ ಹಲವು ಪ್ರಸಿದ್ಧ ಕಲಾವಿದರು ಜಯರಾಮ ಆಚಾರ್ಯರ ಸಹಪಾಠಿಗಳಾಗಿದ್ದರು. ಅಮ್ಟಾಡಿ, ಸೊರ್ನಾಡು, ಕಟೀಲು, ಪುತ್ತೂರು, ಸುಂಕದಕಟ್ಟೆ, ಕದ್ರಿ, ಕುಂಬ್ಳೆ, ಸುರತ್ಕಲ್‌, ಎಡನೀರು, ಹೊಸನಗರ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಕಳೆದ ವರ್ಷದವರೆಗೆ ಹನುಮಗಿರಿ ಮೇಳದಲ್ಲಿದ್ದು, ಈ ವರ್ಷದಿಂದ ಹಿರಿಯಡ್ಕ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸಬೇಕಿತ್ತು.

ಸಿನೆಮಾಗಳಲ್ಲೂ ಬಣ್ಣ ಹಚ್ಚಿದ್ದರು
ಸರಿಸುಮಾರು 5 ದಶಕಗಳ ಕಾಲ ತಿರುಗಾಟ ನಡೆಸಿದ್ದ ಅವರು ತನ್ನ ಮುಖಭಾವ ಅಭಿನಯದ ಮೂಲಕವೇ ಪ್ರೇಕ್ಷಕರನ್ನು ನಕ್ಕು ನಗಿಸುತ್ತಿದ್ದರು. ವಿಜಯ, ಮಕರಂದ, ದಾರುಕ, ಬಾಹುಕ, ವಿಪ್ರ, ಮಾಲಿನಿ ದೂತ, ಕೈಲಾಸ ಶಾಸ್ತ್ರಿ, ಜಗಜಟ್ಟಿ, ರಕ್ಕಸದೂತ, ನಾರದ ಮೊದಲಾದ ಹಾಸ್ಯ ಪಾತ್ರಗಳ ಜತೆಗೆ ಒಂದಷ್ಟು ಗಂಭೀರ ಪಾತ್ರಗಳಿಗೂ ಜೀವ ತುಂಬಿದ್ದರು. ಯಕ್ಷಗಾನದ ಜತೆಗೆ ನಾಟಕ, ಸಿನೆಮಾಗಳಲ್ಲೂ ಬಣ್ಣ ಹಚ್ಚಿದ್ದರು.

Advertisement

ಮರಣೋತ್ತರ ಪುಳಿಂಚ ಪ್ರಶಸ್ತಿ
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ದೇಶ-ವಿದೇಶಗಳಲ್ಲಿ ಹಲವು ಪ್ರಶಸ್ತಿ, ಸಮ್ಮಾನಗಳು ಅವರಿಗೆ ಸಂದಿವೆ. ಕೆಲವು ದಿನಗಳ ಹಿಂದೆಯಷ್ಟೇ ಅವರಿಗೆ ಕಡಬದ್ವಯರ ಸಂಸ್ಕರಣ ಪ್ರಶಸ್ತಿ ಘೋಷಣೆಯಾಗಿದ್ದು, ಅ. 27ರಂದು ಮಂಗಳೂರಿನ ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಬೇಕಿತ್ತು. ಮುಂದಿನ ವರ್ಷ ಅವರಿಗೆ ಮರಣೋತ್ತರ ಪುಳಿಂಚ ಪ್ರಶಸ್ತಿ ನೀಡಲಾಗುವುದೆಂದು ಶ್ರೀಧರ ಶೆಟ್ಟಿ ಪುಳಿಂಚ ತಿಳಿಸಿದ್ದಾರೆ.

ಗಣ್ಯರ ಸಂತಾಪ
ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ದ.ಕ. ಸಂಸದ ಕ್ಯಾ| ಬ್ರಿಜೇಶ್‌ ಚೌಟ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮೃತರ ಅಂತಿಮ ದರ್ಶನ ಪಡೆದು ಮನೆ ಮಂದಿಗೆ ಸಾಂತ್ವನ ಹೇಳಿದರು. ಶಾಸಕರಾದ ವಿ. ಸುನಿಲ್‌ಕುಮಾರ್‌, ಹರೀಶ್‌ ಪೂಂಜ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಮೊದಲಾದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌, ಉಡುಪಿ ಯಕ್ಷಗಾನ ಕಲಾರಂಗ ಸೇರಿದಂತೆ ಹಲವು ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.

ಯಕ್ಷಗಾನ ಪ್ರದರ್ಶನದ ಗೌರವ
ಅ. 21ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯವರಿಂದ ಬೆಂಗಳೂರಿನ ಬಸವನಗುಡಿ ಪುತ್ತಿಗೆ ಮಠದಲ್ಲಿ ಯಕ್ಷಗಾನ ಪ್ರದರ್ಶನ ಆಯೋಜನೆಗೊಂಡಿದ್ದು, ಜಯರಾಮ ಆಚಾರ್ಯರ ನಿಧನದಿಂದ ಪ್ರದರ್ಶನ ರದ್ದುಗೊಂಡಿತು. ಆದರೆ ಯಕ್ಷಗಾನ ಮಂಡಳಿಯವರಿಂದ ಬೆಂಗಳೂರಿನ ಅಭಿಮಾನಿಗಳು ಸೇರುವಿಕೆಯಲ್ಲಿ ಅವರ ಆತ್ಮಕ್ಕೆ ಮೋಕ್ಷ ದೊರಕಲಿ ಎಂದು ಅವರು ನಿಧನ ಹೊಂದಿದ ಬೆಂಗಳೂರಿನ ಆರ್‌.ಕೆ. ಭಟ್ಟರ ಮನೆಯಲ್ಲಿ ‘ನರಕಾಸುರ ಮೋಕ್ಷ’ ಪೌರಣಿಕ ಯಕ್ಷಗಾನ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next