ಕಿಮ್ಮನೆ ರತ್ನಾಕರ್:
1999ರಲ್ಲಿ ನಾನು ಮೊದಲ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದೆ. ಆಗೆಲ್ಲ ಹಣಕಾಸಿನ ಯಾವ ಚರ್ಚೆಗಳು ಇರುತ್ತಿರಲಿಲ್ಲ. ಸಭೆ-ಸಮಾರಂಭ, ಸಿದ್ಧಾಂತಗಳು, ನೀತಿ ನಿಯಮ, ಕಾರ್ಯಕ್ರಮಗಳು ಹೆಚ್ಚು ಚರ್ಚೆಗೆ ಬರುತ್ತಿದ್ದವು. ಭಾಷಣ, ಪ್ರಚಾರ ಹಾಗೂ ನಾನು ಯಾವ ವಿಚಾರಕ್ಕೆ ಹೋರಾಟ ಮಾಡಿದ್ದೆ ಎಂಬ ವಿಷಯಗಳು ಚರ್ಚೆಯಾಗುತ್ತಿದ್ದವು. ಪಕ್ಷದ ಸಿದ್ಧಾಂತ ಏನು, ಯಾವುದಕ್ಕೆ ಹೋರಾಟ ಮಾಡುತ್ತಿದ್ದೆ ಎಂಬುದು ಮುಖ್ಯವಾಗುತ್ತಿದ್ದವು.
ಆಗೆಲ್ಲ ಚುನಾವಣೆಗೆ ಅಷ್ಟು ಖರ್ಚು ಬರುತ್ತಿರಲಿಲ್ಲ. 10-12 ಲಕ್ಷ ರೂ. ಸಾಕಾಗಿತ್ತು. ಯಾರಿಗೂ ದುಡ್ಡು ಕೊಡುವುದು ಇರುತ್ತಿರಲಿಲ್ಲ. ಮತದಾರರಿಗೆ ಹಣ ಕೊಡುವ ವ್ಯವಸ್ಥೆಯೇ ಇರಲಿಲ್ಲ. ವಾಹನ, ಪೋಸ್ಟರ್, ಪಾಂಪ್ಲೆಟ್ಸ್, ಪ್ರಚಾರಕ್ಕೆ ಬೇಕಾದ ಕರಪತ್ರಗಳಿಗೆ ಮಾತ್ರ ಸೀಮಿತವಾಗಿತ್ತು. ಮನೆ-ಮನೆ ಪ್ರಚಾರ ಮುಖ್ಯವಾಗಿತ್ತು. ಮುಖಂಡರು, ಕಾರ್ಯಕರ್ತರು ಹಣ ಕೇಳುತ್ತಿರಲಿಲ್ಲ. ಆದರೂ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದರು. ಪಕ್ಷದ ಕಾರ್ಯಕರ್ತರ ಜತೆಗೆ ನನಗೆ ಸ್ವಂತ ಕಾರ್ಯಕರ್ತರ ಪಡೆ ಇತ್ತು. ನಾನು ವಕೀಲನಾಗಿದ್ದೆ. ರೈತ ಸಂಘದ 2 ಸಾವಿರ ಪ್ರಕರಣಗಳನ್ನು ಉಚಿತವಾಗಿ ನಡೆಸಿದ್ದೆ. ಹಾಗಾಗಿ ಅವರೆಲ್ಲ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವ ಇಚ್ಛೆಯಿಂದ ಕೆಲಸ ಮಾಡಿದ್ದಾರೆ. ಆ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದೆ. ಮತದಾರರ ಮನದಾಳ ಆಗ ಸುಲಭವಾಗಿ ಗೊತ್ತಾಗುತ್ತಿತ್ತು. ಯಾರಾದರೂ ಭಾಷಣ ಮಾಡುತ್ತಿರುವಾಗ ಹಿಂದೆ ನಿಂತಿರುವ ಹತ್ತು ಜನ ಕೇಳಿದರೆ ಸಾಕಿತ್ತು. ಫಲಿತಾಂಶ ಏನಾಗುತ್ತದೆ, ಮೊದಲ ಸ್ಥಾನ, ಎರಡನೇ ಸ್ಥಾನ ಸಹ ತಿಳಿಯುತಿತ್ತು. ಕೊನೆಯ 8 ದಿನದಲ್ಲಿ ಸ್ಪಷ್ಟ ಚಿತ್ರಣ ತಿಳಿಯುತ್ತಿತ್ತು.
2013ರಿಂದ ತೀರ್ಥಹಳ್ಳಿ ಚುನಾವಣೆ ವ್ಯವಸ್ಥೆ ಕೆಟ್ಟಿದೆ. ಚುನಾವಣೆ ಗೆದ್ದ ಮೇಲೆ ಜಾತಿ, ಪಕ್ಷ, ಧರ್ಮ ಯಾವುದನ್ನೂ ಇಟ್ಟುಕೊಂಡಿಲ್ಲ. ಯಾರೆ ಬಂದರೂ ಸ್ಪಂದನೆ ಮಾಡಿದ್ದೇನೆ. ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದೇನೆ. ಈಗಲೂ ಆ ಸಿದ್ಧಾಂತದಿಂದ ಹೊರಗುಳಿದಿಲ್ಲ. ಈಗ ಹಣ ಇಲ್ಲದಿದ್ದರೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಹಿಂದೆ ಪಕ್ಷ, ಬಾವುಟ ಮುಖ್ಯವಾಗಿತ್ತು. ಈಗ ರಿಸರ್ವ್ ಬ್ಯಾಂಕ್ ಇಂಡಿಯಾ ಇದ್ದರೆ ಸಾಕು. ಸಿದ್ಧಾಂತ, ಪಕ್ಷ, ಹೋರಾಟ ಯಾವುದೂ ಮುಖ್ಯವಲ್ಲ.
-ಶರತ್ ಭದ್ರಾವತಿ