Advertisement
ಕೌಕ್ರಾಡಿ ಗ್ರಾಮದ ಮೂಡುಬೈಲು ಎಂಬಲ್ಲಿ ಡಾಮರ್ ರಸ್ತೆಯಿಂದ ಅನತಿ ದೂರದಲ್ಲಿರುವ ಮುದರ ಎಂಬವರು ತಮ್ಮ ಹೆಂಡತಿ ಗೀತಾ ಹಾಗೂ 5 ಮಕ್ಕಳೊಂದಿಗೆ ಟಾರ್ಪಲ್ ಅಳವಡಿಸಿದ ಗುಡಿಸಲು ಮಾದರಿಯ ಮನೆಯಲ್ಲಿ 20 ವರ್ಷಗಳಿಗಿಂತಲೂ ಹಿಂದಿನಿಂದ ಜೀವನ ಸಾಗಿಸುತ್ತಿದ್ದರು. ಹೆಸರಿಗೆ ಒಂದಷ್ಟು ಜಮೀನು ಇದ್ದರೂ, ಟಾರ್ಪಲು ವಾಸವೇ ಇವರದ್ದಾಗಿತ್ತು.
ಕೂಲಿ ಮಾಡಿ ಸಿಕ್ಕಿದ ಹಣ ಸಂಸಾರ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಗಾಳಿ ಮಳೆ ಬಂದರೆ ಗುಡಿಸಲಿನ ಮನೆಯಲ್ಲಿ ನಿಲ್ಲಲು ಸಾಧ್ಯವಿಲ್ಲದ ಈ ಬಡ ಕುಟುಂಬವು ಮಕ್ಕಳನ್ನು ಕರೆದುಕೊಂಡು ಪಕ್ಕದ ಮನೆಗೆ ಹೋಗಿ ಆಶ್ರಯ ಪಡೆದುಕೊಳ್ಳುತ್ತಿತ್ತು. ವಿದ್ಯಾಭ್ಯಾಸವೂ ಇಲ್ಲದ ಕಾಣದಿಂದಲೋ ಏನೋ ಸರಕಾರದ ಅನುದಾನಗಳ ಬಗ್ಗೆ ಮಾಹಿತಿಯ ಕೊರತೆ. ಹೀಗೆ ಇದರ ಸಲುವಾಗಿ ಸಾಕಷ್ಟು ಬಾರಿ ಗ್ರಾ.ಪಂ.ಗೆ ಹೋಗಿ ಬಂದರೂ ಮನೆ ನಿರ್ಮಾಣದ ಭರವಸೆ ಕಾರ್ಯಗತವಾಗಿಲ್ಲ ಎಂದು ಮುದರರು ಪತ್ರಿಕೆಯ ಮೊರೆ ಹೋಗಿದ್ದರು. ಈ ಕುರಿತು ಉದಯವಾಣಿ ಸುದಿನದಲ್ಲಿ ಸಚಿತ್ರ ವರದಿಯೊಂದನ್ನು ಪ್ರಕಟಿಸಲಾಗಿತ್ತು. ಇವರ ಜತೆಗೆ ಮೊಗೇರ ಜನಾಂಗ ಜಾಗೃತಿ ಟ್ರಸ್ಟ್ ನ ಅಧ್ಯಕ್ಷ ಸದಾಶಿವ ನಿಡ್ಲೆ ತಮ್ಮ ಸಂಘದ ಸದಸ್ಯರೊಂದಿಗೆ ಸೇರಿಕೊಂಡು ತಾತ್ಕಾಲಿಕ ಮನೆ ನಿರ್ಮಾಣ ಕಾರ್ಯ ಪೂರೈಸಿದ್ದಾರೆ. ಈ ಶ್ರಮದಾನ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸದಸ್ಯರಾದ ವಿಠಲ ಬೂಡುಜಾಲು, ಶ್ರೀಧರ ನಿಡ್ಲೆ, ಆನಂದ ಬೂಡುಜಾಲು, ಚೆಲುವಯ್ಯ ಬೆಳಾಲು, ಕೃಷ್ಣಪ್ಪ ಎಂ. ಕೆ., ಕೌಕ್ರಾಡಿ ಗ್ರಾ.ಪಂ. ಸದಸ್ಯೆ ಜಾನಕಿ ಸಹಕರಿಸುತ್ತಿದ್ದಾರೆ.
Related Articles
ಉದಯವಾಣಿ ಸುದಿನ ವರದಿ ಪ್ರಕಟವಾದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಇಬ್ರಾಹಿಂ ಅವರು ನಾನೇ ನಿಂತು ಮನೆಯ ವ್ಯವಸ್ಥೆ ಮಾಡಿಸುವೆ ಎಂದು ಭರವಸೆ ನೀಡಿದ್ದರು. ಇದೀಗ ಪಂ.ವತಿಯಿಂದ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಬೇಕಾದ ಸಾಮಗ್ರಿ ಗಳನ್ನು ಒದಗಿಸುವ ಮೂಲಕ ಸಂತ್ರಸ್ತ ಕುಟುಂಬದ ನೆರವಿಗೆ ಧಾವಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಶ್ವತ ಮನೆ ನಿರ್ಮಾಣಕ್ಕೆ ಬೇಕಾದ ಅಗತ್ಯ ದಾಖಲೆ ಗಳನ್ನು ಕ್ರೋಢೀಕರಿಸಿ ಶಾಶ್ವತ ಮನೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ.
Advertisement