ಬೆಂಗಳೂರು: ಕಾಂಗ್ರೆಸ್ ನಾಯಕರು ತಮ್ಮ ಹಣದಲ್ಲಿ ಜನರಿಗೆ ಸಹಾಯ ಮಾಡಲು ಹೋದರೆ ಪೊಲೀಸ್ ಅಧಿಕಾರಿಗಳು ಈ ಬೋರ್ಡ್ ಗಳನ್ನು ಕಿತ್ತು ಹಾಕಿಸಿದ್ದಾರೆ. ಪಾಪ ಆ ಪೊಲೀಸ್ ಅವರಿಗೆ ನಮ್ಮ ಸಹವಾಸ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನ ಮಹದೇವಪುರ ಹಾಗೂ ಕೆ.ಆರ್. ಪುರ ವಿಧಾನಸಭೆ ಕ್ಷೇತ್ರದಲ್ಲಿ ರವಿವಾರ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ನೆರವು ವಿತರಣೆ ಕಾರ್ಯಕ್ರಮ ನಿಲ್ಲಿಸಿದರೆ ಜನರನ್ನು ಕರೆದುಕೊಂಡು ಬಂದು ನಿಮ್ಮ ಪೊಲೀಸ್ ಠಾಣೆ ಮುಂದೆ ಧರಣಿ ಮಾಡುತ್ತೇನೆ ಎಂದು ಹೇಳಿದೆ. ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಆದರೆ ನಿಮ್ಮ ಕೇಸ್ ಗಳಿಗೆ ಹೆದರುವ ಮಕ್ಕಳು ಕಾಂಗ್ರೆಸ್ ನವರಲ್ಲ. ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ. ಅವರು ತಮ್ಮ ಸ್ಟಾರ್ ತೆಗೆದು ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಲಿ ಎಂದು ಕಿಡಿಕಾರಿದರು.
ನಿಮ್ಮ ಕೈಯಲ್ಲಿ ಬಡವರಿಗೆ ನೆರವಾಗಲು ಸಾಧ್ಯವಾದರೆ ನೆರವಾಗಿ. ಅದನ್ನು ಬಿಟ್ಟು ಕಷ್ಟದ ಸಮಯದಲ್ಲಿ ಬಡವರಿಗೆ ನೆರವಾಗುವುದನ್ನು ತಡೆಯುತ್ತೀರಲ್ಲ ನೀವು ಮನುಷ್ಯರಾ ಅಥವಾ ದನಗಳಾ? ಮಂತ್ರಿ, ಶಾಸಕ ಹೇಳಿದ ಮಾತ್ರಕ್ಕೆ ಕಾಂಗ್ರೆಸ್ ಬಾವುಟ ಕಿತ್ತು ಹಾಕಲು ಬಂದಿದ್ದೀರಾ. ಕಾಂಗ್ರೆಸ್ ಬಾವುಟ ಕಿತ್ತು ಹಾಕಲು ಅವರ ಹಣೆಯಲ್ಲಿ ಬರೆದಿಲ್ಲ ಎಂದು ಡಿಕೆಶಿ ಗುಡುಗಿದರು.
ಇದನ್ನೂ ಓದಿ:ತೈಲೋತ್ಪನ್ನ ಮಾರಾಟದಿಂದ ಸಂಗ್ರಹವಾದ ಹಣ ಅಭಿವೃದ್ಧಿ ಕಾರ್ಯಕ್ಕೆ ಬಳಕೆ : ಧರ್ಮೇಂದ್ರ ಪ್ರಧಾನ್
ಸರ್ಕಾರದ ಕಿಟ್ ಗೆ ತಮ್ಮ ಫೋಟೋ ಹಾಕಿಕೊಂಡು ಬಿಜೆಪಿ ನಾಯಕರು ಹಂಚುವಾಗ ಈ ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಮಲಗಿದ್ದರಾ? ಮಾನ ಮರ್ಯಾದೆ ಇದ್ದರೆ ಬಡವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ನಿಮ್ಮ ಕಾನ್ಸ್ಟೇಬಲ್ ಗಳಿಗೆ ನೀವು ಸಹಾಯ ಮಾಡಿದ್ದೀರಾ? ಜನರಿಗೆ ನಮ್ಮ ನಾಯಕರು ಸಹಾಯ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಲಂಚ, ಸಂಬಳ ಇಲ್ಲ ಆದರೂ ತಮ್ಮ ಹಣದಲ್ಲಿ ನೀಡುತ್ತಿದ್ದಾರೆ ಎಂದರು.
ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ ಹಣದಲ್ಲಿ ಬಡವರಿಗೆ ಆಹಾರ ಕಿಟ್, ಧನಸಹಾಯ ಮಾಡುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.