“ದನಕಾಯೋನು’ ಚಿತ್ರದ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ನಿರ್ದೇಶಕ ಯೋಗರಾಜ ಭಟ್ ನಿರ್ಧರಿಸಿದ್ದಾರೆ. ಭಟ್ಟರು, ನಿರ್ಮಾಪಕರ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಕಾರಣವಾಗಿರೋದು ಸಂಭಾವನೆ ವಿಚಾರ.
ಹೌದು, ದುನಿಯಾ ವಿಜಯ್ ನಾಯಕರಾಗಿರುವ “ದನಕಾಯೋನು’ ಚಿತ್ರವನ್ನು ಯೋಗರಾಜ ಭಟ್ಟರು ನಿರ್ದೇಶಿಸಿದ್ದಾರೆ. ಈಗಾಗಲೇ ಆ ಚಿತ್ರ ಬಿಡುಗಡೆಯಾಗಿ ವರ್ಷವಾಗುತ್ತಾ ಬಂದಿದೆ. ಆರಂಭದಿಂದಲೂ “ದನಕಾಯೋನು’ ಚಿತ್ರತಂಡದಲ್ಲಿ ಸಣ್ಣಪುಟ್ಟ ಕಿರಿಕ್‌ಗಳ ಸುದ್ದಿ ಕೇಳಿಬರುತ್ತಲೇ ಇತ್ತು. ಈಗ ಚಿತ್ರ ಬಿಡುಗಡೆಯಾದ ಮೇಲೆ ವಿವಾದ ಭುಗಿಲೆದ್ದಿದೆ.
ನಿರ್ದೇಶಕ ಯೋಗರಾಜ ಭಟ್ ಅವರು “ದನಕಾಯೋನು’ ಚಿತ್ರಕ್ಕಾಗಿ ತಮಗೆ ಹಾಗೂ ಅನೇಕ ತಂತ್ರಜ್ಞರಿಗೆ ಕೊಡಬೇಕಾದ ಸಂಭಾವನೆಯನ್ನು ನಿರ್ಮಾಪಕರು ಇನ್ನೂ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಿಲೇರಲಿದ್ದಾರೆ. ಇಂದು ಭಟ್ಟರು ಕೋರ್ಟ್‌ಗೆ ದಾವೆ ಹೂಡಲಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರುವ ಮುನ್ನ ಭಟ್ಟರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದು, ಈ ಬಗ್ಗೆ ಕನಕಪುರ ಶ್ರೀನಿವಾಸ್ ಅವರನ್ನು ಕರೆಸಿ ಸಂಘ ಮಾತನಾಡಿದೆ. ಆಗ, ತಮ್ಮ ನಿರ್ಮಾಣದ “ಭರ್ಜರಿ’ ಚಿತ್ರದ ಬಿಡುಗಡೆ ಸಮಯದಲ್ಲಿ ಭಟ್ಟರ ಸಂಭಾವನೆಯನ್ನು ನೀಡುವುದಾಗಿ ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
ಆದರೆ, ಈಗ ಶ್ರೀನಿವಾಸ್ ಅವರ “ಭರ್ಜರಿ’ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿದ್ದು, ಇದೇ 15 ರಂದು ಚಿತ್ರ ತೆರೆಕಾಣುತ್ತಿದೆ. ಆದರೆ, ನಿರ್ಮಾಪಕರು, ಭಟ್ಟರ ಹಣ ಕೊಡುವ ಯಾವುದೇ ಲಕ್ಷಣ ಕಾಣದೇ ಇದ್ದ ಕಾರಣ ಈಗ ಪ್ರಕರಣ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ಬಂದಿದೆ.
“ಈಗಾಗಲೇ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘದಲ್ಲಿ ದೂರು ನೀಡಿದಾಗ, ಶ್ರೀನಿವಾಸ್ ಅವರು “ಭರ್ಜರಿ’ ಚಿತ್ರ ಬಿಡುಗಡೆ ಸಮಯದಲ್ಲಿ ಸಂಭಾವನೆಯ ಹಣ ನೀಡುವುದಾಗಿ ಹೇಳಿದ್ದರು. ಆದರೆ, ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅವರು ಹಣ ಕೊಡುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅದು ನಾನು ದುಡಿದ ಹಣ. ಅದಕ್ಕಾಗಿ ಅನಿವಾರ್ಯವಾಗಿ ಕೋರ್ಟ್ ಮೆಟ್ಟಿಲೇರಬೇಕಾಗಿದೆ’ ಎನ್ನುವುದು ಯೋಗರಾಜ ಭಟ್ ಮಾತು.