Advertisement

ರೆಡ್‍ಮಿ ನೋಟ್‍ 11 ಪ್ರೊ: ಹೀಗಿದೆ ನೋಡಿ ಈ ಫೋನು

02:14 PM Apr 07, 2022 | Team Udayavani |

ಬಜೆಟ್‍ ದರ ಹಾಗೂ ಮಧ್ಯಮ ವರ್ಗದ ಮೊಬೈಲ್‍ ಫೋನ್‍ ಸೆಗ್ಮೆಂಟಿನಲ್ಲಿ ರೆಡ್‍ ಮಿ ಫೋನುಗಳು ಗ್ರಾಹಕರ ಅಚ್ಚುಮೆಚ್ಚು. ಈ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍ ನೀಡಿ ಬೆಲೆಯನ್ನೂ ಅದಕ್ಕನುಗುಣವಾಗಿ ನಿಗದಿಪಡಿಸಿ ಗ್ರಾಹಕನಿಗೆ ವ್ಯಾಲ್ಯೂ ಫಾರ್ ಮನಿ ಉತ್ಪನ್ನಗಳನ್ನು ನೀಡುತ್ತಿದೆ ಶಿಯೋಮಿ ಬ್ರಾಂಡ್‍. ಹಾಗಾಗಿಯೇ ಭಾರತದ ಮೊಬೈಲ್‍ ಮಾರುಕಟ್ಟೆಯಲ್ಲಿ ನಂ. 1 ಸ್ಥಾನವನ್ನೂ ಪಡೆದುಕೊಂಡಿದೆ. ಈ ಕಂಪೆನಿ ಇತ್ತೀಚಿಗೆ ಬಿಡುಗಡೆ ಮಾಡಿರುವ ಹೊಸ ಮೊಬೈಲ್‍ ಫೋನ್‍ ರೆಡ್‍ಮಿ 11 ಪ್ರೊ.  ಇದರ ದರ 6 ಜಿಬಿ ರ್ಯಾಮ್‍ 128 ಜಿಬಿ ಆಂತರಿಕ ಸಂಗ್ರಹ ಮಾದರಿಗೆ 17, 999 ರೂ. 8 ಜಿಬಿ ರ್ಯಾಮ್‍, 128 ಜಿಬಿ ಸಂಗ್ರಹ ಮಾದರಿಗೆ 19,999 ರೂ.

Advertisement

ವಿನ್ಯಾಸ: ಇದರ ವಿನ್ಯಾಸ ಹೆಚ್ಚೂ ಕಡಿಮೆ ಐಫೋನ್‍ ವಿನ್ಯಾಸವನ್ನು ಹೋಲುತ್ತದೆ. ಫೋನಿನ ಫ್ರೇಮ್‍ ಲೋಹದ್ದಾಗಿದೆ. ಹಿಂಬದಿಯ ಪ್ಯಾನೆಲ್‍ ಫ್ರೋಸ್ಟೆಡ್‍ ಗ್ಲಾಸ್‍ ನಿಂದ ಮಾಡಲ್ಪಟ್ಟಿದೆ. ಎಡಬದಿಯಲ್ಲಿ ಉಬ್ಬಿದ ಕ್ಯಾಮರಾ ಅಳವಡಿಸಲಾಗಿದೆ. ಫ್ರೇಮಿನ ತಳದಲ್ಲಿ ಸಿಮ್‍ ಟ್ರೇ, ಯುಎಸ್‍ಬಿ ಟೈಪ್ ಸಿ ಪೋರ್ಟ್, ಸ್ಪೀಕರ್ ಕಿಂಡಿ ಇದೆ. ಮೇಲ್ಬದಿಯಲ್ಲಿ 3.5 ಎಂ.ಎಂ. ಆಡಿಯೋ ಜಾಕ್‍ ಪೋರ್ಟ್, ಇನ್ನೊಂದು ಸ್ಟೀರಿಯೋ ಸ್ಪೀಕರ್, ಇನ್‍ಫ್ರಾರೆಡ್‍ ಸೆನ್ಸರ್ (ರಿಮೋಟ್‍ಗಾಗಿ) ಇದೆ. ಮೇಲೊಂದು ಮತ್ತು ತಳದಲ್ಲೊಂದು ಸ್ಪೀಕರ್ ನೀಡಿರುವುದು ವಿಶೇಷ. ಇದರಿಂದ ಮೊಬೈಲ್‍ನಲ್ಲೇ ಸಂಗೀತ ಆಲಿಸುವಾಗ ಸ್ಟೀರಿಯೋ ಸೌಲಭ್ಯ ಎಡಬದಿಯಲ್ಲಿ ಯಾವ ಬಟನ್‍ ಇಲ್ಲ. ಬಲ ಬದಿಯಲ್ಲಿ ಆನ್‍ ಆಫ್‍, ವ್ಯಾಲ್ಯೂಮ್‍ ಬಟನ್‍ ಇದೆ. ಫೋನಿನ ವಿನ್ಯಾಸ ನೋಡಲೇನೋ ಸುಂದರವಾಗಿ ಆಕರ್ಷಕವಾಗಿದೆ. ಆದರೆ ಫ್ರೇಮ್‍ ಚೌಕಾಕಾರದಲ್ಲಿರುವುದರಿಂದ, ಎಡ್ಜ್ ಚೂಪಾಗಿದೆ. ಹಾಗಾಗಿ ಕೈಯಲ್ಲಿ ಹಿಡಿದಾಗ ಹೆಚ್ಚು ಕಂಫರ್ಟ್ ಅನಿಸುವುದಿಲ್ಲ. 202 ಗ್ರಾಂ ತೂಕವಿದೆ. 8.1 ಮಿ.ಮಿ. ದಪ್ಪ ಇದೆ.

ಪರದೆ: ಇದರಲ್ಲಿರುವುದು 6.67 ಇಂಚಿನ, 120 ಹರ್ಟ್ಜ್ ಸೂಪರ್ ಅಮೋಲೆಡ್‍ ಪರದೆ. 1200 ನಿಟ್ಸ್ ಬ್ರೈಟ್‍ನೆಸ್‍ ಹೊಂದಿದೆ. ಹೀಗಾಗಿ ಪರದೆ ಹೆಚ್ಚು ಪ್ರಕಾಶಮಾನವಾಗಿ, ಪರದೆಯಲ್ಲಿನ ಚಿತ್ರಗಳು, ಮೊಬೈಲ್‍ನ ಯುಐ ಶ್ರೀಮಂತವಾಗಿ ಕಾಣುತ್ತದೆ. 120 ಹರ್ಟ್ಜ್ ರಿಫ್ರೆಶ್‍ ರೇಟ್‍ ನಿಂದಾಗಿ ಸ್ಕ್ರಾಲಿಂಗ್‍ ಸರಾಗವಾಗಿ ಆಗುತ್ತದೆ. ಈಗ ಶಿಯೋಮಿ, ಮಧ್ಯಮ ವರ್ಗದ ಫೋನುಗಳಲ್ಲಿ ಸಹ ಅಮೋಲೆಡ್‍ ಪರದೆ ಹಾಕುತ್ತಿರುವುದು ಒಳ್ಳೆಯ ಅಂಶ. ಮೊಬೈಲ್‍ ಪರದೆ ಸ್ಲೀಪ್‍ ನಂತರವೂ ಪರದೆಯ ಮೇಲೆ ಸಮಯ, ನೊಟಿಫಿಕೇಷನ್‍ ಕಾಣುವ ಆಲ್ವೇಸ್‍ ಆನ್‍  ಡಿಸ್‍ಪ್ಲೇ ಸೌಲಭ್ಯ ಸಹ ಇದೆ.

ಇದನ್ನೂ ಓದಿ:ಟ್ಯಾಕ್ಸಿ ಡ್ರೈವರ್ ಟು ಮಹಿಳಾ ಪೊಲೀಸ್ ಅಧಿಕಾರಿ; ನ್ಯೂಜಿಲ್ಯಾಂಡ್ ನಲ್ಲಿ ಕೌರ್ ಸಾಹಸಗಾಥೆ

Advertisement

ಕಾರ್ಯಾಚರಣೆ: ಮೀಡಿಯಾ ಟೆಕ್‍ ಹೀಲಿಯೋ ಜಿ96 ಎಂಟು ಕೋರ್ ಗಳ ಪ್ರೊಸೆಸರ್ ಅನ್ನು ಈ ಮೊಬೈಲ್‍ ಹೊಂದಿದೆ. ಮಧ್ಯಮ ದರ್ಜೆಯ ಮೊಬೈಲ್‍ ಗಳಿಗೆ ಬಳಸುವ 4ಜಿ ಪ್ರೊಸೆಸರ್ ಇದು. (ಇದು 5ಜಿ ಫೋನ್‍ ಅಲ್ಲ ಎಂಬುದು ನೆನಪಿರಲಿ. ಸದ್ಯಕ್ಕೆ ಭಾರತದಲ್ಲಿ 5ಜಿ ನೆಟ್‍ ವರ್ಕ್ ಬಂದಿಲ್ಲ. ಹಾಗಾಗಿ ಫೋನಿನಲ್ಲಿ 5ಜಿ ಇರಲಿ ಇಲ್ಲದಿರಲಿ ಯಾವುದೇ ವ್ಯತ್ಯಾಸ ಇಲ್ಲ.) ಪ್ರೊಸೆಸರ್ ಸಾಮರ್ಥ್ಯ ಉತ್ತಮವಾಗಿದೆ. ಒಂದು ಮಧ್ಯಮ ದರ್ಜೆಯ ಫೋನ್‍ ನಲ್ಲಿ ಇರಬೇಕಾದಷ್ಟು ವೇಗವಾಗಿದೆ. ಯಾವುದೇ ಅಡಚಣೆ ಇಲ್ಲದೆ ಸರಾಗವಾಗಿ ಫೋನ್‍ ಕೆಲಸ ನಿರ್ವಹಿಸುತ್ತದೆ. ಫೋನ್‍ ಹೆಚ್ಚು ಬಿಸಿಯಾಗದಂತೆ ತಡೆಯಲು ಲಿಕ್ವಿಡ್‍ ಕೂಲ್‍ ಟೆಕ್ನಾಲಜಿ ಸಹ  ಇದೆ. ಇದರಲ್ಲಿರುವ ಇನ್ನೊಂದು ವಿಶೇಷ ಎಂದರೆ, ವರ್ಚುವಲ್‍ ರ್ಯಾಮ್‍ ಅನ್ನು 3 ಜಿಬಿಯಷ್ಟು ಹೆಚ್ಚಿಸಿಕೊಳ್ಳಬಹುದು. ಅಂದರೆ ಈಗಾಗಲೇ ಇರುವ 6 ಜಿಬಿ ಅಥವಾ 8 ಜಿಬಿ ರ್ಯಾಮ್‍ ಗೆ 3 ಜಿಬಿ ರ್ಯಾಮ್‍ ಅನ್ನು ಆಂತರಿಕ ಸಂಗ್ರಹದಿಂದ ತೆಗೆದುಕೊಳ್ಳುತ್ತದೆ. (ನೈಜವಾಗಿ ಇದರ ಅವಶ್ಯಕತೆಯಿಲ್ಲ)

ಆಂಡ್ರಾಯ್ಡ್ 11 ಆವೃತ್ತಿ ಹೊಂದಿದ್ದು, ಇದಕ್ಕೆ ಮಿ ಯುಐ 13 ಸೇರಿಸಲಾಗಿದೆ. ಮಿ ಯುಐ ತನ್ನದೇ ಆದ ಕೆಲವು ಹೆಚ್ಚುವರಿ ಅನುಕೂಲಗಳನ್ನು ಬಳಕೆದಾರರಿಗೆ ನೀಡುತ್ತದೆ.

ಕ್ಯಾಮರಾ: ಮೊಬೈಲ್‍ ಗಳಲ್ಲಿ ಹೆಚ್ಚು ಮೆಗಾಪಿಕ್ಸಲ್‍ ಗಳಿರುವ ಕ್ಯಾಮರಾ ಪರಿಚಯಿಸಿದ್ದು ಶಿಯೋಮಿ. ಎಷ್ಟೋ ಜನರು ಹೆಚ್ಚು ಮೆಗಾಪಿಕ್ಸಲ್‍ ಇದ್ದಷ್ಟೂ ಕ್ಯಾಮರಾ ಉತ್ತಮವಾಗಿರುತ್ತದೆ ಎಂಬ ಭಾವನೆ ಇದೆ. ಈ ಫೋನಿನಲ್ಲಿ 108 ಮೆಗಾಪಿಕ್ಸಲ್‍ ಉಳ್ಳ ಕ್ಯಾಮರಾ ಇದೆ. ಇದರ ಜೊತೆಗೆ 8 ಮೆ.ಪಿ. ಅಲ್ಟ್ರಾ ವೈಡ್‍, 2 ಮೆಪಿ ಮ್ಯಾಕ್ರೋ ಮತ್ತು 2 ಮೆಪಿ ಡೆಪ್ತ್ ಸೆನ್ಸರ್ ಸೇರಿ ನಾಲ್ಕು ಲೆನ್ಸ್ ಇವೆ.  ಸೆಲ್ಫಿ ಕ್ಯಾಮರಾ 16 ಮೆ.ಪಿ. ಇದೆ. ಹಿಂಬದಿ ಕ್ಯಾಮರಾ ಫಲಿತಾಂಶ ಅತ್ಯುತ್ತಮ ಅನ್ನುವಂತಿಲ್ಲ. 108 ಮೆ.ಪಿ. ಅಂದಾಗ ಹೆಚ್ಚು ನಿರೀಕ್ಷೆ ಇರುತ್ತದೆ. ಚಿತ್ರಗಳ ಡೀಟೇಲ್‍ ಕಡಿಮೆ ಇದೆ. ಇನ್ನಷ್ಟು ಸ್ಪಷ್ಟ ಗುಣಮಟ್ಟ ಬೇಕೆನಿಸುತ್ತದೆ. ಮೆ.ಪಿ. ಕಡಿಮೆ ಇದ್ದರೂ ಪರವಾಗಿಲ್ಲ. ಇನ್ನಷ್ಟು ಉತ್ತಮ ಗುಣಮಟ್ಟದ ಲೆನ್ಸ್ ಇರುವ ಕ್ಯಾಮರಾ ಅಗತ್ಯವಿತ್ತು.

ಬ್ಯಾಟರಿ: 5000 ಎಂಎಎಚ್‍ ನ ಭರ್ಜರಿ ಬ್ಯಾಟರಿ ಹಾಗೂ ಇದಕ್ಕೆ 67 ವ್ಯಾಟ್ಸ್ ನ ಟರ್ಬೋ ಚಾರ್ಜರ್ ಅನ್ನು ಬಾಕ್ಸ್ ಜೊತೆಗೇ ನೀಡಿರುವುದು ಪ್ಲಸ್‍ ಪಾಯಿಂಟ್‍. 5 ನಿಮಿಷಕ್ಕೆ 17% ಚಾರ್ಜ್ ಆಗುತ್ತದೆ. 15 ನಿಮಿಷಕ್ಕೆ ಶೇ.48 ರಷ್ಟು ಚಾರ್ಜ್‍ ಆಗುತ್ತದೆ. 30 ನಿಮಿಷಕ್ಕೆ 82% ನಷ್ಟು ಚಾರ್ಜ್ ಆಗುತ್ತದೆ. ಶೇ. 100ರಷ್ಟು ಚಾರ್ಜ್ ಆಗಲು ಒಟ್ಟು 50 ನಿಮಿಷ ತೆಗೆದುಕೊಳ್ಳುತ್ತದೆ. ಇದರ ದರಕ್ಕೆ ಇದು ವೇಗದ ಚಾರ್ಜರ್ ಎಂದೇ ಹೇಳಬಹುದು. 5000 ಎಂಎಎಚ್‍ ಬ್ಯಾಟರಿ ಸಾಧಾರಣ ಬಳಕೆಗೆ ಒಂದೂವರೆ ದಿನದಷ್ಟು ಬರುತ್ತದೆ.

ಒಟ್ಟಾರೆ ಇದು ಉತ್ತಮ ಪರದೆ, ಉತ್ತಮ ವಿನ್ಯಾಸದ, ತೃಪ್ತಿದಾಯಕ ಪ್ರೊಸೆಸರ್ ಉಳ್ಳ, ಒಂದು ಮಟ್ಟಕ್ಕೆ ಓಕೆ ಎನ್ನಬಹುದಾದ ಕ್ಯಾಮರಾ ಉಳ್ಳ, ಬ್ಯಾಟರಿ ಬಾಳಿಕೆ ಚೆನ್ನಾಗಿರುವ ಮಧ್ಯಮ ವರ್ಗದ ಫೋನ್‍. ಕ್ಯಾಮರಾ ಗುಣಮಟ್ಟ ಇನ್ನಷ್ಟು ಚೆನ್ನಾಗಿರಬೇಕಿತ್ತು.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next