Advertisement

ಶೀತಪೀಡಿತ ಗ್ರಾಮಸ್ಥರ ಸಮಸ್ಯೆ ಆಲಿಸಿದ ಪ್ರಾದೇಶಿಕ ಆಯುಕ್ತ

09:47 PM Dec 30, 2019 | Lakshmi GovindaRaj |

ಬೇಲೂರು: ಯಗಚಿ ಜಲಾಶಯದ ಹಿನ್ನೀರಿನ ಶೀತ ಪೀಡಿತ ಪ್ರದೇಶಗಳಿಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಯಶವಂತ್‌ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ತಾಲೂಕಿನ ಶೀತ ಪೀಡಿತ ಪ್ರದೇಶಗಳಾದ ನಾರಾಯಣಪುರ ಮತ್ತು ಮಾಸುವಳ್ಳಿ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಗ್ರಾಮದ ಜನರ ಸಮಸ್ಯೆಗಳು ಮತ್ತು ಗ್ರಾಮದಲ್ಲಿರುವ ತೊಂದರೆಗಳನ್ನು ಖುದ್ದು ಪರಿಶೀಲಿಸಿದರು.

Advertisement

ಮಳೆಗಾಲದಲ್ಲಿ ತೀವ್ರ ಸಂಕಷ್ಟ: ನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಪರಮೇಶ್‌, ಯಗಚಿ ಹಿನ್ನೀರಿನಿಂದಾಗಿ ಗ್ರಾಮದಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ . ಮನೆಯಲ್ಲಿ ಶೀತ ಉಂಟಾಗಿ ಮಲಗಲೂ ಸಾಧ್ಯವಾಗುತ್ತಿಲ್ಲ ಮಳೆಗಾಲ ಬಂದರೆ ಮನೆಗಳು ಜಲವೃತಗೊಂಡು ಜೀವನ ದುಸ್ತರವಾಗಿದೆ ಎಂದು ಹೇಳಿದರು.

ಶಾಶ್ವತ ಪರಿಹಾರ ನೀಡಿ: ಕಳೆದ ಹತ್ತಾರು ವರ್ಷಗಳಿಂದ ಗ್ರಾಮದಲ್ಲಿ ಸಮಸ್ಯೆ ಇದ್ದರೂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೋಗುತ್ತಾರೆ. ಆದರೆ ಇದುವರೆಗೂ ಶಾಶ್ವತ ಪರಿಹಾರ ನೀಡಿಲ್ಲ. ಕೂಡಲೇ ಗ್ರಾಮವನ್ನು ಸ್ಥಳಾಂತರಿಸಿ ಪರ್ಯಾಯ ಜಾಗ ನೀಡುವಂತೆ ಮನವಿ ಮಾಡಿದರು.

150 ಮನೆಗಳು ಶಿಥಿಲ: ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು ಕೆಲವು ಮನೆಗಳು ಸಂಪೂರ್ಣವಾಗಿ ಹಾಳಾಗಿವೆ. ಗ್ರಾಮದ ಮಧ್ಯೆ ಇರುವ ಮೂರು ಬಾವಿಗಳಲ್ಲಿ ನೀರು ತುಂಬುತ್ತಿದೆ ಇದರಿಂದ ಏನಾದರೂ ಅಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಗ್ರಾಮದ ಬಸವಯ್ಯ, ಭಾಗ್ಯ, ರಘು, ಗೋಪಾಲ.ಸೋಮಣ್ಣ, ರಾಜಯ್ಯ, ಸೋಮ ಶೇಖರ ಮತ್ತು ಆನಂದ ಮೊದಲಾದವರ ಮನೆಗಳು ತೀವ್ರ ಶೀತದಿಂದ ಕೂಡಿದ್ದು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು. ಮಾಸುವಳ್ಳಿ ಗ್ರಾಮಕ್ಕೆ ಆಯುಕ್ತ ಯಶವಂತ್‌ ಅವರು ಭೇಟಿ ನೀಡಿ ಪರಿಶೀಲಿಸಿದಾಗ ತಾಲೂಕು ಪಂಚಾಯಿತಿ ಸದಸ್ಯೆ ಕಮಲಾ ಅವರು ಆಯುಕ್ತರಿಗೆ ಗ್ರಾಮದ ಸ್ಥಿತಿಗತಿಯನ್ನು ವಿವರಿಸಿದರು.

ಶೀತಗಾಳಿಯಿಂದ ಅನಾರೋಗ್ಯ: ಗ್ರಾಮದಲ್ಲಿ ಸುಮಾರು 47 ಮನೆಗಳಿದ್ದು, ಹಿನ್ನೀರಿನ ಪ್ರಭಾವದಿಂದ ಶೀತ ಗಾಳಿ ಬೀಸುತ್ತಿದೆ. ಇದರಿಂದ ಮಕ್ಕಳು ಹಾಗೂ ವಯಸ್ಸಾದವರು ಕಾಯಿಲೆಯಿಂದ ನರಳುತ್ತಿದ್ದು, ಪತ್ರಿ ದಿನ ಆಸ್ಪತ್ರೆಗೆ ತಿರುಗುವಂತಾಗಿದೆ ಎಂದರು.

Advertisement

ಶೌಚಾಲಯ ಗುಂಡಿ ತೆಗೆಯಲು ತೊಂದರೆ: ಮಳೆಗಾಲದಲ್ಲಿ ಪಕ್ಕದಲ್ಲಿರುವ ಯಮಸಂಧಿ ಚಾನಲ್‌ ತುಂಬಿ ಗ್ರಾಮದೊಳಗೆ ನೀರು ನುಗ್ಗುತ್ತದೆ. ಈ ಗ್ರಾಮದಲ್ಲಿ ಶೌಚಗುಂಡಿ ತೆಗೆದರೆ ನೀರು ತುಂಬುತ್ತದೆ. ಶೌಚಾಲಯ ನಿರ್ಮಾಣ ಮಾಡಲು ಸಾಧ್ಯವಾಗದೇ ಗ್ರಾಮಸ್ಥರು ತ್ರೀವ್ರ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಪರಿಹಾರ ಒದಗಿಸುವಂತೆ ಮನವಿ ಮಾಡಿದರು.

ಆರೋಗ್ಯ ಇಲಾಖೆ ಗ್ರಾಮದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳುವುದು ಸೂಕ್ತ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಿರೀಶ್‌, ಜಿಲ್ಲಾ ಪಂಚಾಯಿತಿ ಸಿಇಒ ಪರಮೇಶ್‌, ಯಗಚಿ ನೀರಾವರಿ ಇಲಾಖೆ ಎಂಜಿನಿಯರ್‌ ತಿಮ್ಮೇಗೌಡ, ಪುಟ್ಟರಾಜಪ್ಪ, ತಾಲೂಕು ಪಂಚಾಯಿತಿ ಇಒ ರವಿಕುಮಾರ್‌ ಮೊದಲಾದವರಿದ್ದರು.

ಬಾವಿಗಳಿಗೆ ಮೆಶ್‌ ಹಾಕಲು ಸೂಚನೆ: ನಾರಾಯಣಪುರ ಮತ್ತು ಮಾಸುವಳ್ಳಿ ಗ್ರಾಮಗಳನ್ನು ಪರೀಶಿಲಿಸಿದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಯಶವಂತ್‌ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಯಶವಂತ್‌, ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ನಂತರ ಮಾತನಾಡಿದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಯಶವಂತ್‌, ತಾಲೂಕಿನ ಯಗಚಿ ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿರುವ ನಾರಾಯಣಪುರ ಮತ್ತು ಮಾಸುವಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ನಾರಾಯಣಪುರದಲ್ಲಿರುವ ತೆರೆದ ಬಾವಿಗಳಲ್ಲಿರುವ ನೀರನ್ನು ತೆರವುಗೊಳಿಸಿ ಬಾವಿಗಳಿಗೆ ಭದ್ರವಾಗಿ ಮೆಶ್‌ ಅಳವಡಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶೀತಪೀಡಿತ ಉಂಟಾಗಿರುವ ಮನೆಗಳನ್ನು ಪರೀಶಿಲಿಸಿದ್ದು , ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡುವುದಾಗಿ ಆಯುಕ್ತರು ತಿಳಿಸಿದರು. ಮಾಸುವಳ್ಳಿ ಗ್ರಾಮದಲ್ಲಿರುವ ಚಾನಲ್‌ಗೆ ಸಿಮೆಂಟ್‌ ಲೈನ್‌ ನಿರ್ಮಾಣ ಮಾಡುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮದ ಜನರ ಆರೋಗ್ಯ ದೃಷ್ಟಿಯಿಂದ ಗ್ರಾಮದಲ್ಲಿ ಆರೋಗ್ಯ ಶಿಬಿರ ಏರ್ಪಡಿಸುವಂತೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next