Advertisement

ಉದ್ದೇಶದಿಂದ ಕೂಡಿದ ಕರ್ಮದಿಂದ ಧರ್ಮ

11:50 PM Sep 28, 2021 | Team Udayavani |

ಜಗತ್ತಿನಲ್ಲಿ ಮನುಷ್ಯ ಬುದ್ದಿಜೀವಿ. ಆತ ತನ್ನ ಬುದ್ದಿಶಕ್ತಿಯನ್ನು ಬಳಸಿ ಅದೆಷ್ಟೋ ಆವಿಷ್ಕಾರ, ಸಾಧನೆಗಳನ್ನು ಮಾಡಿದ್ದಾನೆ. ಇಷ್ಟಾದರೂ ಮನುಷ್ಯ ಎಷ್ಟೇ ಪ್ರಗತಿಯನ್ನು ಹೊಂದಿದ್ದರೂ ಆತ ತನ್ನ ವಿವೇಚನೆ, ಬುದ್ಧಿ, ಮನಃಸ್ಥಿತಿ ಹೀಗೆ ಎಷ್ಟೋ ವಿಚಾರಗಳಲ್ಲಿ ಇನ್ನೂ ನಿರೀಕ್ಷಿತ ಪ್ರಗತಿಯನ್ನು ಹೊಂದಲು ಸಾಧ್ಯವಾಗಿಲ್ಲ. ಮಾನವರಾದ ನಾವು ಕೇವಲ ನಮ್ಮ ನಮ್ಮ ಕರ್ಮವನ್ನು ಮಾಡುತ್ತಿದ್ದೇವೆಯೇ ವಿನಾ ಆ ಕರ್ಮದ ಹಿಂದಿನ ಉದ್ದೇಶವನ್ನೇ ಮರೆಯುತ್ತಿದ್ದೇವೆ. ಉದ್ದೇಶರಹಿತ ಕರ್ಮ ಅರ್ಥ ಹೀನ. ಉದ್ದೇಶವನ್ನು ಅರಿತು ಕೊಂಡು ನಾವು ನಮ್ಮ ಕರ್ಮವನ್ನು ಪೂರೈಸಿ ದಾಗಲಷ್ಟೇ ಆ ಕರ್ಮಕ್ಕೊಂದು ಬೆಲೆ, ಶ್ರೇಯಸ್ಸು.

Advertisement

ಧರ್ಮಶಾಸ್ತ್ರ ಪ್ರಾರಂಭವಾಗು ವುದು ಕರ್ಮದಿಂದ. ಈ ಕರ್ಮದಲ್ಲಿ ಎರಡು ಭಾಗಗಳಿವೆ. ಇವುಗಳೆಂದರೆ ಉದ್ದೇಶ ಮತ್ತು ಕ್ರಿಯೆ. ಇವೆರಡೂ ಸೇರಿದಾಗ ಮಾತ್ರ ಕರ್ಮವಾಗುತ್ತದೆ. ಕರ್ಮ ಆರಂಭವಾಗುವುದು ಮನಸ್ಸಿನ ಉದ್ದೇಶದಿಂದ. ಅನಂತರ ಆ ಕರ್ಮವು ಕಾರ್ಯರೂಪಕ್ಕೆ ಬರುವುದು ನಮ್ಮ ಶರೀರದ ಕ್ರಿಯೆಯಿಂದ. ಒಬ್ಬ ವ್ಯಕ್ತಿ ಒಂದು ಕರ್ಮ ಮಾಡಿದನೆಂದು ನಾವು ಅದೇ ಕರ್ಮವನ್ನು ಹಿಂದೆ-ಮುಂದೆ ಯೋಚಿಸದೇ ಮಾಡುವುದು ಖಂಡಿತ ವಾಗಿಯೂ ಸರಿಯಲ್ಲ. ಯಾವುದೇ ಕರ್ಮವನ್ನು ಮಾಡುವ ಮೊದಲು ನಾವು “ಯಾಕೆ’ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ಅತ್ಯಗತ್ಯ. ಏಕೆಂದರೆ ಈ “ಯಾಕೆ’ ಎನ್ನುವುದರ ಅರ್ಥವೇ ಉದ್ದೇಶ ಹಾಗೂ ಈ ಉದ್ದೇಶ ಕ್ರಿಯೆಗಿಂತ ಬಹಳ ಮಹತ್ವಪೂರ್ಣ ದ್ದಾಗಿದೆ. ಯಾವ ಕರ್ಮದಿಂದ ಫ‌ಲ ಸಿಕ್ಕಿರುತ್ತದೆಯೋ ಅದು ಉದ್ದೇಶದಿಂದ ಸಿಗುವುದೇ ವಿನಾ ಶರೀರದ ಕ್ರಿಯೆ ಯಿಂದಲ್ಲ. ಇಬ್ಬರು ಮಾಡುವ ಕ್ರಿಯೆ ಒಂದೇ ಆಗಿರಬಹುದು. ಆದರೆ ಉದ್ದೇಶ ಬೇರೆ ಬೇರೆ ಆಗಿದ್ದರೆ ಫ‌ಲವೂ ಅಕ್ಷರಶಃ ಬೇರೆ ಆಗಿರುತ್ತದೆ.

ಇದನ್ನೂ ಓದಿ:ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ಹೈಕೋರ್ಟ್‌ ಮೊರೆ ಹೋದ ತಂದೆ

ಒಬ್ಬ ರಾಜನಿದ್ದ. ಒಂದು ಬಾರಿ ಅವನು ರಾಜ್ಯ ಸಂಚಾರಕ್ಕೆ ಎಂದು ಹೋದಾಗ ಒಂದೂರಲ್ಲಿ ಹುಲಿಯು ಜನರ ಮೇಲೆ ಆಕ್ರಮಿಸಲು ಮುಂದಾ ಗಿತ್ತು. ಇದನ್ನು ಕಂಡ ರಾಜನು ಆ ಹುಲಿಯನ್ನು ಬೇಟೆಯಾಡಿ ಕೊಂದು ಬಿಟ್ಟನು. ತನಗೆ ಇಷ್ಟವಿಲ್ಲದಿದ್ದರೂ ಆ ಊರಿನ ಜನರ ಸುರಕ್ಷತೆಗಾಗಿ ಅವನು ಆ ಕೆಲಸವನ್ನು ಮಾಡಬೇಕಾಯಿತು. ಆದರೆ ಹಲವು ವರ್ಷಗಳ ಅನಂತರ ಅದೇ ರಾಜನ ಮಗ ಗುರುಕುಲದಲ್ಲಿ ತನ್ನ ಗೆಳೆಯರೊಂದಿಗೆ ಆಟವಾಡುವಾಗ ದೂರದಲ್ಲೊಂದು ಹುಲಿಯು ಇರು ವುದು ಅವನ ಕಣ್ಣಿಗೆ ಬಿತ್ತು. ಆಗ ಅವನು ತಾನು ಬಲಶಾಲಿ ಎಂದು ತೋರಿಸಿಕೊಳ್ಳಲು ಆ ಹುಲಿಯನ್ನು ಬೇಟೆಯಾಡಿ ಕೊಂದುಬಿಟ್ಟನು. ಆ ಹುಲಿಯು ಯಾರಿಗೂ ಏನು ಮಾಡಿರಲಿಲ್ಲ. ಆದರೂ ತನ್ನ ತಂದೆಯು ಹುಲಿಯನ್ನು ಕೊಲ್ಲುವ ಕರ್ಮವನ್ನು ಮಾಡಿದ್ದರೆಂದು ಇವನು ಅದನ್ನೇ ಅನುಸರಿಸಿದನು. ತನ್ನ ಶಕ್ತಿಯನ್ನು ಪ್ರಪಂಚಕ್ಕೆ ತೋರಿಸುವುದಕ್ಕಾಗಿ ಒಂದು ಜೀವಿಯ ಪ್ರಾಣವನ್ನೇ ತೆಗೆದನು.

ಇವರಿಬ್ಬರೂ ಮಾಡಿದ ಕ್ರಿಯೆ ಒಂದೇ ಆಗಿದ್ದರೂ ಸಮಯ, ಸಂದರ್ಭ, ಸನ್ನಿ ವೇಶ ಹಾಗೂ ಉದ್ದೇ ಶವು ಭಿನ್ನವಾಗಿತ್ತು. ಅಂದು ಆ ರಾಜ ಹುಲಿಯ ಪ್ರಾಣ ತೆಗೆದದ್ದು ತನ್ನ ಊರಿನ ಜನರ ಪ್ರಾಣ ಕಾಪಾಡಲು. ಆದರೆ ಇಂದು ರಾಜಕುಮಾರ ಹುಲಿಯನ್ನು ಕೊಂದದ್ದು ತನ್ನ ಶಕ್ತಿಯ ಪ್ರದರ್ಶನಕ್ಕಾಗಿ. ವಾಸ್ತವದಲ್ಲಿಯೂ ಈ ಸಮಸ್ತ ಪ್ರಪಂಚದ ಪುಣ್ಯ ಶಕ್ತಿ ಕೇವಲ ಉದ್ದೇಶದಲ್ಲಿ ವಾಸವಾಗಿರುತ್ತದೆಯೇ ಹೊರತು ಶರೀರದ ಕ್ರಿಯೆ
ಯಲ್ಲಲ್ಲ. ನಮ್ಮ ದೈನಂದಿನ ಬದುಕಿ ನಲ್ಲಿಯೂ ನಾವು ಹಲವಾರು ಕರ್ಮ ಗಳನ್ನು ಮಾಡುತ್ತೇವೆ. ಆದರೆ ಎಷ್ಟೋ ಬಾರಿ ನಾವು ಅದನ್ನು ಯಾಕೆ ಮಾಡುತ್ತಿದ್ದೇ ವೆಂದೇ ಗೊತ್ತಿರುವುದಿಲ್ಲ. ಸತ್ಯವೇ ನೆಂದರೆ ನಮ್ಮಲ್ಲಿ ಹಲವರು “ಯಾಕೆ’ ಎಂದು ಪ್ರಶ್ನಿಸುವುದನ್ನು ಮತ್ತು ಯೋಚಿ ಸುವುದನ್ನೇ ಮರೆತುಬಿಟ್ಟಿದ್ದಾರೆ. ಕೇವಲ ಇತರರ ಆಚಾರಗಳನ್ನು ನೋಡುವುದು, ಪಾಲಿಸುವುದು ಮಾತ್ರವಲ್ಲದೆ ಆಚಾರದ ಹಿಂದಿರುವ ವಿಚಾರವನ್ನೂ ತಿಳಿದು ಕೊಳ್ಳಬೇಕು. ಆದುದರಿಂದ ಯಾರೋ “ಆದೇಶ’ ನೀಡಿದರೆಂದು “ಉದ್ದೇಶ’ವನ್ನೇ ತಿಳಿಯದೇ “ಕರ್ಮ’ವನ್ನು ಮಾಡುವುದು “ಧರ್ಮ’ವಲ್ಲ.

Advertisement

- ನಿಕ್ಷಿತಾ ಸಿ. ಹಳೆಯಂಗಡಿ

Advertisement

Udayavani is now on Telegram. Click here to join our channel and stay updated with the latest news.

Next