Advertisement

ಸಂಬಂಧಗಳು ಸಡಿಲವಾಗುತ್ತಿವೆ: ಸಂಶೋಧಕ ಚಿದಾನಂದಮೂರ್ತಿ

11:23 AM Jun 27, 2017 | |

ಬೆಂಗಳೂರು: ಆಧುನಿಕ ಕಾಲದಲ್ಲಿ ಗಂಡು-ಹೆಣ್ಣಿನ ಸಂಬಂಧಗಳು ಸಡಿಲಗೊಳ್ಳುತ್ತಿದ್ದು, ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಬೇಸರ ವ್ಯಕ್ತಪಡಿಸಿದರು.

Advertisement

ಸಪ್ನ ಬುಕ್‌ಹೌಸ್‌ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ “ನವಮಿ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, “ಹಿಂದೆ ಅಪ್ಪ, ಅಮ್ಮನಿಗೆ ಹೊಡೆದಿದ್ದನ್ನು ನೋಡಿದ್ದೇನೆ. ಅಮ್ಮ ತಿರುಗಿ ಹೊಡೆಯಲಿಲ್ಲ, ಹೆಚ್ಚು ಬೈದಿದ್ದು ಕಂಡಿದ್ದೇನೆ.

ಆದರೆ, ಅವರು ಎಂದಿಗೂ ಬೇರೆಯಾಗಿರಲಿಲ್ಲ. ಅದುವೇ ನಮ್ಮ ಭಾರತೀಯ ಸಂಸ್ಕೃತಿ. ಪ್ರಸ್ತುತ ಹೆಣ್ಣು-ಗಂಡಿನ ನಡುವೆ ತಿಕ್ಕಾಟ ಹೆಚ್ಚಾಗಿದ್ದು, ಸಂಬಂಧಗಳು ಕ್ಷಣಿಕಗೊಳ್ಳುತ್ತಿವೆ. ಸಂವಹನ ಮಾಧ್ಯಮಗಳಿಂದ ಬಾಂಧವ್ಯಗಳು ಬೆಸೆಯುತ್ತಾ ಹೋಗಬೇಕೆ ಹೊರತು, ಒಡೆದು ಹೋಗಬಾರದು’ ಎಂದು ಹೇಳಿದರು.

“ಸಂಶೋಧನೆ ಮತ್ತು ಸೃಜನಶೀಲ ಸಾಹಿತ್ಯ ಬೇರೆ ಬೇರೆಯಾದರೂ ಎರಡರ ಉದ್ದೇಶ ಸತ್ಯಾನ್ವೇಷಣೆಯೇ ಆಗಿದೆ. ಉತ್ತಮ ಸಮಾಜದ ನಿರ್ಮಾಣ ಇವುಗಳ ಉದ್ದೇಶವಾಗಿದೆ. ಹೆಣ್ಣು ಹೆಚ್ಚು ಸೂಕ್ಷ್ಮಜೀವಿ, ಗಂಡು ಸಮಾಜ ಜೀವಿ. ಹೆಣ್ಣಿನೊಳಗೆ ತೊಳಲಾಟ ಹೆಚ್ಚು. ಗಂಡಿನಲ್ಲಿ ಹೊರಗಿನ ಓಡಾಟ ಜಾಸ್ತಿ. ಈ ಎರಡು ವ್ಯಕ್ತಿತ್ವದ ನಡುವಿನ ಬಾಂಧವ್ಯ ಗಟ್ಟಿಯಾಗಬೇಕು ಎನ್ನುವುದು “ನವಮಿ’ ಕೃತಿಯ ಉದ್ದೇಶವಾಗಿದೆ. ಸಂಬಂಧಗಳೇ ಇಲ್ಲಿ ಪಾತ್ರಗಳಾಗಿ ಸೆಳೆಯುತ್ತವೆ ಎಂದು ತಿಳಿಸಿದರು.

ಸಪ್ನ ಬುಕ್‌ಹೌಸ್‌ ಕನ್ನಡ ವಿಭಾಗದ ಮುಖ್ಯಸ್ಥ ಆರ್‌.ದೊಡ್ಡೆಗೌಡ ಮಾತನಾಡಿ, “ಹೆಸರಾಂತ ಲೇಖಕರ ಪುಸ್ತಕ ಪ್ರಸಾರ ಮಾಡಲು ಅನೇಕ ಪ್ರಕಾಶಕರು ತಯಾರಿರುತ್ತಾರೆ. ಆದರೆ ಉದಯೋನ್ಮುಖ ಬರಹಗಾರರಿಗೆ ಅವಕಾಶ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಪ್ನ ಬುಕ್‌ಹೌಸ್‌ ಹಲವು ಹೊಸ ಪ್ರತಿಭೆಗಳ ಪುಸ್ತಕ ಪ್ರಕಟಿಸುತ್ತಿದೆ ಎಂದ ಅವರು, ಸಾಹಿತಿಗಳಿಗೆ ಸಾವಿಲ್ಲ.

Advertisement

ಪುಸ್ತಕ, ಬರಹಗಳಿಂದ ಜೀವನದ ನಂತರವೂ ಅವರು ಅಮರರಾಗಿ ಉಳಿಯುತ್ತಾರೆ. ಸಾಹಿತ್ಯ ಕುರಿತು ಎಲ್ಲರೂ ಆಸಕ್ತಿ ವಹಿಸಬೇಕು’ ಎಂದರು. ಸಮಾರಂಭದಲ್ಲಿ ಹಿರಿಯ ಪತ್ರಕರ್ತ ರಾಜೇಂದ್ರ ಪಾಟೀಲ, ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ್‌, ಲೇಖಕಿ ವಿಜಯಲಕ್ಷ್ಮಿ ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next