Advertisement
ಈ ಮೂಲಕ ರಾಜ್ಯ ಚುನಾವಣೆಯಲ್ಲಿ ಯಾವುದೇ ಹೊಸ ಪ್ರಯೋಗಕ್ಕೆ ಬಿಜೆಪಿ ಕೈ ಹಾಕುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೂಚ್ಯವಾಗಿ ನೀಡಿದ್ದ ಈ ಸಂದೇಶ ಈಗ ಸ್ಪಷ್ಟರೂಪ ಪಡೆದಿದೆ. ಗುಜರಾತ್ ರೀತಿಯಲ್ಲಿ ಸಾಕಷ್ಟು ಹೊಸಮುಖಗಳಿಗೆ ಅವಕಾಶ ನೀಡಲಾಗುತ್ತದೆ ಎಂಬ ರಾಜ್ಯ ಬಿಜೆಪಿ ನಾಯಕರ ಹೇಳಿಕೆಗಳಿಗೆ ಇದರಿಂದ ತೆರೆ ಬಿದ್ದಂತಾಗಿದೆ. ಬೆರಳೆಣಿಕೆಯಷ್ಟು ಮಾತ್ರ ಹೊಸ ಮುಖಗಳಿಗೆ ಅವಕಾಶ ಲಭಿಸುವ ಸಾಧ್ಯತೆ ಇದ್ದು, ಆಡಳಿತ ವಿರೋಧಿ ಅಲೆಯ ಹೆಸರಿನಲ್ಲಿ ಸಾರಾಸಗಟು ಟಿಕೆಟ್ ನಿರಾಕರಿಸಿ ಬಂಡಾಯವನ್ನು ಮೈಮೇಲೆ ಎಳೆದುಕೊಳ್ಳದೆ ಇರಲು ಬಿಜೆಪಿ ನಿರ್ಧರಿಸಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ “ಮಾದರಿ” ಯಾವುದು ಎಂಬ ಪ್ರಶ್ನೆ ಬಂದಾಗಲೆಲ್ಲ ಸಾಮಾನ್ಯ ವಾಗಿ ಮೂರು ರಾಜ್ಯಗಳ ಹೆಸರು ಮುಂಚೂಣಿಗೆ ಬರುತ್ತವೆ. ಗೆಲುವಿನ ಪ್ರಶ್ನೆ ಬಂದಾಗ ರಾಜ್ಯ ಬಿಜೆಪಿ ನಾಯಕರು ಗುಜರಾತ್, ಉತ್ತರ ಪ್ರದೇಶ ಮಾದರಿಯನ್ನು ಪ್ರಸ್ತಾವಿಸುತ್ತಾರೆ. ಹಿಮಾಚಲದ ಸೋಲು ಕಣ್ಣು ಮುಂದೆಯೇ ಇದೆ. ಆದರೆ ಕರ್ನಾಟಕದ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ 3 ಮಾದರಿಗಳ ಪೈಕಿ ಯಾವುದನ್ನೂ ಆಯ್ದುಕೊಳ್ಳದೆ ಇರಲು ನಿರ್ಧ ರಿಸಲಾಗಿದೆ ಎನ್ನುತ್ತವೆ ಬಿಜೆಪಿಯ ಮೂಲಗಳು. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಏಕೆ ಸೋಲ ಬಾರದು ಎಂಬುದಕ್ಕೆ ಹಿಮಾಚಲ ಉದಾಹರಣೆ ಯಾದರೆ, ಗುಜರಾತ್ ಹಾಗೂ ಉತ್ತರ ಪ್ರದೇಶ ಗೆಲ್ಲುವುದಕ್ಕೆ ಮಾದರಿ. ಆದರೆ ಈ ಎರಡೂ ರಾಜ್ಯಗಳ ರೀತಿಯಲ್ಲಿ ಟಿಕೆಟ್ ಹಂಚಿಕೆ ಹಾಗೂ ಜಾತಿ ಸಮೀಕರಣ ಮಾಡುವುದಕ್ಕೆ ರಾಜ್ಯ ಬಿಜೆಪಿ ಘಟಕದಲ್ಲಿ ಸಾಧ್ಯವೇ ಇಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಮುಂಚೂಣಿ ನಾಯಕನ ವೈಯಕ್ತಿಕ ವರ್ಚಸ್ಸಿನಲ್ಲಿ ಹೊಸ ಅಭ್ಯರ್ಥಿಯನ್ನೂ ಗೆಲುವಿನ ದಡ ಹತ್ತಿಸಬಹುದೆಂಬ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ಗುಜರಾತ್‌ನಲ್ಲಿ ಮೋದಿ-ಅಮಿತ್ ಶಾ, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ರೀತಿಯ ವರ್ಚಸ್ವಿ ವ್ಯಕ್ತಿತ್ವ ರಾಜ್ಯದಲ್ಲಿ ಇಲ್ಲ.
Related Articles
ಗುಜರಾತ್ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ 45 ಮಂದಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತು. ಹಾಲಿ ಸಚಿವರು ಕೂಡ ಆ ಪಟ್ಟಿಯಲ್ಲಿ ದ್ದರು. ಆದರೆ ಹೊಸದಾಗಿ ಟಿಕೆಟ್ ಪಡೆದವರಲ್ಲಿ 43 ಅಭ್ಯರ್ಥಿಗಳು ಗೆದ್ದು ಬೀಗಿದರು. ಹೀಗಾಗಿ ಆಡಳಿತ ವಿರೋಧಿ ಅಲೆಯ ವಿರುದ್ಧ ಬಿಜೆಪಿ ನಿರಾಯಾಸವಾಗಿ ಈಜಿ ದಡ ಸೇರಿತು. ಆದರೆ ಇದೇ ಸೂತ್ರ ಹಿಮಾಚಲದಲ್ಲಿ ವ್ಯತಿರಿಕ್ತವಾಯಿತು. ಟಿಕೆಟ್ ನಿರಾಕರಿಸಿದ ಕಾರಣಕ್ಕೆ 21 ಕಡೆ ಬಂಡಾಯ ಸ್ಪರ್ಧೆ ನಡೆಯಿತು. ಹೀಗಾಗಿ ಒಂದು ರಾಜ್ಯಕ್ಕೆ ಒಪ್ಪಿತವಾದ ಮಾದರಿ ಇನ್ನೊಂದು ರಾಜ್ಯಕ್ಕೆ ಅನ್ವಯವಾಗದು. ಇದೇ ಸೂತ್ರ ಈಗ ರಾಜ್ಯಕ್ಕೂ ಅನ್ವಯವಾಗುತ್ತದೆ ಎಂಬುದು ಬಿಜೆಪಿಯ ರಾಷ್ಟ್ರೀಯ ನಾಯಕರೊಬ್ಬರ ಮಾತು.
Advertisement
ಮಾದರಿ ಸ್ಥಳೀಯವಾಗಿರಲಿ ಆಯಾ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಚುನಾವಣ ತಂತ್ರಗಾರಿಕೆ ರೂಪಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ಇಬ್ಬರು ಸಂಯೋಜಕರನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ. ರಾಜ್ಯಕ್ಕೆ ಅನ್ಯ ರಾಜ್ಯ ಗಳಿಂದ ನಿಯೋಜನೆಗೊಳ್ಳುವ ಚುನಾವಣ ಉಸ್ತುವಾರಿಗಳಿಗೆ ಮಾತ್ರ ವಿಭಾಗವಾರು ಅಥವಾ ಜಿಲ್ಲಾವಾರು ಜವಾಬ್ದಾರಿ ನಿಯೋಜಿಸಬಹುದು ಎಂದು ತಿಳಿದು ಬಂದಿದೆ. ಗುಜರಾತ್‌ನಲ್ಲಿ ಎರಡು ಜಿಲ್ಲೆಗೆ ಇಬ್ಬರು ಉಸ್ತುವಾರಿಗಳಿದ್ದರು. ರಾಜ್ಯದಲ್ಲಿ ಅದೇ ಮಾದರಿಯ ವರ್ಗೀಕರಣ ಅಥವಾ ವಿಭಾಗವಾರು ಜವಾಬ್ದಾರಿ ಹಂಚಿಕೆ ಯಾಗಬಹುದು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ಯಾವುದೇ ಬದಲಾ ವಣೆಯ ಸಾಧ್ಯತೆ ಕ್ಷೀಣವಾಗಿದ್ದು, ಅನಿವಾರ್ಯ ಪರಿಸ್ಥಿತಿ ಎದುರಾದರೆ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕವನ್ನು ಮಾತ್ರ ನಿರೀಕ್ಷಿಸಬಹುದು ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
- ರಾಘವೇಂದ್ರ ಭಟ್