Advertisement

Karnataka ಬರಪರಿಹಾರ ಬಿಡುಗಡೆ: ಕೇಂದ್ರದಿಂದ ಮಲತಾಯಿ ಧೋರಣೆ

10:56 PM Oct 28, 2023 | Team Udayavani |

ಮಂಗಳೂರು: ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ. ಬರ ಪರಿಹಾರವಾಗಿ ಕೇಂದ್ರದಿಂದ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

Advertisement

ಉಡುಪಿ ವಿಶ್ವ ಬಂಟರ ಸಮ್ಮೇಳನಕ್ಕೆ ತೆರಳುವ ಮುನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತ ನಾಡಿ ಅವರು, ಬರ ಅಧ್ಯಯನ ಮಾಡಲು ರಾಜ್ಯಕ್ಕೆ ಕೇಂದ್ರದಿಂದ ತಂಡ ಬಂದಿದೆ. ರಾಜ್ಯದಿಂದಲೂ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. 236 ತಾಲೂಕುಗಳಲ್ಲಿ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸುಮಾರು 33 ಸಾವಿರ ಕೋಟಿ ರೂ. ಬೆಳೆ ಹಾನಿಯಾಗಿದೆ. ಸುಮಾರು 17,900 ಕೋಟಿ ರೂ. ಪರಿಹಾರವನ್ನು ಕೇಂದ್ರದಿಂದ ಕೋರಲಾಗಿದೆ. ಆದರೆ ಕೇಂದ್ರ ಸಚಿವರು ರಾಜ್ಯದ ಸಚಿವರಿಗೆ ಭೇಟಿಗೆ ಸಮಯವನ್ನೂ ನೀಡುತ್ತಿಲ್ಲ ಎಂದರು.

ನಿಗಮ ಮಂಡಳಿಗಳಿಗೆ ಶೀಘ್ರ ಅಧ್ಯಕ್ಷರ ನೇಮಕ ಮಾಡಲಾಗುವುದು. ಮೊದಲ ಹಂತದಲ್ಲಿ ಕೆಲವು ಶಾಸಕರಿಗೆ ಅಧ್ಯಕ್ಷ ಸ್ಥಾನ ನೀಡಲಾಗುವುದು. ಎರಡನೇ ಹಂತದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮಾಜಿ ಶಾಸಕರನ್ನು ಪರಿಗಣಿಸಲಾಗುವುದು ಎಂದರು.

ಕೇಂದ್ರ ಕ್ರಮ ಕೈಗೊಳ್ಳಲಿ
ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ ಆಗ್ರಹ ವ್ಯಕ್ತವಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಪ್ರಕರಣದ ತನಿಖೆಯನ್ನು ಕೇಂದ್ರ ಸಿಬಿಐಯವರು ಮಾಡಿದ್ದು, ಈ ಬಗ್ಗೆ ಕೇಂದ್ರದವರೇ ಕ್ರಮ ಕೈಗೊಳ್ಳಬೇಕು ಎಂದರು.

ಪೂಂಜಾ ಬಚ್ಚಾ
ಸಿಎಂ ಅಂದರೆ ಕಲೆಕ್ಷನ್‌ ಮಾಸ್ಟರ್‌ ಎಂದು ಶಾಸಕ ಹರೀಶ್‌ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪೂಂಜಾ ಮೊನ್ನೆ ಎಂಎಲ್‌ಎ ಆದವರು. ನಾನು 1983ರಲ್ಲಿ ಶಾಸಕನಾಗಿ 85ರಲ್ಲಿ ಸಚಿವನಾದವನು. ಪೂಂಜಾ ರಾಜಕೀಯದಲ್ಲಿ ಇನ್ನೂ ಬಚ್ಚಾ ಎಂದರು. ಕಾರ್ಕಳ ಪರಶುರಾಮನ ಕಂಚಿನ ಪ್ರತಿಮೆಯ ಕುರಿತ ಪ್ರಶ್ನೆಗೆ ಉತ್ತರಿಸಿ ಸಿದ್ದರಾಮಯ್ಯ ಅವರು ಆ ಬಗ್ಗೆ ತನಿಖೆ ಮಾಡಿಸೋಣ ಎಂದಷ್ಟೇ ಹೇಳಿದರು.

Advertisement

ಅವ್ಯವಹಾರದ ತನಿಖೆ
ಉಡುಪಿ: ಸಿದ್ದರಾಮಯ್ಯ ಅವರು ಉಡುಪಿಯಲ್ಲಿ ಮಾತನಾಡಿ, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ 13 ಕೋಟಿ ರೂ. ಹಗರಣ ಆಗಿದ್ದರೆ ತನಿಖೆ ಮಾಡಿಸಿ ತಪ್ಪೆಸಗಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಅಂತೆಯೇ ಕಾರ್ಕಳ ಬೈಲೂರು ಉಮಿಕಲ್‌ ಬೆಟ್ಟದ ಮೇಲಿನ ಪರಶುರಾಮ ಥೀಮ್‌ ಪಾರ್ಕ್‌ನಲ್ಲಾಗಿರುವ ಅವ್ಯವಹಾರದ ಬಗ್ಗೆಯೂ ತನಿಖೆ ನಡೆಸಲಿದ್ದೇವೆ ಎಂದು ಭರವಸೆ ನೀಡಿದರು.

ರಾಮನಗರ ಜಿಲ್ಲೆಯನ್ನು ಬೆಂಗಳೂರು ಜಿಲ್ಲೆಯೊಂದಿಗೆ ವಿಲೀನಗೊಳಿಸುವ ವಿಚಾರ ನನ್ನ ಜತೆ ಯಾರು ಚರ್ಚೆ ಮಾಡಿಲ್ಲ ಹಾಗೂ ಸರಕಾರದ ಮಟ್ಟದಲ್ಲೂ ಈ ಬಗ್ಗೆ ಚರ್ಚೆ ಆಗಿಲ್ಲ ಎಂದು ಹೇಳಿದರು.

ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ
ಕಾಂಗ್ರೆಸ್‌ ಶಾಸಕರಿಗೆ ಬಿಜೆಪಿ ಸೇರಲು 50 ಕೋ.ರೂ. ಆಫರ್‌ ನೀಡುತ್ತಿರುವ ಕುರಿತಂತೆ ಮಾಹಿತಿ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ಯಾರು ಹೇಳಿದ್ದಾರೋ ಅವರನ್ನೇ ಕೇಳಿ ನನಗೆ ಏನೂ ಮಾಹಿತಿ ಬಂದಿಲ್ಲ. ಆದರೆ ಬಿಜೆಪಿವರು ನಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಬಿಜೆಪಿಯವರು ಈ ಪ್ರಯತ್ನದಲ್ಲಿ ಸಫಲರಾಗುವುದಿಲ್ಲ. ಅವರದು ಹಗಲುಗನಸು, ನಮ್ಮ ಪಕ್ಷದ ಒಬ್ಬ ಶಾಸಕನೂ ಅವರ ಆಮಿಷಕ್ಕೆ ಒಳಗಾಗಲಾರರು ಎಂದರು.

ಲೋಕಾಭಿರಾಮ ಮಾತುಕತೆ
ಗೃಹಸಚಿವ ಡಾ| ಜಿ. ಪರಮೇಶ್ವರ್‌ ಅವರ ಮನೆಯಲ್ಲಿ ಔತಣಕೂಟದಲ್ಲಿ ಡಿ.ಕೆ. ಶಿವಕುಮಾರ್‌ ಭಾಗಹಿಸದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪರಮೇಶ್ವರ್‌ ಅವರು ಊಟಕ್ಕೆ ಕರೆದಿದ್ದರು ಅದಕ್ಕೆ ಹೋಗಿದ್ದೆ. ಸಚಿವರಾದ ಮಹಾದೇವಪ್ಪ, ಸತೀಶ್‌ ಜಾರಕಿಹೊಳಿ ಅವರೂ ಬಂದಿದ್ದರು. ಅಲ್ಲಿ ಲೋಕಾಭಿರಾಮವಾಗಿ ಮಾತನಾಡಿದ್ದೇವೆ ಹೊರತು ರಾಜಕೀಯದ ವಿಚಾರವಾಗಿ ಚರ್ಚೆ ಮಾಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next