Advertisement

ಧರ್ಮ ಸಂಸದ್‌ಗೆ ಬಂದಿದೆ ಮತ್ತೆ ಮಹತ್ವ

09:14 AM Nov 22, 2017 | |

ಉಡುಪಿ: ಆರ್ಟ್‌ ಅಫ್  ಲಿವಿಂಗ್‌ನ ಶ್ರೀ ರವಿಶಂಕರ್‌ ಗುರೂಜಿ ಅಯೋಧ್ಯಾ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಧರ್ಮ ಸಂಸದ್‌ ಮತ್ತೆ ಮಹತ್ವ ಪಡೆದಿದೆ.

Advertisement

ನ. 24ರಿಂದ ಆರಂಭವಾಗುತ್ತಿರುವ ಧರ್ಮ ಸಂಸದ್‌ನಲ್ಲಿ ಈ ವಿಷಯ ಪ್ರಧಾನವಾಗಿ ಚರ್ಚೆಗೆ ಬರಲಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮತ್ತೂಮ್ಮೆ ಮಹತ್ವದ ಪಾತ್ರ ವಹಿಸಲಿದೆ. ಮತ್ತೂಂದು ಹೋರಾಟಕ್ಕೆ ಸಜ್ಜಾಗಲು ವೇದಿಕೆಯಾಗ ಲಿದೆಯೇ ಎಂಬ ಕುತೂಹಲ ಮೂಡಿದೆ. 1985ರಲ್ಲಿ ಇಲ್ಲಿಯೇ ನಡೆದ ಧರ್ಮ ಸಂಸದ್‌ ಸಭೆಯಲ್ಲೂ ಶ್ರೀರಾಮ ಮಂದಿರದ ಬಗ್ಗೆ ಪ್ರಸ್ತಾವವಾಗಿ ಹೋರಾಟದ ಹಲವು ರೂಪುರೇಖೆಗಳನ್ನು ಕೈಗೊಳ್ಳಲಾಗಿತ್ತು.

ಪ್ರಸ್ತುತ ಶ್ರೀ ರವಿಶಂಕರ್‌ ಗುರೂಜಿ ಅವರು ಸೋಮವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನೂ ಭೇಟಿ ಮಾಡಿ ಚರ್ಚಿಸಿದ್ದಾರೆ. ಒಂದೆಡೆ ಮಾತುಕತೆ ಮೂಲಕ ವಿವಾದ ಇತ್ಯರ್ಥ ಪಡಿಸುವ ಯತ್ನ ನಡೆಯುತ್ತಿದ್ದರೆ, ಮತ್ತೂಂದೆಡೆ ಸುಪ್ರೀಂ ಕೋರ್ಟ್‌ನ ತೀರ್ಪಿಗಾಗಿ ಕಾಯಲಾಗುತ್ತಿದೆ.

ಈಗ ಮತ್ತೆ ಮುನ್ನೆಲೆಗೆ
ರವಿಶಂಕರ ಗುರೂಜಿಯವರು ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ ಕುರಿತು, ಎರಡೂ ಸಮುದಾಯದವರೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳ ಬೇಕು. ಮುಸ್ಲಿಂ ಬಾಂಧವರು ಇದಕ್ಕೆ ವಿರೋಧವಿಲ್ಲ ಎಂದು ಹೇಳಿಕೆ ನೀಡಿದ್ದರು. ಕೆಲವು ಮುಸ್ಲಿಂ ಸಂಘಟನೆಗಳು ಈ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿ ಸಿವೆ. ಇದಕ್ಕೆ ಪ್ರತಿಯಾಗಿ ಗುರೂಜಿ ಸಹ, ಮಾತುಕತೆ ಮೂಲಕ ಬಗೆಹರಿಸು ವುದು ಕಷ್ಟವೆನಿಸಿದರೂ ಪ್ರಯತ್ನ ಮಾಡ ಬಾರದೆಂದೇನೂ ಇಲ್ಲ. ನನ್ನ ಪ್ರಯತ್ನ ಮುಂದುವರಿಸುವೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. 

ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಿ, ಲಕ್ನೋದಲ್ಲಿ ಮಸೀದಿಯನ್ನು ನಿರ್ಮಿಸುವ ಪ್ರಸ್ತಾವವನ್ನು ಶಿಯಾ ವಕ್ಫ್ ಮಂಡಳಿ ಮುಖ್ಯಸ್ಥ ವಾಸಿಮ್‌ ರಿಜ್ವಿ ತಿಳಿಸಿರುವುದಕ್ಕೆ ಸುನ್ನಿ ವಕ್ಫ್ ಬೋರ್ಡ್‌ ವಿರೋಧವಿದ್ದರೂ “ನಾವು ಶಾಂತಿಯುತ ಪರಿಹಾರಕ್ಕೆ ಯತ್ನಿ ಸುತ್ತೇವೆ. ಸುನ್ನಿ ಮಂಡಳಿ ಜತೆಗೂ ಮಾತನಾಡುತ್ತೇವೆ. 2018ರಿಂದ ಮಂದಿರ ನಿರ್ಮಾಣ ಕೈಗೊಳ್ಳುತ್ತೇವೆ’ ಎಂದು ಅ.ಭಾ.ಅಖಾರಾ ಪರಿಷತ್‌ ಮಹಾಂತ ನರೇಂದ್ರ ಗಿರಿ ಹೇಳಿರುವುದಕ್ಕೆ ಭಾರೀ ಮಹತ್ವವಿದೆ. ಇದರ ಮುಂದಿನ ನಡೆ ಕುರಿತು ಈ ಧರ್ಮ ಸಂಸದ್‌ನಲ್ಲಿ ಚರ್ಚಿ ಸುವ ಸಾಧ್ಯತೆ ಹೆಚ್ಚಿರುವುದರಿಂದ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ.

Advertisement

ಉಡುಪಿ ಧರ್ಮ ಸಂಸದ್‌ನಲ್ಲಿ ವಿಷಯ ಪ್ರಸ್ತಾವವಾಗುವ ಕುರಿತು ಉದಯವಾಣಿಗೆ ಕೆಲವು ವಿಹಿಂಪ ಮುಖಂಡರೂ ಖಚಿತ ಪಡಿಸಿದ್ದಾರೆ.

ಮೊದಲ ಬಾರಿಗೆ ಪ್ರಸ್ತಾವ
1985ರ ಎಪ್ರಿಲ್‌ನಲ್ಲಿ ದಿಲ್ಲಿಯಲ್ಲಿ ನಡೆದ ಮೊದಲ ಧರ್ಮ ಸಂಸದ್‌ನಲ್ಲೂ ರಾಮ, ಕಾಶಿ ವಿಶ್ವನಾಥ ಹಾಗೂ ಕೃಷ್ಣ ಜನ್ಮಸ್ಥಾನಗಳನ್ನು ವಾಪಸು ಪಡೆಯುವ ಸಂಬಂಧ ಚರ್ಚಿಸಲಾಗಿತ್ತು. ಆದರೆ 1985ರ ಅ. 31, ನ. 1ರಂದು ಉಡುಪಿ ಯಲ್ಲಿ ನಡೆದ ಎರಡನೇ ಧರ್ಮ ಸಂಸದ್‌ನಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಸಂಬಂಧಿತ ಹೋರಾಟಕ್ಕೆ ಶಕ್ತಿ ತುಂಬುವ ಸಂಬಂಧ ಚರ್ಚೆ ನಡೆದಿತ್ತು. 1986ರ ಶಿವರಾತ್ರಿಯೊಳಗೆ ಶ್ರೀರಾಮ ದೇವಸ್ಥಾನದ ಬೀಗ ತೆಗೆದು ದೇವರ ದರ್ಶನಕ್ಕೆ ಅವಕಾಶ ಕೊಡಬೇಕು. ಇಲ್ಲವಾದರೆ ದೇಶಾದ್ಯಂತ ಹೋರಾಟ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದಕ್ಕೆ ಪೂರಕವಾಗಿ 34 ಮಂದಿ ಸಂತರ ಶ್ರೀ ರಾಮ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯನ್ನು ರಚಿಸಲಾಗಿತ್ತು. ಇದ ಲ್ಲದೇ ಇತರ 7 ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.

ಉಡುಪಿಯತ್ತ ದಿಗ್ಗಜರ ಹೆಜ್ಜೆ…
ಉಡುಪಿ: ಉಡುಪಿಯ ಧರ್ಮ ಸಂಸದ್‌ ಅಧಿವೇಶನಕ್ಕಾಗಿ ಸಂತರ ಆಗಮನ ಆರಂಭವಾಗುತ್ತಿದ್ದಂತೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಶ್ವ ಹಿಂದೂ ಪರಿಷದ್‌ ನಾಯಕರ ಆಗಮನವೂ ಆರಂಭವಾಗಿದೆ. ಜೀವೇಶ್ವರ ಮಿಶ್ರಾ, ಅಶೋಕ್‌ ತಿವಾರಿ, ಕೋಟೇಶ್ವರ ಶರ್ಮ ಸೋಮವಾರವೇ ಉಡುಪಿಗೆ ಆಗಮಿಸಿ ತಯಾರಿಯ ಪರಿಶೀಲನೆ ನಡೆಸುತ್ತಿದ್ದಾರೆ. 

ಉತ್ತರ ಭಾರತದವರಾದ ಗುಜರಾತ್‌ನ ಅವಿಚಲಾನಂದದಾಸ್‌, ಹರಿದ್ವಾರದ ಚಿನ್ಮಯಾನಂದ ಸ್ವಾಮೀಜಿ, ರಾಮಾನಂದಾಚಾರ್ಯ, ಮಹಾರಾಷ್ಟ್ರದ ಗೋವಿಂದಗಿರಿ, ಕರ್ನಾಟಕದ ಆದಿಚುಂಚನಗಿರಿ ಮಠಾಧೀಶರು, ಶ್ರೀಶೈಲಂ ಮಠಾಧೀಶರು, ತುಮಕೂರು ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ, ಬೇಲಿ ಮಠಾಧೀಶರು, ಮಾದಾರ ಚೆನ್ನಯ್ಯ ಸ್ವಾಮೀಜಿ, ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಸ್ವಾಮೀಜಿ ಯವರು ಪಾಲ್ಗೊಳ್ಳುವುದು ನಿಶ್ಚಿತವಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ, ಗೋರಕ್ಷ ಪೀಠಾಧ್ಯಕ್ಷ ಯೋಗಿ ಆದಿತ್ಯನಾಥ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಬರುವುದು ಬಹುತೇಕ ಖಚಿತವಾಗಿದೆ.

ವಿಹಿಂಪದ ಚಂಪತ್‌ರಾಯ್‌, ದಿನೇಶಚಂದ್ರ, ವಿನಾಯಕ ರಾವ್‌, ಶ್ಯಾಮ ಗುಪ್ತ, ಸುರೇಂದ್ರ ಜೈನ್‌, ರಾಘವಲು, ರಾಜೇಂದ್ರ ಸಿಂಗ್‌, ಉಮಾಶಂಕರ ಶರ್ಮ, ಪ್ರವೀಣ್‌ ಭಾ ತೊಗಾಡಿಯ, ಓಂಪ್ರಕಾಶ್‌ ಸಿಂಘಲ್‌, ಸುಭಾಸ್‌ ಕಪೂರ್‌, ಮೋಹನ್‌ಲಾಲ್‌ ಅಗ್ರವಾಲ್‌, ರಾಮನಾಥ ಮಹೇಂದ್ರ ಮೊದಲಾದವರು ಬುಧವಾರ, ಗುರುವಾರದೊಳಗೆ ಆಗಮಿಸಲಿದ್ದಾರೆ. 

ಧರ್ಮ ಸಂಸದ್‌ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಆರೆಸ್ಸೆಸ್‌ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಆರೆಸ್ಸೆಸ್‌ ಸಹಸರಕಾರ್ಯವಾಹ ಭಾಗಯ್ಯ ಎಲ್ಲ ದಿನವಿರುತ್ತಾರೆ. ಅವರು ನ. 23ರ ಸಂಜೆ 4ಕ್ಕೆ “ಹಿಂದೂ ವೈಭವ’ ಪ್ರದರ್ಶಿನಿಯನ್ನು ಉದ್ಘಾಟಿಸಲಿದ್ದಾರೆ. ಕೊನೆಯ ದಿನ ಬೆಳಗ್ಗೆ ವಿವಿಧ ಸಮಾಜ ಪ್ರಮುಖರ ಸಭೆಯಲ್ಲಿ ವಿಹಿಂಪ ಅಂತಾರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್‌ ಜೈನ್‌ ಮಾತನಾಡಲಿದ್ದಾರೆ.

ಅಂದು ಇವರಿದ್ದರು…
1969ರ ಸಂತ ಸಮ್ಮೇಳನ, ವಿಶ್ವ ಹಿಂದೂ ಪರಿಷತ್‌ ಪ್ರಾಂತ ಸಮ್ಮೇಳನ, 1985ರ ಧರ್ಮ ಸಂಸದ್‌ ಅಧಿವೇಶನದಲ್ಲಿ ಆರೆಸ್ಸೆಸ್‌ ಸರಸಂಘಚಾಲಕರಾದ ಗುರೂಜಿ ಗೋಳವಲ್ಕರ್‌, ಬಾಳಾಸಾಹೇಬ್‌ ದೇವರಸ್‌, ವಿಹಿಂಪ ನಾಯಕರಾದ ಅಶೋಕ್‌ ಸಿಂಘಲ್‌, ಸದಾನಂದ ಕಾಕಡೆ, ಬಾಬೂರಾವ್‌ ದೇಸಾಯಿ, ಪ್ರಮುಖ ಸ್ವಾಮೀಜಿಯವರಾದ ಉತ್ತರ ಪ್ರದೇಶದ ಮಹಂತ ಅವೈದ್ಯನಾಥ್‌, ನೃತ್ಯ ಗೋಪಾಲದಾಸ್‌, ಸತ್ಯಮಿತ್ರಾನಂದಗಿರಿ ಸ್ವಾಮೀಜಿ, ಮುಂಬಯಿ ಚಿನ್ಮಯಾನಂದರು, ಆದಿಚುಂಚನಗಿರಿ ಆಗಿನ ಮಠಾಧೀಶರು ಪಾಲ್ಗೊಂಡಿದ್ದರು.

ಸಂತರು  ಉಳಿದು ಕೊಳ್ಳುವ 16 ಸ್ಥಳಗಳಲ್ಲೂ ಭದ್ರತೆ
ಉತ್ತರಾದಿ ಮಠ (24 ವಿಐಪಿ ವಸತಿ, 100 ಮಂದಿಗೆ ಗುಂಪು ಬ್ಯಾರಕ್‌), ಯಾತ್ರಿ ನಿವಾಸ (82 ಸಾದಾ ವಸತಿ), ಆರೂರು ಕಾಂಪೌಂಡ್‌ (32 ಮಂದಿಗೆ), ಕುಂಜಾರುಗಿರಿ ದೇಗುಲ  (2 ಸಭಾಂಗಣದಲ್ಲಿ 100 ಮಂದಿ+2 ಕೋಣೆ), ಅದಮಾರು ಮಠ, ಅದಮಾರು ಮಠದ ಗೆಸ್ಟ್‌ಹೌಸ್‌ (8 ಕೋಣೆ-26 ಮಂದಿ), ಬಿರ್ಲಾ ಛತ್ರ (10 ರೂಮು- 20 ಮಂದಿ), ಕೃಷ್ಣಧಾಮ (8 ಕೋಣೆ+1 ಹಾಲ್‌ನಲ್ಲಿ 80 ಮಂದಿ), ಗೀತಾಮಂದಿರ (20 ಡಬಲ್‌ ರೂಮ್‌ನಲ್ಲಿ 60 ಜನ), ವಿಶ್ವಮಾನ್ಯ ಮಂದಿರ (6 ಎಸಿ+10 ನಾನ್‌ಎಸಿಯಲ್ಲಿ 22), ಸೋದೆ ಮಠದ ಭೂವರಾಹ ಛತ್ರ (10 ಎಸಿ, 10 ನಾನ್‌ ಎಸಿ+ಹಾಲ್‌ನಲ್ಲಿ ಒಟ್ಟು 60 ಮಂದಿ), ವಿದ್ಯಾಸಮುದ್ರ (7 ಕೋಣೆಯಲ್ಲಿ 13 ಮಂದಿ), ಪಲಿಮಾರು ಮಠ (36 ಮಂದಿಗೆ), ಭಂಡಾರಕೇರಿ ಮಠ (8 ಕೊಠಡಿ 16 ಜನ+1 ಹಾಲ್‌ 30 ಜನ), ನ್ಯೂಯಾತ್ರಿ ನಿವಾಸ (1 ಹಾಲ್‌ 30 ಮಂದಿ+15 ರೂಮ್‌) ಮತ್ತು ಪುತ್ತಿಗೆ ಮಠದ ಇಂದ್ರಪ್ರಸ್ಥ ಅತಿಥಿಗೃಹದಲ್ಲಿ (10 ರೂಮ್‌ 20 ಮಂದಿ) ಸಂತರು ಉಳಿದುಕೊಳ್ಳಲಿದ್ದಾರೆ. ಇಲ್ಲಿಯೂ ಕೇಸರಿ ರಕ್ಷಕ್‌ ಪಡೆಯವರು ಭದ್ರತೆಯಲ್ಲಿ ಇರಲಿದ್ದಾರೆ. ಶ್ರೀನಿವಾಸ ರೆಸಿಡೆನ್ಸಿಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಇರಲಿದ್ದಾರೆ. ಇನ್ನುಳಿದಂತೆ ಮನೆ, ದೂರದ ವಸತಿಗೃಹಗಳಲ್ಲಿ ಹಲವರು ತಂಗಲಿದ್ದಾರೆ.

ಅಧಿವೇಶನ: ಏನು ಎತ್ತ ?
ಉಡುಪಿ: ಕಲ್ಸಂಕದ ರೋಯಲ್‌ ಗಾರ್ಡನ್‌ನಲ್ಲಿ ನ. 24ರಿಂದ 26ರ ವರೆಗೆ ನಡೆಯುವ ಧರ್ಮಸಂಸದ್‌ನ ವಿವರ.

ನ. 24 ಬೆಳಗ್ಗೆ 10 ಗಂಟೆಗೆ ಶ್ರೀಕೃಷ್ಣ ಮಠದ ಪಾರ್ಕಿಂಗ್‌ ಪ್ರದೇಶದ ತಾತ್ಕಾಲಿಕ ರಾಜಾಂಗಣಕ್ಕೆ ಸಂತರು – ಸ್ವಾಮೀಜಿಯವರ ಆಗಮನ, ಅಲ್ಲಿ ಜತೆಗೂಡಿ ಕೊಂಬುಕಹಳೆ, ವಾದ್ಯಘೋಷ ಸಹಿತ ಮೆರವಣಿಗೆಯಲ್ಲಿ ಕಲ್ಸಂಕದ ರೋಯಲ್‌ ಗಾರ್ಡನ್‌ ಧರ್ಮಸಂಸದ್‌ ಸಭಾಂಗಣಕ್ಕೆ ಆಗಮನ. ಬಳಿಕ ಧರ್ಮಸಂಸದ್‌ ಉದ್ಘಾಟನೆಯನ್ನು ಹಿರಿಯ ಸ್ವಾಮೀಜಿಯವರು ನಡೆಸಲಿದ್ದು ಆರೆಸ್ಸೆಸ್‌ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಪರಾಹ್ನ 3.30ಕ್ಕೆ ಅಯೋಧ್ಯೆ ರಾಮಜನ್ಮಭೂಮಿ, ಗೋರಕ್ಷಣೆ, ಗೋ ಸಂವರ್ಧನ ಕುರಿತು ಗೋಷ್ಠಿ ನಡೆಯಲಿದೆ.

ನ. 25ರ ಬೆಳಗ್ಗೆ 10ರಿಂದ 12.30ರ ವರೆಗೆ ಸಾಮಾಜಿಕ ಸಾಮರಸ್ಯ ಕಾಪಾಡಲು ಗುಂಪು ಚರ್ಚೆಗಳು, ಅಪರಾಹ್ನ 3.30ರಿಂದ 6.30ರ ವರೆಗೆ ಮತಾಂತರ ತಡೆ, ಮರಳಿ ಮಾತೃಧರ್ಮಕ್ಕೆ ಕರೆತರುವುದು, ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸುವ ಕುರಿತು  ಗುಂಪು  ಚರ್ಚೆಗಳು ನಡೆಯಲಿವೆ.

ನ. 26ರ ಬೆಳಗ್ಗೆ 10ರಿಂದ 12.30ರ ವರೆಗೆ ಮಹಾಸಭೆ, ನಿರ್ಣಯಗಳ ಅಂಗೀಕಾರ ನಡೆಯಲಿದೆ. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನ. 26ರ ಬೆಳಗ್ಗೆ 10ರಿಂದ 1 ಗಂಟೆವರೆಗೆ ಸಮಾಜ ಪ್ರಮುಖರ ಸಭೆ ನಡೆಯಲಿದೆ. ನ. 26ರ ಅಪರಾಹ್ನ 2 ಗಂಟೆಯಿಂದ ಜೋಡುಕಟ್ಟೆಯಿಂದ ಆಕರ್ಷಕ ಶೋಭಾಯಾತ್ರೆ ನಡೆಯಲಿದ್ದು ಬಳಿಕ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ಜರಗಲಿವೆೆ.

ನ. 24, 25ರ ರಾತ್ರಿ ಮೂಡಬಿದಿರೆ ಆಳ್ವಾಸ್‌ ನುಡಿಸಿರಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನ. 23ರ ಸಂಜೆ 4ಕ್ಕೆ “ಹಿಂದೂ ವೈಭವ’ ಪ್ರದರ್ಶಿನಿ ತೆರೆದುಕೊಳ್ಳಲಿದ್ದು ಮೂರು ದಿನ ಸಾರ್ವಜನಿಕರಿಗೆ ಪ್ರವೇಶವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next