Advertisement

ರೇಖಾ ಕೊಲೆಗೆ 2-3 ತಿಂಗಳ ಸ್ಕೆಚ್: ಕದಿರೇಶ್ ಸಹೋದರಿ ಮಾಲಾ, ಆಕೆಯ ಪುತ್ರನ ಸೆರೆ

08:40 AM Jun 28, 2021 | Team Udayavani |

ಬೆಂಗಳೂರು: ಛಲವಾದಿಪಾಳ್ಯದ ಮಾಜಿ ಕಾರ್ಪೋರೇಟರ್‌ ರೇಖಾ ಕದಿರೇಶ್‌ ಹತ್ಯೆ ಪ್ರಕರಣದ ಕಿಂಗ್‌ಪಿನ್‌ಗಳಾದ ಕದಿರೇಶ್‌ ಸಹೋದರಿ ಮಾಲಾ ಮತ್ತು ಆಕೆಯ ಪುತ್ರ ಅರುಳ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಈ ಮೂಲಕ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ. ಈ ಮಧ್ಯೆ ಪ್ರಕರಣದ ಮಾಸ್ಟರ್‌ ಮೈಂಡ್‌ “ಕ್ಯಾಪ್ಟಲ್‌ ಅಲಿಯಾಸ್‌ ಸೆಂಥಿಲ್‌ ‘ಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಮಾಲಾ, ಆಕೆಯ ಪುತ್ರ ಅರುಳ್‌ ಪಾತ್ರ ಬಹುತೇಕ ಸಾಬೀತಾಗಿದ್ದು, ಸೂಕ್ತ ಸಾಕ್ಷಾಧಾರಗಳು ಸಿಕ್ಕಿವೆ. ಹಣಕಾಸು ಮತ್ತು ರಾಜಕೀಯ ಕಾರಣಕ್ಕಾಗಿ ಪೀಟರ್‌ ಮತ್ತು ಆತನ ಸಹಚರರನ್ನುಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ.

ಮುಂಬರುವ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ರೇಖಾ ಕದಿರೇಶ್‌ ಸಿದ್ಧವಾಗಿದ್ದರು. ಬಿಜೆಪಿಯಿಂದ ಟಿಕೆಟ್‌ ಕೂಡ ಖಚಿತವಾಗಿತ್ತು. ಆದರೆ, ಕದಿರೇಶ್‌ ಸಹೋದರಿ ಮಾಲಾ, ಬಿಎಸ್‌ಪಿಯಿಂದ ಚುನಾವಣೆ ಸ್ಪರ್ಧಿಸಲು ಮುಂದಾಗಿದ್ದಳು. ಒಂದು ತನಗೆ ಟಿಕೆಟ್‌ ಸಿಗದಿದ್ದರೆ, ಪುತ್ರಿ ಕಸ್ತೂರಿ ಅಥವಾ ಅರುಳ್‌ ಪತ್ನಿ ಪೂರ್ಣಿಮಾಳನ್ನು ಚುನಾವಣೆಗೆ ನಿಲ್ಲಿಸಲು ಸಿದ್ಧತೆ ನಡೆಸಿದ್ದಳು. ಆದರೆ, ದಿನೇ ದಿನೆ ವಾರ್ಡ್‌ನಲ್ಲಿ ರೇಖಾ ಜನಪ್ರಿಯತೆ, ವರ್ಚಸ್ಸು ಹೆಚ್ಚಾಗುತ್ತಿತ್ತು. ಜತೆಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಗಳಲ್ಲೂ ರೇಖಾ ಮನ್ನಣೆ ಪಡೆದುಕೊಂಡಿದ್ದರು. ಹೀಗಾಗಿ ತನ್ನ ಹಾಗೂ ತನ್ನ ಕುಟುಂಬದ ಭವಿಷ್ಯಕ್ಕೆ ರೇಖಾ ಅಡಿಯಾಗುತ್ತಿದ್ದಾಳೆ ಎಂದು ನಿಶ್ಚಯಿಸಿದ್ದ ಮಾಲಾ, ಪುತ್ರ ಅರುಳ್‌ ಜತೆ ಸೇರಿಕೊಂಡು ರೇಖಾ ಹತ್ಯೆಗೆ ಮೂರು ತಿಂಗಳ ಹಿಂದೆಯೇ ಸಿದ್ಧತೆ ನಡೆಸಿದ್ದರು.

ಹಂತಕರ ಸಂಪರ್ಕ: ಸುಮಾರು 25 ವರ್ಷಗಳ ಹಿಂದೆ ಕಳ್ಳಭಟ್ಟಿ ಸಾರಾಯಿ ದಂಧೆ ನಡೆಸುತ್ತಿದ್ದ ಮಾಲಾ, ಸಾರಾಯಿ ನಿಷೇಧಿಸುತ್ತಿದ್ದಂತೆ ಗಾಂಜಾ ದಂಧೆ ನಡೆಸುತ್ತಿದ್ದಳು. ಹೀಗಾಗಿ ಒಂದೆರಡು ಬಾರಿ ತನ್ನ ಹಳೇ ಸಂಪರ್ಕದಲ್ಲಿದ್ದ ನಗರದ ಕೆಲ ರೌಡಿಗಳು, ಜತೆಗೆ ಕದಿರೇಶ್‌ ಹತ್ಯೆಗೈದ ಶೋಭನ್‌ ಗ್ಯಾಂಗ್‌ ನ ಕೆಲ ರೌಡಿಗಳು, ಸುಪಾರಿ ಹಂತಕರನ್ನು ಸಂಪರ್ಕಿಸಿದ್ದಳು ಎಂದು ಹೇಳಲಾಗಿದೆ. ಆದರೆ, ಅವರು ಯಾರು ಒಪ್ಪಿಕೊಂಡಿರಿಲ್ಲ. ಮತ್ತೂಂದೆಡೆ ಪೀಟರ್‌ ಇರುವವರೆಗೂ ರೇಖಾ ಹತ್ಯೆ ಸಾಧ್ಯವಿಲ್ಲ ಎಂದ ಮಾಲಾ ಅಂದುಕೊಂಡಿದ್ದಳು.

ಇದನ್ನೂ ಓದಿ:ಪುಲ್ವಾಮಾ: ಮನೆಗೆ ನುಗ್ಗಿ ಪೊಲೀಸ್ ವಿಶೇಷಾಧಿಕಾರಿ ಮತ್ತು ಪತ್ನಿಯನ್ನು ಕೊಂದ ಉಗ್ರರು!

Advertisement

ಈ ಮಧ್ಯೆ ಪೀಟರ್‌ ಪತ್ನಿ ಒಮ್ಮೆ ವೈಯಕ್ತಿಕ ವಿಚಾರ ಕುರಿತು ರೇಖಾಗೆ ಪ್ರಶ್ನಿಸಿದ್ದರು. ಅದರಿಂದ ರೇಖಾ, ಪೀಟರ್‌ನನ್ನು ದೂರುಇಡಲು ಆರಂಭಿಸಿದ್ದಳು. ಅಲ್ಲದೆ, ಪೀಟರ್‌ಗೆ ಸೇರಬೇಕಿದ್ದ 10 ಲಕ್ಷದ ಗಾರ್ಬೆಜ್‌ ಬಿಲ್‌ ಅನ್ನು ರೇಖಾ ತಡೆಯೊಡ್ಡಿದ್ದಳು. ಅದರಿಂದ ರೇಖಾ ವಿರುದ್ಧ ಆಕ್ರೋಶ ಗೊಂಡಿದ್ದ. ಆತನ ಕೋಪವನ್ನು ತನ್ನ ಗಾಳವಾಗಿ ಬಳಸಿಕೊಂಡ ಮಾಲಾ, ಪೀಟರ್‌ ಗೆ, ಕದಿರೇಶ್‌ ಹತ್ಯೆಗೆ ರೇಖಾ ಕೂಡ ಕಾರಣ. ಕದಿರೇಶ್‌ ಬದುಕ್ಕಿದ್ದಾಗ ನಿಮ್ಮ ತಂಡದಲ್ಲಿ ಎಷ್ಟು ಮಂದಿ ಯುವಕರಿದ್ದರು. ಈಗ ಎಷ್ಟು ಮಂದಿ ಇದ್ದಿರಾ? ರೇಖಾ ಯಾರಿಗೂ ಬದುಕುವುದಕ್ಕೆ ಬಿಡುವುದಿಲ್ಲ ಎಂದೆಲ್ಲ ಪ್ರಚೋದಿಸಿದ್ದಳು. ಅದರಿಂದ ಆಕ್ರೋಶಗೊಂಡಿದ್ದ ಪೀಟರ್‌, ಹತ್ಯೆಗೆ ಸಹಕಾರ ನೀಡಲು ಒಪ್ಪಿದ್ದ ಎಂದು ಮೂಲಗಳು ತಿಳಿಸಿವೆ.

ಜೈ ಕದಿರೇಶ್‌ ಎಂದು ಕೂಗಿದರು!: ಕದಿರೇಶ್‌ ಇದ್ದಾಗ ತನ್ನೊಂದಿಗಿದ್ದ ಪ್ರತಿಯೊಬ್ಬರನ್ನು ಬಹಳ ಚನ್ನಾಗಿ ನೋಡಿಕೊಳ್ಳುತ್ತಿದ್ದ. ಅವರಕಷ್ಟ-ಸುಖಗಳಿಗೆ ಪಾಲುದಾರನಾಗುತ್ತಿದ್ದ. ಆದರೆ, ಆತ ಕೊಲೆಯಾದ ಬಳಿಕ ರೇಖಾ ಎಲ್ಲರನ್ನು ದೂರ ಇಟ್ಟಿದ್ದಳು. ಹೀಗಾಗಿ ಎಲ್ಲ ಆರೋಪಿಗಳು ಮಾಲಾ ಮತ್ತು ಆಕೆಯ ಪುತ್ರ ಅರುಳ್‌ ಗೆ ಕೃತ್ಯಕ್ಕೆ ಸಾಥ್‌ ನೀಡಿದ್ದರು. ಗುರುವಾರ ಬೆಳಗ್ಗೆ ರೇಖಾಳನ್ನುಕೊಲೆಗೈದ ಆರೋಪಿಗಳು, ಬಳಿಕ ಜೈ ಕದಿರೇಶ್‌ ಎಂದು ಐದಾರು ಬಾರಿ ಕೂಗಿ ಸ್ಥಳದಿಂದ ಪರಾರಿಯಾಗಿದ್ದರು.

ಕ್ಯಾಪ್ಟಲ್‌ ಅಲಿಯಾಸ್‌ ಸೆಂಥಿಲ್‌ಗಾಗಿ ಶೋಧ: ಮಾಲಾ ಸೂಚನೆ ಮೇರೆಗೆ ಕೃತ್ಯ ಎಸಗಿದ ಆರೋಪಿಗಳಿಗೆ ಅದೇ ವಾರ್ಡ್‌ನ ಕ್ಯಾಪ್ಟಲ್‌ ಆಲಿಯಾಸ್‌ ಸೆಂಥಿಲ್‌ ಆಶ್ರಯ ನೀಡಿದ್ದ. ಅಲ್ಲದೆ, ಕೃತ್ಯಕ್ಕೆ ಎಲ್ಲ ರೀತಿಯ ನೆರವು ನೀಡಿದ್ದ. 2-3 ತಿಂಗಳ ಹಿಂದೆ ಮಾಲಾಳ ಮನೆ ಮತ್ತು ವಾರ್ಡ್‌ನಕೆಲ ಪ್ರದೇಶಗಳಲ್ಲಿ ಮಾಲಾ, ಸೆಂಥಿಲ್‌ ಹಾಗೂ ಬಂಧಿತರು ಸಭೆ ನಡೆಸಿ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಈ ವೇಳೆ ಒಂದು ವೇಳೆ ತಾವುಗಳು ಜೈಲು ಸೇರಿದರೆ, ನಮ್ಮಗಳಕುಟುಂಬವನ್ನು ನೋಡಿಕೊಳ್ಳಬೇಕು. ಜೈಲಿನಿಂದ ಹೊರಗಡೆ ಬರಲು ಸಹಾಯ ಮತ್ತು ಆರ್ಥಿಕ ಸಹಾಯ ಮಾಡಬೇಕು ಎಂದು ಮಾಲಾಗೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಮಾಲಾ ಕೂಡ ಒಪ್ಪಿಗೆ ನೀಡಿದ್ದಳು ಎಂದು ಹೇಳಲಾಗಿದೆ. ಸದ್ಯ ಸೆಂಥಿಲ್‌ ಸೇರಿ ಇತರೆ ಮೂವರು ಆರೋಪಿಗಳಿಗಾಗಿ ಶೋಧ ಮುಂದುವರಿದೆ ಎಂದು ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next