Advertisement

KSRTC ಬಸ್‌ನಲ್ಲಿ ತೆಂಗಿನೆಣ್ಣೆ ಸಾಗಾಟ ನಿರಾಕರಣೆ: ನಿರ್ವಾಹಕ-ಮಹಿಳೆ ಮಧ್ಯೆ ವಾಗ್ವಾದ

11:26 PM Nov 12, 2023 | Team Udayavani |

ಬಂಟ್ವಾಳ: ಸರಕು ಸಾಗಾಟಕ್ಕೆ ಸಂಬಂಧಿಸಿ ಬಿ.ಸಿ.ರೋಡಿನಲ್ಲಿ ಕೆಎಸ್ಸಾರ್ಟಿಸಿ ಪ್ರಯಾಣಿಕರ ಮಧ್ಯೆ ವಾಗ್ವಾದದ ಎರಡನೇ ಘಟನೆ ವರದಿಯಾಗಿದ್ದು, ರವಿವಾರ ಮಂಗಳೂರಿನಿಂದ ಹಾಸನಕ್ಕೆ ತೆರಳುವ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ತೆಂಗಿನೆಣ್ಣೆ ತುಂಬಿದ ಕ್ಯಾನ್‌ಗಳ ಜತೆ ಪ್ರಯಾಣಿಸುತ್ತಿದ್ದಾರೆ ಎಂದು ನಿರ್ವಾಹಕ ಇಳಿಸಿ ವಾಗ್ವಾದ ನಡೆಸಿದ್ದು, ಬಳಿಕ ಪೊಲೀಸರ ಮಾತುಕತೆಯಿಂದ ಮಹಿಳೆ ಅದೇ ಬಸ್ಸಿನಲ್ಲಿ ಪ್ರಯಾಣಿಸಿದರು.

Advertisement

ಅ.15ರಂದು ಪ್ರಯಾಣಿಕರೊಬ್ಬರು 1 ಕೆಜಿ ಕೋಳಿ ಮಾಂಸ ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ ಎಂದು ಚಾಲಕ ಬಸ್‌ ಅನ್ನು ನೇರವಾಗಿ ನಗರ ಠಾಣೆಗೆ ಕೊಂಡು ಹೋದ ಘಟನೆ ವರದಿಯಾಗಿತ್ತು.

ರವಿವಾರ ಹಾಸನಕ್ಕೆ ತೆರಳುವ ಬಸ್ಸಿಗೆ ಮಂಗಳೂರಿನಲ್ಲಿ ಚೀಲವೊಂದನ್ನು ಹಿಡಿದು ಮಹಿಳೆ ಹತ್ತಿದ್ದರು. ನಿರ್ವಾಹಕ ಟಿಕೆಟ್‌ ನೀಡುವ ವೇಳೆ ಚೀಲದಲ್ಲೇನು ಎಂದು ಪ್ರಶ್ನಿಸಿದಾಗ ಮಹಿಳೆ ವ್ಯಂಗ್ಯವಾಗಿ ಬಾಂಬ್‌ ಎಂದು ಉತ್ತರಿಸಿದ್ದಾರೆ.

ನಿರ್ವಾಹಕ ಚೀಲವನ್ನು ಪರಿಶೀಲಿಸಿದಾಗ ಮೂರು ಕ್ಯಾನ್‌ ತೆಂಗಿನೆಣ್ಣೆ ಕಂಡುಬಂದಿದೆ. ಈ ವೇಳೆ ಯಾವುದೇ ರೀತಿಯ ಎಣ್ಣೆಯನ್ನು ಬಸ್ಸಿನಲ್ಲಿ ಸಾಗಿಸುವಂತಿಲ್ಲ ಎಂದು ತಗಾದೆ ತೆಗೆದಿದ್ದು, ಈ ವೇಳೆ ನಿರ್ವಾಹಕ-ಮಹಿಳೆಗೆ ಬಿ.ಸಿ.ರೋಡಿನವರೆಗೂ ವಾಗ್ವಾದ ನಡೆದಿದೆ.

ಬಿ.ಸಿ.ರೋಡು ನಿಲ್ದಾಣದಲ್ಲಿ ಮಹಿಳೆ ಟ್ರಾಫಿಕ್‌ ಪೊಲೀಸ್‌ ಸಿಬಂದಿ ಬಳಿ ಘಟನೆಯನ್ನು ವಿವರಿಸಿದ ಬಳಕ ಅವರು ಈ ವಿಚಾರವನ್ನು ನಗರ ಠಾಣಾ ಪಿಎಸ್‌ಐ ಗಮನಕ್ಕೆ ತಂದರು. ನಾವು ಸಂಸ್ಥೆಯ ನಿಯಮ ಪಾಲಿಸುತ್ತಿದ್ದು, ನಿಯಮ ದ ಪ್ರಕಾರ ಎಣ್ಣೆ ಸಾಗಿಸುವಂತಿಲ್ಲ, ಜತೆಗೆ ಮಹಿಳೆ ಕೇಳಿದಾಗ ಬಾಂಬ್‌ ಎಂಬ ಉತ್ತರ ನೀಡಿದ್ದಾರೆ ಎಂದು ನಿರ್ವಾಹಕ ವಿವರಿಸಿದ್ದಾರೆ.

Advertisement

ನಿರ್ವಾಹಕ ಎಣ್ಣೆ ಎಂದು ಗೊತ್ತಿದ್ದರೂ, ಮತ್ತೆ ಅದನ್ನು ಏನು ಎಂದು ಪ್ರಶ್ನಿಸಿರುವುದಕ್ಕೆ ಬಾಂಬ್‌ ಎಂಬ ಉತ್ತರ ನೀಡಿದ್ದೇನೆ ಎಂದು ಮಹಿಳೆ ಸ್ಪಷ್ಟನೆ ನೀಡಿದರು. ಬಳಿಕ ಪಿಎಸ್‌ಐಯವರು ನಿರ್ವಾಹಕರ ಮನವೊಲಿಸಿ ಮಹಿಳೆಯು ಅದೇ ಬಸ್ಸಿನಲ್ಲಿ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next