Advertisement

ಆಸ್ತಿ ಘೋಷಿಸಲು ಪಂಚಾಯ್ತಿ ಸದಸ್ಯರ ಹಿಂದೇಟು

02:15 PM Jun 01, 2018 | |

ಮೈಸೂರು: ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಗಳ ಚುನಾಯಿತ ಪ್ರತಿನಿಧಿಗಳು ತಮ್ಮ ಆಸ್ತಿ ಘೋಷಣೆಗೆ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಚುನಾವಣಾ ಆಯೋಗ ನೀಡಿದ್ದ ಗಡುವು ಮುಗಿದು ತಿಂಗಳು ಕಳೆದಿದ್ದರೂ ರಾಜ್ಯದ ಮೂರು ಸ್ತರದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಒಟ್ಟು ಚುನಾಯಿತ ಪ್ರತಿನಿಧಿಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಸದಸ್ಯರು ಈವರೆಗೂ ಆಸ್ತಿ ಘೋಷಣೆಗೆ ಮುಂದಾಗಿಲ್ಲ.

Advertisement

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ನಿಯಮಗಳು-2016 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993, ಪ್ರಕರಣ 43(ಬಿ), 136(ಎ), 175 (ಎ)ರಂತೆ ಕ್ರಮವಾಗಿ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್‌ ಸದಸ್ಯರು 2 ಲಕ್ಷಕ್ಕಿಂತ ಹೆಚ್ಚಿನ ಚರ ಮತ್ತು ಸ್ಥಿರ ಆಸ್ತಿಯನ್ನು ಮತ್ತು ಹೊಣೆಗಾರಿಕೆಯನ್ನು ಹೊಂದಿರುವುದರ ಬಗ್ಗೆ ನಮೂನೆ-1ರಲ್ಲಿ ಸಂಬಂಧಿಸಿದ ಪಿಡಿಒ, ಇಒ, ಸಿಇಒಗಳ ಮೂಲಕ ರಾಜ್ಯ ಚುನಾವಣಾ ಆಯೋಗಕ್ಕೆ ಏಪ್ರಿಲ್‌ 30ರೊಳಗೆ ಆಸ್ತಿ ಘೋಷಣೆ ಮಾಡಿಕೊಳ್ಳಬೇಕು.

ಈ ಸಂಬಂಧ ರಾಜ್ಯ ಚುನಾವಣಾ ಆಯೋಗ 2018ರ ಫೆ.28ರಂದೇ ರಾಜ್ಯದ ಎಲ್ಲಾ ಜಿಪಂ ಸಿಇಒ ಹಾಗೂ ತಾಪಂ ಇಒ ಅಧಿಕಾರಿಗಳಿಗೆ ಪತ್ರ ಬರೆದು ನಿಗದಿತ ನಮೂನೆಯನ್ನು ಕಳುಹಿಸಿಕೊಟ್ಟಿದೆ. ಆದರೆ, ಈ ಮಧ್ಯೆ ವಿಧಾನಸಭಾ ಚುನಾವಣೆ ಎದುರಾದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಚುನಾವಣಾ ಕಾರ್ಯದ ಒತ್ತಡದಲ್ಲಿ ಆಸ್ತಿ ಘೋಷಣೆಗೆ ಮುಂದಾಗಿಲ್ಲ.

ರಾಜ್ಯದ 30 ಜಿಲ್ಲಾ ಪಂಚಾಯತ್‌ ಗಳ 961 ಸದಸ್ಯರು, 176 ತಾಲೂಕು ಪಂಚಾಯತ್‌ಗಳ ಸುಮಾರು 4ಸಾವಿರ ಚುನಾಯಿತ ಪ್ರತಿನಿಧಿಗಳು ಹಾಗೂ 5 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳ 1 ಲಕ್ಷಕ್ಕೂ ಹೆಚ್ಚು ಚುನಾಯಿತ ಪ್ರತಿನಿಧಿಗಳು ಆಸ್ತಿ ಘೋಷಣೆ ಮಾಡಿಕೊಳ್ಳಬೇಕಿದೆ. ಹಿಂದೆಲ್ಲಾ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಆಯಾಯ ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಗೆ ಪ್ರತಿ ವರ್ಷ ಆಸ್ತಿ ವಿವರಗಳನ್ನು ಸಲ್ಲಿಸಬೇಕಿತ್ತು.

ಆದರೆ, ರಾಜ್ಯ ಸರ್ಕಾರ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ-1993ಕ್ಕೆ ತಿದ್ದುಪಡಿ ತಂದಿದ್ದು, ಈ ತಿದ್ದುಪಡಿ ಅಧಿನಿಯಮ 2016ರ ಫೆ.25ರಿಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪ್ರತಿಯೊಬ್ಬ ಸದಸ್ಯರೂ ತಾನು ಮತ್ತು ತನ್ನ ಅವಿಭಕ್ತ ಕುಟುಂಬದ ಸದಸ್ಯರು 2ಲಕ್ಷಕ್ಕಿಂತ ಹೆಚ್ಚಿನ ಚರ-ಸ್ಥರ ಆಸ್ತಿಯನ್ನು ಮತ್ತು ಹೊಣೆಗಾರಿಕೆಯನ್ನು ಹೊಂದಿರುವ ಬಗ್ಗೆ ನಮೂನೆ-1ರಲ್ಲಿ ಭರ್ತಿ ಮಾಡಿ ಸಲ್ಲಿಸಬೇಕಿದೆ. 

Advertisement

ಹೊಸದಾಗಿ ಚುನಾಯಿತರಾದ ಸದಸ್ಯರು ತಮ್ಮ ಪದಾವಧಿ ಪ್ರಾರಂಭವಾದ ದಿನಾಂಕದಿಂದ 3 ತಿಂಗಳೊಳಗೆ, ನಂತರ ಸ್ಥಳೀಯ ಸಂಸ್ಥೆಯ ಚುನಾಯಿತ ಅವಧಿಯಲ್ಲಿ ಪ್ರತಿ ವರ್ಷ ಏಪ್ರಿಲ್‌ ತಿಂಗಳಾಂತ್ಯದೊಳಗೆ, ಚರ-ಸ್ಥಿರ ಆಸ್ತಿಯಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ 45 ದಿನಗಳ ಒಳಗೆ ಪರಿಷ್ಕೃತ ನಮೂನೆ-1ರಲ್ಲಿ ಸಲ್ಲಿಸಬೇಕು. ಈ ರೀತಿ ನಿಗದಿತ ಅವಧಿಯಲ್ಲಿ ಆಸ್ತಿ ಘೋಷಣೆ ಮಾಡದ, ತಪ್ಪು$ಮಾಹಿತಿ ನೀಡಿದವರ ಸದಸ್ಯತ್ವವನ್ನು ಚುನಾವಣಾ ಆಯೋಗ ರದ್ಧುಪಡಿಸಲಿದೆ.

ಈ ವರ್ಷ ಆನ್‌ ಲೈನ್‌: ಜೊತೆಗೆ 2018-19ನೇ ಸಾಲಿನಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳ ಆಸ್ತಿ ಘೋಷಣೆಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಲು ಚುನಾವಣಾ ಆಯೋಗ ಎನ್‌ಐಸಿ ಮೂಲಕ ತಂತ್ರಾಂಶವನ್ನು ಸಿದ್ಧಪಡಿಸಿದೆ. ಈ ಸಾಲಿನಿಂದ ಆನ್‌ಲೈನ್‌ ನಲ್ಲಿ ಆಸ್ತಿ ಘೋಷಣೆ ಜಾರಿಗೆ ತರಲು ಆಯೋಗ ನಿರ್ಧರಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಎಲ್ಲಾ ಜಿಪಂ  ಸಿಇಒ, ತಾಪಂ  ಇಒಗಳು, ಪಿಡಿಒಗಳು ಅವರ ಕ್ಷೇತ್ರಗಳಿಗೆ ಅನುಗುಣವಾಗಿ ಸದಸ್ಯರ ಮ್ಯಾಪಿಂಗ್‌ ಮಾಡಲು ತಿಳಿಸಲಾಗಿದೆ.                   

ಆಸ್ತಿ ವಿವರ ಸಲ್ಲಿಸದ 11 ಮಂದಿ ಸದಸ್ಯತ್ವ ರದ್ದು: 2016ನೇ ಸಾಲಿನ ಆಸ್ತಿ ಘೋಷಣೆ ಮಾಡದ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕು ಆಲದಕಟ್ಟಿ ಕೆ.ಎಂ. ಗ್ರಾಮ ಪಂಚಾಯ್ತಿಯ ರಾಜಶೇಖರ ಶಿವಲಿಂಗಯ್ಯ ಹಿರೇಮಠ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಗರಗ ಗ್ರಾಪಂನ ಜಿ.ಪಿ.ಓಂಕಾರಪ್ಪ, ತುಮಕೂರು ತಾಲೂಕು ಗಂಗೋನಹಳ್ಳಿ ಗ್ರಾಪಂ ಸದಸ್ಯೆ ರಾಜಮ್ಮ, 2017ನೇ ಸಾಲಿನ ಆಸ್ತಿ ವಿವರ ಸಲ್ಲಿಸದ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಕಾರ್ಮಾಡು ಗ್ರಾಪಂ ಸದಸ್ಯ ಸಿ.ಪಿ.ಸಮೀರ,

ಬಲ್ಲಮಾವಟಿ ಗ್ರಾಪಂ ಸದಸ್ಯೆ ಮೇದರ ಶೋಭಾ ಮಂದಣ್ಣ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ನಗರಕೆರೆ ಗ್ರಾಪಂ ಸದಸ್ಯೆ ರೂಪಾ, ಹಾಸನ ತಾಲೂಕು ಕೌಶಿಕ ಗ್ರಾಪಂ ಸದಸ್ಯೆ ಶಾರದಾಬಾಯಿ, ಸತ್ಯಮಂಗಲ ಗ್ರಾಪಂ ಸದಸ್ಯ ಎ.ಶ್ರೀನಿವಾಸ್‌, ಬೆಂಗಳೂರು ಉತ್ತರ ತಾಲೂಕು ಹುರಳಿಚಿಕ್ಕನಹಳ್ಳಿ ಗ್ರಾಪಂ ಸದಸ್ಯೆ ಪುಷ್ಪಲತಾ ಎ., ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಹಲಕಟ್ಟಾ ಗ್ರಾಪಂ ಸದಸ್ಯೆ ರೇಣುಕಾ ಅವರನ್ನು ಸದಸ್ಯತ್ವದಿಂದ ತೆಗೆದುಹಾಕಲಾಗಿದೆ.

ಪ್ರತಿ ವರ್ಷ ಏಪ್ರಿಲ್‌ 30ರೊಳಗೆ ಆಸ್ತಿ ಘೋಷಣೆ ಮಾಡಿಕೊಳ್ಳಬೇಕು. ಜೂನ್‌ 30ರವರೆಗೂ ಕಾಲಾವಕಾಶ ನೀಡಿದ್ದೇವೆ. 2017-18ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆ ಘೋಷಣೆ ಸಲ್ಲಿಸದೇ ಇರುವವರು ಕೂಡಲೇ ಆನ್‌ಲೈನ್‌ ನಲ್ಲಿ ಸಲ್ಲಿಸಬೇಕು. 
-ರಂಜಿತಾ, ಅಧೀನ ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next