Advertisement

“ಹಿಂದೂಗಳ ಧಾರ್ಮಿಕ ಆಚರಣೆ, ಭಾವನೆಗೆ ಅಪಚಾರ’

06:15 AM Oct 12, 2018 | |

ಕುಂಬಳೆ: ಕೇರಳ ಎಡರಂಗ ಸರಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ಶಬರಿಮಲೆರಕ್ಷಣೆ, ಧಾರ್ಮಿಕ ಆಚಾರಗಳ ಸಂರಕ್ಷಣೆ ಎಂಬ ಘೋಷವಾಕ್ಯದಡಿ ಉಪ್ಪಳ ಬಸ್ಸು ನಿಲ್ದಾಣದ ಬಳಿ, ರಾಷ್ಟ್ರೀಯ ಹೆದ್ದಾರಿ ತಡೆ ಬೃಹತ್‌ ಆಂದೋಲನವು ಅಯ್ಯಪ್ಪ ಕರ್ಮ ಸಮಿತಿ, ಸಂಘ ಪರಿವಾರದ ಕಾರ್ಯಕರ್ತರಿಂದ ನಡೆಯಿತು. 

Advertisement

ಉಪ್ಪಳ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಕುಟ್ಟಿಕೃಷ್ಣನ್‌ ರಸ್ತೆತಡೆ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು. 
ಶಬರಿಮಲೆಯಲ್ಲಿ ಎಲ್ಲ ವಯೋಮಾನದ ಸ್ತ್ರೀಯರಿಗೆ ಪ್ರವೇಶಿಸಬಹುದು ಎಂಬ ಅಧಿನಿಯಮ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತದೆ. ಸಹಸ್ರಾರು ವರ್ಷಗಳಿಂದ ನಡೆದು ಬಂದ ಆಚಾರ ಅನುಷ್ಠಾನಗಳನ್ನು ಏಕಾಏಕಿ ಇಲ್ಲವಾಗಿಸುವ ಸರಕಾರದ ನೀತಿ ಅಸಂಖ್ಯ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದರು. 

ದಕ್ಷಿಣ ಭಾರತದ ಹಲವು ರಾಜ್ಯಗಳಿಂದ ಬರುವ ಭಕ್ತಾದಿಗಳು ಶಬರಿಮಲೆಯ ಶತಮಾನದ ಆಚರಣೆಗಳನ್ನು ಚಾಚೂ ತಪ್ಪದೆ ಅನುಸರಿಸುತ್ತಾರೆ. ಇಂತಹ ಉನ್ನತ ಧಾರ್ಮಿಕ ಆಚರಣೆಗಳ ಮಧ್ಯೆ ಸ್ತ್ರೀ ಪ್ರವೇಶ ಮತ್ತು ಸ್ತ್ರೀ ಸ್ವಾತಂತ್ರ್ಯವೆಂಬ ಕೂಗು ಅಪ್ರಸ್ತುತವೆಂದರು.

ವಿಶ್ವ ಹಿಂದೂ ಪರಿಷದ್‌ ಜಿಲ್ಲಾಧ್ಯಕ್ಷ ಅಂಗಾರ ಶ್ರೀಪಾದ ಮಾತನಾಡಿ ನಾಸ್ತಿಕ ರಾಜ್ಯ ಸರಕಾರವು ಹಿಂದೂ ಧರ್ಮದ ಆಚರಣೆಗಳ ಮೇಲೆ ಅಪಚಾರ ಎಸಗಲು ಮುಂದಾಗಿದ್ದು, ಇದೊಂದು ಷಡ್ಯಂತ್ರವಾಗಿದೆ ಎಂದರು.

ಧಾರ್ಮಿಕ ಭಾವನೆಗಳ ಮೇಲಿನ ಪ್ರಹಾರಕ್ಕೆ ಮುಂದಾದ ಸರಕಾರದ ಕ್ರಮ ಸರಿಯಲ್ಲ, ಇದು ಸರಕಾರಕ್ಕೆ ಜನಾಂದೋಲನದ ಮೂಲಕ ಪ್ರತಿಭಟಿಸುವ ಕಾರ್ಯಕ್ರಮ ಎಂದರು. ರಾ.ಸ್ವ.ಸಂ. ಹಿರಿಯ ಕಾರ್ಯಕರ್ತ ವೀರಪ್ಪ ಅಂಬಾರ್‌ ಮಾತನಾಡಿ ರಾಜ್ಯ ಸರಕಾರ ಹಿಂದೂಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅವಹೇಳನಕಾರಿ ರೀತಿಯಲ್ಲಿ ಪ್ರತಿಬಿಂಬಿಸುವುದು ಸಮಂಜಸವಲ್ಲವೆಂದರು. 

Advertisement

ರಾಜಕೀಯ ಪ್ರೇರಿತ ಎಡರಂಗ ಧರ್ಮದ ಅವಹೇಳನ ದಮನಕಾರಿಯಾಗಿದೆ ಎಂದರು. ಹಿಂದೂ ಧರ್ಮದ ಆಚಾರ ವಿಚಾರ ನಿರ್ಧರಿಸುವವರು ತಂತಿವರ್ಯರು,ಪುರೋಹಿತರು ಮತ್ತು ಭಕ್ತರೆ ವಿನಾ ನಾಸ್ತಿಕ ಸರಕಾರಗಳಲ್ಲ ಎಂದರು. ಯುವಮೋರ್ಚಾ ರಾಜ್ಯ ನಾಯಕ ಎಂ.ವಿಜಯಕುಮಾರ್‌ರೈ, ವಿ.ಎಚ್‌.ಪಿ ಪೈವಳಿಕೆ ಪ್ರಖಂಡ ಅಧ್ಯಕ್ಷ ಉಳುವಾನ ಶಂಕರ ಭಟ್‌, ಮಾತೃಮಂಡಳಿ ಜಿಲ್ಲಾಧ್ಯಕ್ಷೆ ಮೀರಾಆಳ್ವ, ಮಂಗಲ್ಪಾಡಿ ಗ್ರಾ.ಪಂ.ಸದಸ್ಯೆ ಸುಜಾತಾ ಶೆಟ್ಟಿ, ಸಂಘ ಪರಿವಾರದ ನಾಯಕರಾದ ಎ.ಕೆ. ಕಯ್ನಾರ್‌, ಜಯಂತಿ ಟಿ. ಶೆಟ್ಟಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು  ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯಾಯಿತು.

ಸುಪ್ರಿಂಕೋರ್ಟ್‌ ನೀಡಿದ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸಬೇಕು, ಹಿಂದೂ ಧರ್ಮಾಚರಣೆಯಲ್ಲಿ ಲಿಂಗ ಬೇಧದ ವಿಚಾರವಿಲ್ಲ, ಆದರೆ ಶಬರಿಮಲೆಯಲ್ಲಿ ಶತಮಾನಗಳಿಂದ ಶ್ರದ್ಧೆ ಮತ್ತು ಭಕ್ತಿಯ ಭಾಗವಾದ ಅನುಷ್ಠಾನಗಳನ್ನು ಏಕಾಏಕಿ ದಮನಿಸುವ ಕ್ರಮ ತರವಲ್ಲ ವೆಂದರು. ಕೇರಳ ರಾಜ್ಯದಾದ್ಯಂತ ರಾ.ಹೆದ್ದಾರಿ ತಡೆದು ಶಬರಿಮಲೆ ರಕ್ಷಣೆಯ ಒಕ್ಕೊರಲ ದನಿಯು ಹಿಂದೂ ಕ್ಷೇತ್ರರಕ್ಷಣೆಯ ಜಾಗƒತಿಯನ್ನು ಮೂಡಿಸಿದೆ.
ಅಂಗಾರ ಶ್ರೀಪಾದ
ವಿಶ್ವ ಹಿಂದೂ ಪರಿಷದ್‌ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next