ಕಲಬುರಗಿ: ದೇವರ ಸ್ಮರಣೆ ಮಾಡುವುದರಿಂದ ಸಕಾರತ್ಮಕ ಮನೋಭಾವ ಉಂಟಾಗಿ ಸತ್ಯದ ಕಡೆಗೆ, ಜೀವನದ ಸಂತೋಷದ ಕಡೆಗೆ ಕೊಂಡೋಯ್ಯುತ್ತದೆ ಎಂದು ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿನ ಐವಾನ್‌ಶಾಹೀ ನಗರದಲ್ಲಿರುವ ಗಣೇಶ ಮಂದಿರದ ಆವರಣದಲ್ಲಿ ಇರುಮುಡಿ ಪೂಜೆ ಹಾಗೂ ಲಕ್ಷ್ಮೀದೀಪೋತ್ಸವ ಕಾರ್ಯಕ್ರಮದಲ್ಲಿ ಗುರುಸ್ವಾಮಿ ಮತ್ತು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜಗೋಪಾಲರೆಡ್ಡಿ ಮುದಿರಾಜ್ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ, ಸನ್ಮಾನಿಸಿ ಅವರು ಮಾತನಾಡಿದರು. ಸಕಾರಾತ್ಮಕ ಧೋರಣೆ ಮತ್ತು ಮನಸ್ಥಿತಿಯಿಂದ ಸಮಾಜದಲ್ಲಿ ಉತ್ತಮ ಕಾರ್ಯ ಮಾಡಬಹುದು. ಪೂಜೆಗಳು ಹಾಗೂ ಗುರುವಿನ ಧ್ಯಾನ ಮಾಡುವುದರಿಂದ ಅಂತಹದೊಂದು ಶಕ್ತಿ ನಮಗೆ ಸಿಗುತ್ತದೆ ಎಂದು ಹೇಳಿದರು. ಧರ್ಮ ಮತ್ತು ಆಚರಣೆಗಳಲ್ಲಿ ಹಲವು ಭಿನ್ನ ಅಭಿಪ್ರಾಯಗಳು ಇರುವುದು ಸಹಜ. ಆದರೆ, ಅದನ್ನು ಮನುಷ್ಯರಾದ ನಾವುಗಳು ಅರ್ಥ ಮಾಡಿಕೊಂಡು ಹೊಂದಿಕೊಂಡು ಸಮಾಜದ ಶಾಂತಿ ಮತ್ತು ಸೌಖ್ಯಕ್ಕಾಗಿ ಕೆಲವನ್ನು ತೊರೆಯುವುದು ಒಳ್ಳೆಯದು ಎಂದರು. ಗುರು ಶಂಬಯ್ಯ ಸ್ವಾಮಿ, ಗುರುಸ್ವಾಮಿಗಳಾದ ವಿಜಯಕುಮಾರ ದೇಶಮುಖ ಮಾತನಾಡಿ, ಪೂಜೆಯ ಉದ್ದೇಶಗಳು ಹಾಗೂ ಇರುಮುಡಿ ಧರಿಸುವುದರಿಂದ ಕಂಡುಕೊಂಡಿರುವ ಅನುಭವಗಳನ್ನು ಹಂಚಿಕೊಂಡದರು. ಅಫಜಪುರದ ವಿಶ್ವರಾಧ್ಯ ಮೇಳೇಂದ್ರ ಶಿವಾಚಾರ್ಯರು, ಮಾಜಿ ಸಚಿವರಾದ ಶರಣಬಸಪ್ಪಾ ದರ್ಶನಾಪುರ, ರೇವೂ ನಾಯಕ ಬೆಳಮಗಿ ಹಲವರು ಇದ್ದರು.