Advertisement

“ಫ್ರೂಟ್ಸ್‌’ನಲ್ಲಿ ನೋಂದಣಿ: ಕರಾವಳಿಯಲ್ಲಿ ಶೇ. 55ರಷ್ಟು ಬಾಕಿ!

11:02 PM Nov 29, 2023 | Team Udayavani |

ಮಂಗಳೂರು: “ಫ್ರೂಟ್ಸ್‌’ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ತಂತ್ರಾಂಶದಲ್ಲಿ ರೈತರ ಎಲ್ಲ ಜಮೀನಿನ ಮಾಹಿತಿಯನ್ನು ದಾಖಲಿಸುವ ಪ್ರಕ್ರಿಯೆಯು ಎರಡೂ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿದೆ.

Advertisement

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರೈತರ ಐಡಿ ನಮೂದು ಪ್ರಕ್ರಿಯೆ ಇಲಾಖಾ ಮಟ್ಟದಿಂದ ಶೇ. 80ರಷ್ಟು ನಡೆದಿದ್ದರೂ ಅಗತ್ಯ ದಾಖಲೆಯನ್ನು ತಂತ್ರಾಂಶದಲ್ಲಿ ದಾಖಲೀಕರಣ ಮಾಡುವಲ್ಲಿ ಮಾತ್ರ ಹಿಂದೆ ಉಳಿದಿದೆ. ಸದ್ಯ ಎರಡೂ ಜಿಲ್ಲೆ ಗಳಲ್ಲಿ ತಲಾ ಶೇ. 45ರಷ್ಟು ಮಾತ್ರ ನೋಂದಣಿ ನಡೆದಿದೆ. ಹೀಗಾಗಿ ಬಹು ಪಾಲು ರೈತರ ದಾಖಲೆಗಳ ನೋಂದಣಿ ಆಗಲು ಇನ್ನೂ ಬಾಕಿ ಇದೆ.

ಕ್ಷೇತ್ರ ಮಟ್ಟದಲ್ಲಿ ಕಂದಾಯ, ಕೃಷಿ ಹಾಗೂ ತೊಟಗಾರಿಕೆ ಇಲಾಖೆಗಳ ಲಾಗಿನ್‌ಗಳನ್ನು ಅಭಿಯಾನ ರೂಪದಲ್ಲಿ ಕೈಗೊಂಡು ತಂತ್ರಾಂಶದಲ್ಲಿ ಶೇ. 100 “ಲ್ಯಾಂಡ್‌ ಅಪ್‌ಡೇಶನ್‌’ ಪ್ರಗತಿ ಸಾಧಿಸಲು ಇಲಾಖೆ ಉದ್ದೇಶಿಸಿದೆ.

ಫ್ರೂಟ್ಸ್‌ ತಂತ್ರಾಂಶದ ಮಾಹಿತಿ ಯನ್ನು ಸರಕಾರದ ವಿವಿಧ ಸವಲತ್ತುಗಳಾದ ಬೆಳೆ ವಿಮೆ, ಬೆಳೆ ಸಾಲ ವಿತರಣೆ, ಬೆಳೆ ಪರಿಹಾರ ವಿತರಣೆ, ಬೆಂಬಲ ಬೆಲೆ ಅನುಷ್ಠಾನ ಪಹಣಿಯಲ್ಲಿ ಬೆಳೆ ದಾಖಲಾತಿ ಹಾಗೂ ಸರಕಾರದ ವಿವಿಧ ಸೌಲಭ್ಯಗಳ ವಿತರಣೆಗೆ ಬಳಕೆ ಮಾಡುತ್ತಿದ್ದು, ಕಂದಾಯ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶುಸಂಗೋಪನೆ, ರೇಷ್ಮೆ, ಸಹಕಾರ ಇಲಾಖೆ ಹಾಗೂ ಸಹಕಾರ ಮತ್ತು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಈ ತಂತ್ರಾಂಶವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬರಗಾಲದಿಂದ ಉಂಟಾದ ಬೆಳೆ ನಷ್ಟಕ್ಕೆ ದೊರೆಯುವ ಪರಿಹಾರವು ಫ್ರೂಟ್ಸ್‌ ತಂತ್ರಾಂಶದ ದಾಖಲೆಯನ್ವಯ ರೈತರ ಖಾತೆಗೆ ನೇರವಾಗಿ ಮುಂದಿನ ದಿನದಲ್ಲಿ ಜಮೆಯಾಗಲಿದೆ.

ನೋಂದಣಿಗೆ ಇನ್ನೂ ಅವಕಾಶ
ರೈತರು ತಮ್ಮ ಆಧಾರ್‌ ಕಾರ್ಡ್‌ ಪ್ರತಿ, ಬ್ಯಾಂಕ್‌ ಖಾತೆ ಮತ್ತು ಶಾಖೆಯ ವಿವರ, ಬ್ಯಾಂಕ್‌ ಐಎಫ್‌ಎಸ್‌ಸಿ ಕೋಡ್‌, ಪಡಿತರ ಚೀಟಿಯ ವಿವರ, ಮೊಬೈಲ್‌ ಸಂಖ್ಯೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ ಹಾಗೂ ತಮ್ಮ ಮಾಲಕತ್ವದ ಎಲ್ಲ ಜಮೀನಿನ ಸರ್ವೇ ನಂಬರ್‌ ವಿವರವನ್ನು ತಮ್ಮ ಹತ್ತಿರದ ತಹಶೀಲ್ದಾರರ ಕಚೇರಿ, ಕಂದಾಯ ನಿರೀಕ್ಷಕರ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ನ್ಯಾಯಬೆಲೆ ಅಂಗಡಿ ಅಥವಾ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಕಚೇರಿಗಳಿಗೆ ಒದಗಿಸಿ ತಮ್ಮ ಮಾಲಕತ್ವದ ಎಲ್ಲ ಪಹಣಿಯ ದಾಖಲೆಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಇದೆ ಎಂದು ಎರಡೂ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

ಈ ಮಾಹಿತಿಯನ್ನು ಸರಕಾರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ನೀಡಲು ಮಾತ್ರ ಬಳಸುವುದರಿಂದ ರೈತರು ನಿರ್ಭೀತಿಯಿಂದ ತಮ್ಮ ಜಮೀನಿನ ಮಾಹಿತಿಯನ್ನು ನೀಡಿ ಫ್ರೂಟ್ಸ್‌ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next