ಮುಳ್ಳು ಹಾದಿ ಮಳೆಯ ನೀರಿನ ಜತೆಗೆ ಅಂದು ಆ ದಿನಗಳು ನಿಮಗೆ ನೆನಪಿದೆಯೇ ಇರಲೇ ಬೇಕಲ್ಲವೇ ಆ ತುಂಟಾಟ, ಹುಸಿ ಮುನಿಸು, ಮಂದಹಾಸದೊಂದಿಗೆ ಕೊಂಚ ಭಯವೂ ಇದ್ದೇ ಇತ್ತು. ಬೆಳ್ಳಂಬೆಳಗ್ಗೆ ಎದ್ದು ಹೊರಟು ಮುಸ್ಸಂಜೆಯವರೆಗೂ ಅಲ್ಲೇ ಇರಬೇಕು ಎನ್ನುವುದೊಂದಾದರೆ ಅಲ್ಲಿ ಸಿಗುವ ಕೆಲ ಕ್ಷಣದ ಖುಷಿ ಮಾತ್ರ ಇಂದಿಗೂ ಹಾಗೆ ಇದೆ. ಹೌದು ಅದೇ ಕಾಲೇಜು ದಿನಗಳು ಮರೆಯಲಾಗದ ನೆನಪುಗಳ ಹೊತ್ತ ಎನ್ನ ಭಂಡಾರ.
ಎಂದು ನೆನಪಾಗುವ ಆ ದಿನಗಳು ಇಂದೇಕೆ ಕಾಡುತಿವೆ, ಅದೇ ಅಲ್ಲವೇ ನೆನಪೆಂದರೆ ಆ ಗೇಟೊಳಗೆ ಪ್ರವೇಶಿಸಿದಂತೆ ಏನೋ ಉಲ್ಲಾಸ, ಜತೆಗೆ ಕೊಂಚ ಪುಳಕ, ತರಗತಿ ಆರಂಭವೇನೋ ಆುತು ಅಷ್ಟೇ… ಅಲ್ಲೇ ನೋಡಿ ಕೆಲವೊಂದು ಆಟಗಳು ಇನ್ನೂ ನಮ್ಮನ್ನು ಮನಸೂರೆಗೊಳಿಸುವುದು, ಒಂದೆಡೆ ಬಾಯ್ಸ್ ಇನ್ನೊಂದಡೆ ಗರ್ಲ್ಸ್ ಕರಿಬೋರ್ಡ್ ಕಡೆಗೆ ತಿರುಗಿದ ಶಿಕ್ಷಕಕಿಗೆ ತಿಳಿಯದೆ ಮಾಡುವ ಕಿತಾಪತಿ, ಸಿಕ್ಕಿ ಬಿದ್ದಾಗ ಪೆಚ್ಚು ಮೋರೆ ಹಾಕಿದ ಆ ಕ್ಷಣ, ನೋಡಿ ಮುಗುಳ್ನಗುವ ಕೆಲವು ಮುಖಗಳು, ಕನ್ನೋಟದಿ ಮೂಡಿದ ಕೆಲವು ಪ್ರೀತಿಗಳು, ಆ ಮಧುರ ಸ್ನೇಹವೂ ಒಂದಲ್ಲ ಎರಡಲ್ಲ ಹೀಗೆ ಅನೇಕ ನೆನಪುಗಳನ್ನು ಈ ಸಮಯದಿ ಬಿಚ್ಚಿಡಬೇಕೆನಿಸಿದೆ.
ಇಂದು ಕಣ್ಣಿಗೆ ಕಾಣದ ಜೀವಿಯೊಂದು ಎಲ್ಲರನ್ನು ಬಂಧಿಸಿದೆಯಾದರು ನಿಮ್ಮಲ್ಲಿನ ನೆನಪುಗಳನ್ನಲ್ಲ, ಕಳೆದ ಸಿಹಿ ಕಹಿ ಕ್ಷಣಗಳನ್ನು ಮತ್ತೇ ನೆನಪಿಸಿದೆ ಈ ಸಮಯ. ಕತೆಗಳನ್ನು ಓದಿದಷ್ಟು ಮುಗಿಯದು ಆದರೆ ಕಾಲೇಜು ದಿನಗಳು ಈಗ ಒಂದು ಕತೆಯಂತಾದರು ನಿಜವಾದ ಬದುಕಿನ ಅನುಭವ ಅದೆಷ್ಟು ಸುಂದರವಾಗಿತ್ತು ಎನ್ನುವುದನ್ನು ತಿಳಿಸಿಕೊಡುತ್ತವೆ. ದಿನಬೆಳಗೆದ್ದು ಒಂದೇ ಬಣ್ಣದ ಸಮವಸ್ತ್ರ ಧರಿಸಿ ಒಂದು ಮೈಲು ದೂರು ಕಾಲ್ನಡಿಗೆಯಲ್ಲಿ ನಡೆದು ಸಾಗಿದ ನೆನಪು, ಅಲ್ಲೂ ಸಣ್ಣ ಪುಟ್ಟ ತರ್ಲೆಗಳು ಈಗಲು ಅದೆಷ್ಟು ಹಿತ.
ಮರಗಿಡಗಳ, ಪೊದೆಯಡಿಯಲಿ ಅಡಗಿ ಗೆಳೆತಿಯನ್ನು ಹೆದರಿಸಿ ನಾವು ಖುಷಿಪಟ್ಟ ಆ ಕ್ಷಣ, ಆ ದಿನ ಮುನಿಸಿಕೊಂಡ ಆ ಮನಸು ಎಂದೂ ಮಾತನಾಡೆನು ಎಂದಾಗ ಮನಕರಗಿಸಲೆತ್ನಿಸುವ ಸುಳ್ಳೆ ಪ್ರಯತ್ನ, ಮತ್ತದೇ ಕೀಟಲೆ ಅರೆರೇ ಏನಿದೂ ಆ ದಿನದ ನೆನಪುಗಳು ಇಷ್ಟೊಂದು ಹಿತವನ್ನೀಯುತ್ತಿವೆ.
ಅಂದು ತಿಳಿದಿಲ್ಲ ಇನ್ನೆಂದಿಗೂ ತಿಳಿಯದ ನಿಷ್ಕಲ್ಮಶ ಸ್ನೇಹವದು. ಮತ್ತೂಮ್ಮೆ ನಾವೆಲ್ಲ ಕೂಡಬೆಕೆನಿಸಿದೆ ಆದರೆ ಅದು ಸಾಧ್ಯವೇ? ಇಲ್ಲವೆನಿಸಿದಾಗ ಕಂಬನಿಯೊಂದು ಮುತ್ತಿಕ್ಕಿತು ಗಲ್ಲವ. ಅರೇ ಏನಿದು ಯಾಕೀ ಕಂಬನಿ ಎಂದಾಗ ಗೋಚರಿಸಿದ್ದು ಕೇವಲ ನೆನಪಲ್ಲ ನಾವು ಕಳೆದ ಬದುಕಿನ ಹಾದಿ, ಅಂದು ನಾವು ಹೇಗಿದ್ದೆವೊ ಅದೇ ಈಗ ನಾವಿರುವ ಪರಿಸ್ಥಿತಿ ಎಂದಿಗೂ ಅಂದಿನ ಮಧುರ ಕ್ಷಣಗಳನ್ನು ಮರುಕಳಿಸದಂತೆ ಮಾಡಿದೆ.
ಬಣ್ಣದ ಬದುಕಿನ ಬಂಡಿಯಲ್ಲಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮತ್ತು ನಮ್ಮಲ್ಲಿನ ಪ್ರತಿಭೆಗಳನ್ನು ಸಾಬಿತುಪಡಿಸುವ ಒಂದೇ ಒಂದು ವೇದಿಕೆ ಅದಾಗಿತ್ತು. ಜತೆಗೆ ನಮ್ಮನ್ನು ನಾವು ಕಂಡುಕೊಳ್ಳುವ ಸ್ಥಳವೂ ಅದಾಗಿತ್ತು.
ಆದೆ ಇಂದಿನ ಬಣ್ಣದ ಬದುಕಿಗೂ ಅಂದಿನ ಬದುಕಿಗೂ ಅಜಗಜಾಂತರ ವ್ಯತ್ಯಾಸವಿದೆ ಆದರೆ ಬಣ್ಣದೊಂದಿಗೆ ನಟಿಸುವ ಈ ಬಣ್ಣದ ಬದುಕು ಮಾತ್ರ ಇನ್ನೂ ಕೂಡ ಕಳೆದ ನೆನಪುಗಳನ್ನು ನೆನೆಯುತ್ತಾ ಮುಂದುವರಿಯುತ್ತಿದೆ.
– ವಿಜಿತಾ ಅಮೀನ್