Advertisement

ಮದುವೆಗೆ ನಿರಾಕರಣೆ ಯುವತಿ,ತಾಯಿಗೆ ಬೆಂಕಿ ಹಚ್ಚಿದ ವಿಕೃತ ಪ್ರೇಮಿ!

11:31 AM Mar 26, 2017 | Harsha Rao |

ಕೊಪ್ಪಳ: ಮದುವೆಯಾಗಲು ನಿರಾಕರಿಸಿದ ಯುವತಿ ಹಾಗೂ ಆಕೆಯ ತಾಯಿಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ವಿಕೃತ ಪ್ರೇಮಿ ನಂತರ ಚಾಕುವಿನಿಂದ ಚುಚ್ಚಿ ಹತ್ಯೆಗೆ ಯತ್ನಿಸಿದ ಘಟನೆ ಕುಷ್ಟಗಿ ತಾಲೂಕಿನ ಮುದೇನೂರು ಸಮೀಪದ ಬುಡಗುಂಟಿ ಬಳಿ ಶನಿವಾರ ನಡೆದಿದೆ. ಗಂಗಾವತಿ ತಾಲೂಕಿನ ಸಾಲುಂಚಿ ಮರದ ಅಮರೇಗೌಡ ಕೃತ್ಯವೆಸಗಿದ ಆರೋಪಿ. ಘಟನೆಯಲ್ಲಿ ತೀವ್ರ ಗಾಯಗೊಂಡ ಶೈನಾಜ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

Advertisement

ಯಲಬುರ್ಗಾ ತಾಲೂಕಿನ ಚೌಡಾಪುರದ ನಿವಾಸಿ ಶೈನಾಜ್‌ ಬೇಗಂ ಎಂಬುವರನ್ನು ಅಮರೇಗೌಡ ಮದುವೆ
ಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ವಿವಾಹಿತನಾಗಿದ್ದ ಅಮರೇಗೌಡನನ್ನು ಮದುವೆಯಾಗಲು ಶೈನಾಜ್‌ ನಿರಾಕರಿಸಿದರು. ಇದರಿಂದ ಅಮರೇಗೌಡ ಕೋಪಗೊಂಡಿದ್ದ.

ಕುಷ್ಟಗಿ ತಾಲೂಕು ಮುದೇನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರ್ಸ್‌ ಆಗಿರುವ ಶೈನಾಜ್‌ ಶನಿವಾರ ತನ್ನ ತಾಯಿಯೊಂದಿಗೆ ಹೊರಟಿದ್ದರು. ಈ ಸಂದರ್ಭ ಅಮರೇಗೌಡ, ಇಬ್ಬರನ್ನೂ ಗ್ರಾಮಕ್ಕೆ ಬಿಟ್ಟು ಬರುವುದಾಗಿ ಬೈಕ್‌ಗೆ ಹತ್ತಿಸಿಕೊಂಡಿದ್ದ. ಆದರೆ, ಬುಡಗುಂಟಿ ಬಳಿ ಬೈಕ್‌ ನಿಲ್ಲಿಸಿ ಶೈನಾಜ್‌ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ,
ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದಿದ್ದಾನೆ. ಮಗಳ ರಕ್ಷಣೆಗೆ ಮುಂದಾದ ತಾಯಿ ಕಮಲಾಬಿ ಮೇಲೂ ಸೀಮೆ ಎಣ್ಣೆ
ಸುರಿದು ಬೆಂಕಿ ಹಚ್ಚಿದ್ದಾನೆ. ತಾಯಿ – ಮಗಳು ಕಿರುಚಲು ಆರಂಭಿಸಿದಾಗ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಕುಷ್ಟಗಿ ಆಸ್ಪತ್ರೆಗೆ ಸಾಗಿಸಿದರು. ಇಬ್ಬರಿಗೂ ಶೇ.30 ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳದಿಂದ ಪರಾರಿಯಾದ ಅಮರೇಗೌಡ ಸಾಲುಂಚಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಿತಿ ಗಂಭೀರವಾಗಿದೆ. ಆತನನ್ನು ಶ್ರೀರಾಮನಗರ ಆಸ್ಪತ್ರೆಗೆ
ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next