Advertisement
ಜನಪ್ರತಿನಿಧಿಗಳೂ ಈ ಸಂಬಂಧ ಸರಕಾರದ ಮೇಲೆ ಒತ್ತಡ ಹೇರಿ ಸೌಕರ್ಯಗಳನ್ನು ಒದಗಿಸುವತ್ತ ಸಂಪೂರ್ಣ ಪ್ರಯತ್ನ ಮಾಡದಿರುವುದೂ ಸಮಸ್ಯೆ ಮುಂದುವರಿಯಲು ಕಾರಣವಾಗಿದೆ. ಕೃಷಿ ಇಲಾಖೆಯೂ ಹೆಚ್ಚುವರಿ ಯಂತ್ರ ಸೌಲಭ್ಯ ಕಲ್ಪಿಸಲು ಆಸಕ್ತಿ ತೋರುತ್ತಿಲ್ಲ ಎಂಬ ಟೀಕೆಗೆ ಗುರಿಯಾಗಿದೆ. ಕೆಲವು ಜನಪ್ರತಿನಿಧಿಗಳು ಕಳೆದ ವರ್ಷವೇ ಬೆಂಬಲ ಬೆಲೆ ವಿಳಂಬದ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. ಆದರೆ ಅದನ್ನು ಮತ್ತೆ ನೆನಪಿಸಿ ಆಗು ಮಾಡುವಲ್ಲಿ ಇಲಾಖೆ ಮತ್ತು ಜನಪ್ರತಿನಿಧಿಗಳು ಗಮನಹರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಇನ್ನಷ್ಟು ಕಾಳಜಿ ವ್ಯಕ್ತಪಡಿಸಿಬೇಕಿತ್ತು, ಅದೂ ಆಗದಿರು ವುದು ಜನರಲ್ಲಿ ನಿರಾಶೆ ಉಂಟು ಮಾಡಿದೆ.
ಇದರೊಂದಿಗೆ ಬಾಡಿಗೆ ದರದಲ್ಲೂ ಏಕರೂಪತೆ ಇಲ್ಲ. ಇಡೀ ಉಭಯ ಜಿಲ್ಲೆಗಳಲ್ಲಿ 47 ಸಾವಿರ ಎಕ್ರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 1ಸಾವಿರ ಎಕ್ರೆಗೆ ಒಂದರಂತಾದರೂ (14 ಯಂತ್ರಗಳು) ಯಂತ್ರಗಳಿದ್ದರೆ, ಉಡುಪಿಯಲ್ಲಿ ಕನಿಷ್ಠ 4 ಸಾವಿರ ಎಕ್ರೆಗೂ ಒಂದೂ ಯಂತ್ರ ಇಲ್ಲ. ಇದು ಜನಪ್ರತಿನಿಧಿಗಳ ಕ್ರಿಯಾಶೀಲತೆಯನ್ನೂ ಶಂಕೆಗೀಡುಮಾಡಿದೆ. ಇದರೊಂದಿಗೆ ಉಗ್ರಾಣಗಳು ಸಾಕಷ್ಟು ಇಲ್ಲದಿರುವುದು ಜಿಲ್ಲೆಗಳಲ್ಲಿ ಕೃಷಿಸಂಬಂಧಿ ಮೂಲ ಸೌಕರ್ಯ ಕೊರತೆಯನ್ನು ಎತ್ತಿ ಹಿಡಿದಿದೆ. ಕಟಾವಿಗೆ ಕೆಲವೇ ದಿನಗಳಿದ್ದು, ಕೆಲವೆಡೆ ಈಗಾಗಲೇ ಆರಂಭವಾಗಿದೆ. ಈ ಬಾರಿಯಾದರೂ ಅಕ್ಟೋಬರ್ ನಲ್ಲೇ ಬೆಂಬಲ ಬೆಲೆ ಘೋಷಣೆ ಯಾಗುವ ಕನಸಿತ್ತು. ಅದೂ ನನಸಾಗುವ ಲಕ್ಷಣಗಳು ಸದ್ಯಕ್ಕೆ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷವೂ ರೈತರು ಸಿಕ್ಕ ಬೆಲೆಗೆ ಬೆಳೆಯನ್ನು ಮಾರುವ ಸ್ಥಿತಿಯಲ್ಲಿದ್ದಾರೆ. ಜನಪ್ರತಿನಿಧಿಗಳು ತುಸು ಹೆಚ್ಚಿನ ಹೊಣೆ ಹೊತ್ತು ಸರಕಾರದ ಮೇಲೆ, ಮುಖ್ಯ ಮಂತ್ರಿಯವರ ಗಮನಕ್ಕೆ ತಂದು, ಒತ್ತಡ ಹೇರಿದರೆ ಮಾತ್ರ ಈ ಸಮಸ್ಯೆ ಬಗೆಹರಿಯಬಹುದು.
Related Articles
Advertisement
ಜಿಲ್ಲಾ ಉಸ್ತುವಾರಿ ಸಚಿವರೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸರಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಎಂಬುದು ರೈತರ ಆಗ್ರಹ. ಈ ಹಿನ್ನೆಲೆಯಲ್ಲೇ ಭತ್ತ ಬೆಳೆಗಾರರ ಬತ್ತದ ಸಂಕಟವನ್ನು ಸರಕಾರ, ಸಚಿವರು, ಜನಪ್ರತಿನಿಧಿಗಳ ಗಮನಕ್ಕೆ ತರಲೆಂದೇ, ಉದಯವಾಣಿಯು ‘ಕಟಾವು ಸಂಕಟ’ ಸರಣಿಯನ್ನು ಪ್ರಕಟಿಸುತ್ತಿದೆ. ಇಂದು ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ.
ಶೀಘ್ರದಲ್ಲಿ ಕಾರ್ಯರೂಪಕ್ಕೆಮುಖ್ಯಮಂತ್ರಿಗಳು, ಕೃಷಿ ಸಚಿವರು ಸಹಿತ ಎಲ್ಲ ಸಚಿವರಲ್ಲಿ ಭತ್ತದ ಬೆಂಬಲ ಬೆಲೆ ಶೀಘ್ರ ಪ್ರಕಟಸುವಂತೆ ಕೋರಲಾಗಿದೆ. ಶೀಘ್ರವೇ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ಭತ್ತ ಕಟಾವು ಯಂತ್ರಕ್ಕೆ ಕೃಷಿಯಂತ್ರಧಾರೆ ಕೇಂದ್ರಗಳಲ್ಲಿ 1,800 ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಉಡುಪಿ ಕ್ಷೇತ್ರ ವ್ಯಾಪ್ತಿಯ ಯಂತ್ರಸಹಾಯಕ ಕೇಂದ್ರಗಳಲ್ಲಿ 6 ಕೇಂದ್ರಗಳನ್ನು ತೆರೆಯುವಂತೆ ಕೃಷಿ ಸಚಿವರನ್ನು ಕೋರಲಾಗಿದೆ.
– ಕೆ. ರಘುಪತಿ ಭಟ್, ಉಡುಪಿ ಶಾಸಕ ಕಟಾವು ಯಂತ್ರ ಹೆಚ್ಚು ದೊರೆಯಲಿ
ಕರಾವಳಿಯಲ್ಲಿ ಈಗ ಭತ್ತದ ಕಟಾವು ನಡೆಯುತ್ತಿದೆ. ಈ ಹಂತದಲ್ಲಿ ಬೆಂಬಲ ಬೆಲೆ ಘೋಷಿಸಿದರೆ ರೈತರಿಗೆ ನೆರವಾಗಲಿದೆ. ಕೂಡಲೇ ಬೆಂಬಲಬೆಲೆ ಘೋಷಿಸಬೇಕು. ಇದಲ್ಲದೆ ಭತ್ತ ಕಟಾವಿಗೆ ಪ್ರಸ್ತುತ ಕಾರ್ಮಿಕರ ಕೊರತೆಯೂ ಕಾಡುತ್ತಿದ್ದು, ಕಟಾವು ಯಂತ್ರಗಳ ಅವಲಂಬನೆ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಕಟಾವು ಯಂತ್ರಗಳ ಸಂಖ್ಯೆ ಹೆಚ್ಚಿಸಬೇಕಿದೆ. ಈ ಬಬಗ್ಗೆ ಸರಕಾರದ ಗಮನ ಸೆಳೆಯುವೆ.
–ಉಮಾನಾಥ ಕೋಟ್ಯಾನ್, ಮೂಡುಬಿದಿರೆ ಶಾಸಕ ಸರಕಾರ ಬೆಂಬಲ ಬೆಲೆ ಘೋಷಿಸಲಿ
ಭತ್ತದ ಬೆಳೆಗೆ ಸೂಕ್ತ ಬೆಲೆ ಲಭ್ಯತೆ ಕೊರತೆ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಭತ್ತದ ಬೆಳೆಗೆ ಸರಕಾರದಿಂದ ಹೆಚ್ಚಿನ ಉತ್ತೇಜನ ಅಗತ್ಯವಿದೆ. ಸೂಕ್ತ ಬೆಂಬಲ ಬೆಲೆಯನ್ನು ಈಗಲೇ ನೀಡುವುದು ಅಗತ್ಯ. ವಿಳಂಬವಾಗಿ ನೀಡಿದರೆ ರೈತರಿಗೆ ಪ್ರಯೋಜನವಾಗದು. ಅದುರಿಂದ ಕೂಡಲೇ ಬೆಂಬಲ ಬೆಲೆ ಪ್ರಕಟಿಸಬೇಕು. ಕಟಾವು ಯಂತ್ರಗಳ ಲಭ್ಯತೆಯೂ ಹೆಚ್ಚಾಗಬೇಕಿದ್ದು, ಸರಕಾರದ ಗಮನ ಸೆಳೆಯಲಾಗುವುದು.
– ಯು.ಟಿ. ಖಾದರ್, ಮಂಗಳೂರು ಶಾಸಕ ಕಳೆದ ವರ್ಷವೇ ಆಗ್ರಹಿಸಿದ್ದೆವು
ಉ.ಕ., ದ.ಕ., ಉಡುಪಿ ಜಿಲ್ಲೆಗಳಲ್ಲಿ ಭತ್ತದ ಕಟಾವಿನ ಸಮಯ ಬೇರೆ. ದಾವಣಗೆರೆ, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಬೇರೆ. ಇಲ್ಲಿ ಒದ್ದೆಯಾದ ಭತ್ತವನ್ನು ಹೆಚ್ಚು ಸಮಯ ತೆಗೆದಿರಿಸುವಂತಿಲ್ಲ. ಬೃಹತ್ ಡ್ರೈಯರ್ ವ್ಯವಸ್ಥೆ ಇಲ್ಲ. ಹಾಗಾಗಿ ಕರಾವಳಿಗೆ ಬೇಗನೇ ಭತ್ತದ ಬೆಂಬಲ ಬೆಲೆ ಪ್ರಕಟಿಸುವಂತೆ ಸರಕಾರವನ್ನು ಕಳೆದ ವರ್ಷ ವಿನಂತಿಸಿದ್ದೆವು. ಕಟಾವು ಯಂತ್ರಗಳ ಬಾಡಿಗೆ ದರ ಏರಿಕೆ ಕುರಿತು “ಉದಯವಾಣಿ’’ ಯ ವರದಿಗಳನ್ನು ಗಮನಿಸಿದ್ದೇನೆ. ಕೃಷ್ಣ ಭೈರೇಗೌಡರು ಕೃಷಿ ಸಚಿವರಾಗಿದ್ದಾಗ ಕೃಷಿಯಂತ್ರೋಪಕರಣಗಳು ಕಡಿಮೆ ಬಾಡಿಗೆ ದರದಲ್ಲಿ ದೊರೆಯುವಂತೆ ಮಾಡಿದ್ದರು. ಈಗ ನಮ್ಮಲ್ಲಿ ಕಟಾವು ಯಂತ್ರಗಳ ಕೊರತೆಯಿರುವುದು ಗಮನಕ್ಕೆ ಬಂದಿದೆ.
– ಹಾಲಾಡಿ ಶ್ರೀನಿವಾಸ ಶೆಟ್ಟಿ , ಕುಂದಾಪುರ ಶಾಸಕ