Advertisement

ಮಾಸ್ಟರ್‌ ಅಥ್ಲೆಟಿಕ್ಸ್‌ನಲ್ಲಿ ರೇಖಾ ಮಿಂಚಿನ ಸಾಧನೆ

12:43 PM Jun 10, 2018 | Team Udayavani |

ಮೈಸೂರು: ಜೀವನದಲ್ಲಿ ಆತ್ಮವಿಶ್ವಾಸ, ಛಲವಿದ್ದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ವಯಸ್ಸಿನ ಅಡ್ಡಿಯಾಗುವುದಿಲ್ಲ ಎಂಬ ಮಾತಿದೆ. ಈ ಮಾತಿಗೆ ಪೂರಕವೆಂಬಂತೆ ಮೈಸೂರಿನ ಮಹಿಳೆಯೊಬ್ಬರು ದೂರದ ಕೊಲಂಬೊದಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಮೊದಲ ಪ್ರಯತ್ನದಲ್ಲೇ ಚಿನ್ನ ಹಾಗೂ ಬೆಳ್ಳಿಯ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

Advertisement

ಸಾಂಸ್ಕೃತಿಕ ನಗರಿ ಮೈಸೂರಿನ ನಿವಾಸಿ, 39 ವರ್ಷದ ರೇಖಾ ಅವರು ಇತ್ತೀಚೆಗೆ ಕೊಲಂಬೊದಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಆದರೆ, ಪೂರ್ಣ ಪ್ರಮಾಣದ ವೃತ್ತಿಪರ ತರಬೇತಿ ಇಲ್ಲದಿದ್ದರೂ ಸ್ವಂತ ಸಾಮರ್ಥಯದಿಂದ ಎಲ್ಲರ ಗಮನ ಸೆಳೆದಿದ್ದ ರೇಖಾರಿಗೆ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿತು.  

ಹ್ಯಾಮರ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಹಾಗೂ ಡಿಸ್ಕಸ್‌ ಎಸೆತದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ತಮ್ಮ ಮೊದಲ ಪ್ರಯತ್ನದಲ್ಲಿ ಸಾಧನೆಯ ಶಿಖರವನ್ನೇರಿದ್ದಾರೆ. ರೇಖಾ ಅವರ ಸಾಧನೆಗೆ ಸ್ವತಃ ಅವರ ತರಬೇತುದಾರರೂ ಅಚ್ಚರಿಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾರೆ. 

ಪದಕ ಗೆದ್ದು ಬೀಗಿದರು: ಕ್ರೀಡಾಪಟುವಾಗಬೇಕೆಂಬ ಯಾವುದೇ ನಿರೀಕ್ಷೆ ಇಲ್ಲದಿದ್ದರೂ ಅನಿರೀಕ್ಷಿತವಾಗಿ ದೊರೆತ ಅವಕಾಶ ರೇಖಾ ಅವರ ಒಳಗಿದ್ದ ಉತ್ಸಾಹಕ್ಕೆ ಮತ್ತಷ್ಟು ಪುಷ್ಟಿ ನೀಡಿತು. ಹೀಗಾಗಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಭಾಗವಹಿಸಿ, ಒಂದು ಚಿನ್ನ, ಎರಡು ಕಂಚಿನ ಪದಕ ಸೇರಿದಂತೆ ಮೂರು ಪದಕಗಳನ್ನು ಗೆದ್ದರು.

ಮೊದಲ ಪ್ರಯತ್ನದಲ್ಲೇ ರೇಖಾ ಅವರು ಮಾಡಿದ ಸಾಧನೆ ಮುಂದೆ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ತಂದುಕೊಟ್ಟಿತು. ಈ ಪ್ರಯತ್ನದಲ್ಲೂ ಯಶಸ್ಸು ಸಾಧಿಸಿದ ರೇಖಾ, ಹ್ಯಾಮರ್‌ ಥ್ರೋನಲ್ಲಿ ಕಂಚಿನ ಪದಕ ಗೆದ್ದು, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸುವರ್ಣಾವಕಾಶ ಕಲ್ಪಿಸಿಕೊಟ್ಟಿತು.

Advertisement

ಹೀಗಾಗಿ ಕೊಲಂಬೊದಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ದೊರೆಯಿತು. ಇನ್ನು ಕೊಲಂಬೊಗೆ ವಿಮಾನದಲ್ಲಿ ಪ್ರಯಾಣಿಸುವ ವೇಳೆ ರೇಖಾ ತೀವ್ರ ಜ್ವರದಿಂದ ಬಳಲುತ್ತಿದ್ದರು. ಆದರೂ ಇತರೆ ಕ್ರೀಡಾಪಟುಗಳ ಪ್ರೋತ್ಸಾಹದಿಂದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ, ಹ್ಯಾಮರ್‌ ಥ್ರೋ ಹಾಗೂ ಶಾಟ್‌ಪುಟ್‌ ಎಸೆತದಲ್ಲಿ ಚಿನ್ನ ಹಾಗೂ ಡಿಸ್ಕಸ್‌ ಥ್ರೋನಲ್ಲಿ ಬೆಳ್ಳಿ ಪದಕವನ್ನು ಗೆದ್ದು ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. 

ರೇಖಾ ಅವರ ಸಾಧನೆ ಬಗ್ಗೆ ತರಬೇತುದಾರರಾದ ಡಿ.ಎಸ್‌.ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಾವುದೇ ತರಬೇತಿ ಇಲ್ಲದೆ, ತಮ್ಮ ಶ್ರದ್ಧೆ ಹಾಗೂ ಪರಿಶ್ರಮದಿಂದ ರೇಖಾ  ಸಾಧನೆ ಮಾಡಿದ್ದಾರೆ. ಸರ್ಕಾರ ಹಾಗೂ ಸಾರ್ವಜನಿಕರು ರೇಖಾ ಅವರ ಪ್ರತಿಭೆ ಗುರುತಿಸುವ ನಂಬಿಕೆ ಇದ್ದು, ಮುಂದಿನ ದಿನಗಳಲ್ಲಿ ಸೂಕ್ತ ತರಬೇತಿ ನೀಡಿದೆರೆ ಮತ್ತಷ್ಟು ಸಾಧನೆ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಸ್ನೇಹಿತೆ ಸರೋಜಾ ಹಾಗೂ ತರಬೇತುದಾರರಾದ ರವಿ ಅವರ ಪ್ರೋತ್ಸಾಹ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಇವರೊಂದಿಗೆ ಪತಿ ಹಾಗೂ ಮಗಳು ಉತ್ತಮ ಬೆಂಬಲ ನೀಡಿದ್ದಾರೆ. ಜತೆಗೆ ಉತ್ತಮ ಬೆಂಬಲ ನೀಡಿದ ಜಿಲ್ಲಾ ಮಾಸ್ಟರ್‌ ಅಥ್ಲೆಟಿಕ್‌ ಅಸೋಸಿಯೇಷನ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಾಧನೆ ಮಾಡಿ, ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದುಕೊಡುತ್ತೇನೆ. 
-ರೇಖಾ, ಪದಕ ವಿಜೇತೆ

ಕೊಲಂಬೊದಲ್ಲಿ ಪದಕ ಗೆದ್ದ ಇತರರು 
-ವಿಜಯ ರಮೇಶ್‌(60+) ಜಾವೆಲಿನ್‌ ಥ್ರೋ-ಚಿನ್ನ 
-ಬಲರಾಮೇಗೌಡ (65+) 100ಮೀ – ಬೆಳ್ಳಿ, 200ಮೀ – ಬೆಳ್ಳಿ
-ವಿಶ್ವೇಶ್ವರ ಆರಾಧ್ಯ(65+) 5 ಕಿ.ಮೀ. ವಾಕ್‌-ಬೆಳ್ಳಿ
-ಸಿ.ಆರ್‌.ಆನಂದ್‌(60+) ಹ್ಯಾಮರ್‌ ಥ್ರೋ-ಬೆಳ್ಳಿ 

ಕ್ರೀಡೆಗೆ ನಿರೀಕ್ಷಿತ ಆಗಮನ: ಮೊದಲ ಪ್ರಯತ್ನದಲ್ಲೇ ಪದಕಗಳಿಗೆ ಮುತ್ತಿಕ್ಕಿರುವ ರೇಖಾರಿಗೆ ಕ್ರೀಡಾಲೋಕಕ್ಕೆ ಪದಾರ್ಪಣೆ ಮಾಡಿದ್ದು ತೀರಾ ಅನಿರೀಕ್ಷಿತ. ವರ್ಷಗಳ ಹಿಂದೆ ಗೃಹಿಣಿಯಾಗಿದ್ದ ರೇಖಾ, 3 ವರ್ಷದ ಹಿಂದೆ ನಗರದ ಮೈಸೂರು ವಿವಿ ಓವೆಲ್‌ ಮೈದಾನಕ್ಕೆ ತಮ್ಮ ಮಗಳಿಗೆ ಅಥ್ಲೆಟಿಕ್‌ ತರಬೇತಿ ಕೊಡಿಸುವ ಸಲುವಾಗಿ ಕರೆದುಕೊಂಡು ಬರುತ್ತಿದ್ದರು.

ಹೀಗೆ ಮಗಳ ತರಬೇತಿ ಮುಗಿಯುವವರೆಗೂ ಓವೆಲ್‌ ಮೈದಾನದ ಸುತ್ತಲೂ ವಾಕಿಂಗ್‌ ಮಾಡುತ್ತಾ, ಕಾಲ ಕಳೆಯುತ್ತಿದ್ದರು. ಈ ವೇಳೆ ರೇಖಾರ ಪ್ರತಿಭೆ ಗಮನಿಸಿದ ಸ್ನೇಹಿತೆ ಹಾಗೂ ಮಾಜಿ ಅಥ್ಲೀಟ್‌ ಸರೋಜಾ, ತನ್ನ ತರಬೇತುದಾರ ರವಿ ಅವರಿಗೆ ರೇಖಾರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಈ ವೇಳೆ ತರಬೇತುದಾರ ರವಿ, ಹ್ಯಾಮರ್‌, ಡಿಸ್ಕಸ್‌ ಹಾಗೂ ಶಾಟ್‌ಪುಟ್‌ ಎಸೆಯುವ ಅಭ್ಯಾಸ ಮಾಡುವಂತೆ ಹೇಳಿದ್ದರು.

ಹೀಗೆ ಅನಿರೀಕ್ಷಿತವಾಗಿ ಒಲಿದುಬಂದ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡ ರೇಖಾ, ಕೆಲವೇ ತಿಂಗಳಲ್ಲಿ ತಮ್ಮ ಸಾಮರ್ಥ್ಯ , ಪ್ರತಿಭೆ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೇ ರೇಖಾರ ಪ್ರತಿಭೆ ಹಾಗೂ ಪರಿಶ್ರಮದ ಫ‌ಲವಾಗಿ ರಾಜ್ಯಮಟ್ಟದ ಮಾಸ್ಟರ್‌ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ಹುಡುಕಿಕೊಂಡು ಬಂದಿತು. 

* ಸಿ. ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next