ಹುಬ್ಬಳ್ಳಿ: ಸರ್ವ ಶಿಕ್ಷಣ ಅಭಿಯಾನ/ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ರಾಜ್ಯದ ಎಲ್ಲ 204 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ/ಕ್ಷೇತ್ರ ಸಂಪನ್ಮೂಲ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ವೇತನ ಸಮಸ್ಯೆ ಬಗೆಹರಿಸಬೇಕು ಹಾಗೂ ಸೇವಾಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್‌ಗಳ ನೌಕರರ ಸಂಘದವರು ಮುಖ್ಯಮಂತ್ರಿಗೆ ಮನವಿ
ಸಲ್ಲಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ರವಿವಾರ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದ ಸಂಘ ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಜ್ಯೂನಿಯರ್ ಪ್ರೊಗ್ರಾಮರ್, ಡಾಟಾ ಎಂಟ್ರಿ ಆಪರೇಟರ್, ಬ್ಲಾಕ್ ಲೆಕ್ಕ ಸಹಾಯಕರು, ವಾಹನ ಚಾಲಕರು ಹಾಗೂ ಡಿ ಗ್ರುಪ್ ಸಿಬ್ಬಂದಿ ವೇತನವು ಎಲ್ಲಾ ಜಿಲ್ಲೆಗಳಲ್ಲಿ ಒಂದೇ ತೆರನಾಗಿಲ್ಲ. ಆದರೆ ಸಿಬ್ಬಂದಿ ಮಾತ್ರ ಎಲ್ಲ ಬ್ಲಾಕ್‌ಗಳಲ್ಲಿ ಒಂದೇ ಬಗೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರಕಾರದ ನಿಯಮಾನುಸಾರ ಸಮಾನ ಕೆಲಸಕ್ಕೆ ಸಮಾನ ವೇತನದ ಆದೇಶವು ಹೊರಗುತ್ತಿಗೆ ಸಿಬ್ಬಂದಿಗೆ ಅನ್ವಯಿಸುತ್ತಿಲ್ಲ.
ಸರಕಾರ ಎಲ್ಲ ಜಿಲ್ಲೆಗಳಲ್ಲಿ ಕೂಡ ಒಂದೇ ತೆರನಾದ ವೇತನ ನೀಡಲು ಆದೇಶ ಮಾಡಿ ಕ್ರಮ ಕೈಗೊಳ್ಳಬೇಕು. ಜಿಎಸ್‌ಟಿ ವಿನಾಯಿತಿ ನೀಡಬೇಕು. ವೇತನ ಹೆಚ್ಚಳ ಮಾಡಬೇಕು. ಎನ್‌ಜಿಒ ಸಂಸ್ಥೆಗಳ ಮೂಲಕ ಹೊರಗುತ್ತಿಗೆ ನೇಮಕಾತಿ ಪದ್ಧತಿ ರದ್ದುಗೊಳಿಸಿ ನೇರ ಗುತ್ತಿಗೆ ಡಿಪಿಇಪಿ ಸಿಬ್ಬಂದಿ ಹಾಗೆ ಇಲ್ಲವೆ ನೇರವಾಗಿ ಸಿಬ್ಬಂದಿ ಖಾತೆಗೆ ಜಿಲ್ಲಾ ಅಥವಾ ತಾಲೂಕ ಕಚೇರಿಯಿಂದ ವೇತನ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಿಎಂಗೆ ವಿವಿಧ ಸಂಘ-ಸಂಸ್ಥೆಯವರು ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು ಹಾಗೂ ಕೆಲವರು ತಮ್ಮ ವೈಯಕ್ತಿಕ ಕಾರ್ಯಗಳನ್ನು ಬಗೆಹರಿಸಿ ಕೊಡಬೇಕೆಂದು ಮನವಿ ಮಾಡಿದರು.