Advertisement

ಅತಿಥಿ ಉಪನ್ಯಾಸಕರಿಗೆ ಬಂದಿಲ್ಲ ನೇಮಕಾತಿ ಆದೇಶ

06:00 AM Jun 21, 2018 | |

ಮಂಗಳೂರು: ಸರಕಾರಿ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪ ನ್ಯಾಸಕರ ನೇಮಕಾತಿ ಸಮಸ್ಯೆಗೆ ಸರಕಾರ ಶಾಶ್ವತ ಪರಿಹಾರ ನೀಡದೇ ಇರುವುದರಿಂದ ಉಪನ್ಯಾಸಕರು ಗೊಂದಲ ದಲ್ಲಿದ್ದಾರೆ. ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ಜೂ. 25ಕ್ಕೆ ಕಾಲೇಜು ಪುನರಾರಂಭಗೊಳ್ಳುತ್ತಿದ್ದರೂ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರಕಾರ ಇನ್ನೂ ಆದೇಶ ಹೊರಡಿಸಿಲ್ಲ!

Advertisement

ಸರಕಾರಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ಒಂದು ವರ್ಷದ ಅವಧಿಗೆ ಮಾತ್ರ ನೇಮಿಸುತ್ತಿದ್ದು, ಪ್ರತಿ ಬಾರಿಯೂ ಅವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ ದಾಖಲಾತಿ ಪಡೆಯಬೇಕು. ಸರಕಾರ ನೇಮಕಾತಿ ಆದೇಶ ವಿಳಂಬಗೊಳಿಸುವುದರಿಂದ ಉಪನ್ಯಾಸಕರು ಗೊಂದಲದಲ್ಲಿ ರುವ ಜತೆಗೆ ವಿದ್ಯಾರ್ಥಿಗಳಿಗೂ ಪಾಠ ಇಲ್ಲದಂತಾಗುತ್ತದೆ. ದ.ಕ., ಉಡುಪಿ, ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ 37 ಸರಕಾರಿ ಪದವಿ ಕಾಲೇಜುಗಳಿದ್ದು, ಕಳೆದ ವರ್ಷ 1,200 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸಿದ್ದರು.

ಬಹುತೇಕ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರಿಗಿಂತಲೂ ಅಧಿಕ ಅತಿಥಿ ಉಪನ್ಯಾಸಕರೇ ಕರ್ತವ್ಯ ನಿರ್ವಹಿಸುತ್ತಿ ದ್ದಾರೆ. ಕಳೆದ ವರ್ಷ ಸರಕಾರ ಜುಲೈ 15ರಂದು ಅತಿಥಿ ಉಪನ್ಯಾಸಕರನ್ನು ನೇಮಿಸಿ, ಜು. 30ರಂದು ಈ ಆದೇಶವನ್ನು ರದ್ದು ಪಡಿಸಿ ಕೇವಲ 15 ದಿನಗಳ ಉದ್ಯೋಗ ಭಾಗ್ಯ ನೀಡಿತ್ತು. ಜತೆಗೆ ಸರಕಾರಿ ಕಾಲೇಜುಗಳಿಗೆ ಕಳೆದ ವರ್ಷ ಖಾಯಂ ಉಪನ್ಯಾಸಕರನ್ನು ನೇಮಿಸಿದ ಪರಿಣಾಮ ಶೇ. 50ರಷ್ಟು ಅತಿಥಿ ಉಪನ್ಯಾಸಕರು ಉದ್ಯೋಗವನ್ನು ಕಳೆದುಕೊಂಡಿದ್ದರು.

ಹೀಗಾಗಿ ಅತಿಥಿ ಉಪನ್ಯಾಸಕರು ತಮಗೆ ಸೇವಾ ಭದ್ರತೆಯನ್ನು ನೀಡಬೇಕು ಎಂಬ ಬೇಡಿಕೆಯ ಜತೆಗೆ 25 ಸಾವಿರ ರೂ.ವೇತನ, ನಿಗದಿತ ದಿನಾಂಕದಂದು ವೇತನ ಪಾವತಿ, 7ನೇ ವೇತನ ಆಯೋಗದ ಶಿಫಾರಸನ್ನು ಅತಿಥಿ ಉಪನ್ಯಾಸಕರಿಗೂ ಅನ್ವಯವಾಗುವಂತೆ ಕ್ರಮಕೈಗೊಳ್ಳಲು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. 

ವೇತನವೂ ಬಂದಿಲ್ಲ!
ಸರಕಾರ ನೆಟ್‌, ಸ್ಲೆಟ್‌, ಪಿಎಚ್‌ಡಿ ಮುಗಿಸಿರುವ ಉಪನ್ಯಾಸಕರಿಗೆ 13 ಸಾವಿರ ರೂ. ಹಾಗೂ ಸ್ನಾತಕೋತ್ತರ ಪದವಿ ಪಡೆದಿರುವವರಿಗೆ 11 ಸಾವಿರ ರೂ.ವೇತನ ನಿಗದಿ ಪಡಿಸಿದೆ. ಉಪನ್ಯಾಸಕರಿಗೆ 25 ಸಾವಿರ ರೂ.ವೇತನ ನೀಡಬೇಕು ಎಂಬ ಬೇಡಿಕೆ ಇದ್ದರೂ ಪ್ರಸ್ತುತ ನೀಡುತ್ತಿರುವ ಅತ್ಯಲ್ಪ ವೇತನವನ್ನೂ ಸಮರ್ಪಕವಾಗಿ ನೀಡುತ್ತಿಲ್ಲ. ಕಳೆದ ವರ್ಷದ ವೇತನವನ್ನು ಮೂರು ಕಂತುಗಳಲ್ಲಿ ನೀಡಿದ್ದು, ಮಾರ್ಚ್‌-ಎಪ್ರಿಲ್‌ನ ತಲಾ 15 ದಿನಗಳು ಸಹಿತ ಒಂದು ತಿಂಗಳ ವೇತನ ಇನ್ನೂ ಉಪನ್ಯಾಸಕರ ಕೈಸೇರಿಲ್ಲ. 

Advertisement

ಯಾವುದೇ ಆದೇಶ ಬಂದಿಲ್ಲ
2018-19ನೇ ಸಾಲಿನ ಅತಿಥಿ ಉಪನ್ಯಾಸಕರ ನೇಮಕದ ಕುರಿತಂತೆ ಈತನಕ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಕಾಲೇಜು ಶಿಕ್ಷಣ ಇಲಾಖೆಯ ಕಮೀಷನರ್‌ ಅವರು ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಸಮಸ್ಯೆ ಬಗೆಹರಿ ಸುವ ಕುರಿತು ಭರವಸೆ ನೀಡಿದ್ದರು. ಆದರೆ ಈತನಕ ಯಾವುದೇ ಆದೇಶ ಬಂದಿಲ್ಲ. 
-ಪ್ರೊ| ಮಹೇಶ್‌ ರಾವ್‌ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು

ಹಿಂದಿನವರನ್ನೇ ಮುಂದುವರಿಸಿ
ಕಳೆದ ವರ್ಷ ಕಾರ್ಯನಿರ್ವಹಿಸಿದ ಉಪನ್ಯಾಸಕರಿಗೆ ಅವಕಾಶ ನೀಡಿ, ಬಳಿಕ ಹೆಚ್ಚುವರಿ ಉಪನ್ಯಾಸಕರ ಆವಶ್ಯಕತೆ ಇದ್ದರೆ ಹೊಸಬರಿಂದ ಅರ್ಜಿ ತೆಗೆದುಕೊಳ್ಳಬೇಕು ಎಂಬುದು ನಮ್ಮ ಮನವಿ. ಜತೆಗೆ ಕಳೆದ ಬಾರಿಯ ಒಂದು ತಿಂಗಳ ವೇತನವೂ ಬಾಕಿ ಇದೆ. ಅತಿಥಿ ಉಪನ್ಯಾಸಕರನ್ನು ಶೀಘ್ರ ನೇಮಕ ಮಾಡಿದರೆ ವಿದ್ಯಾರ್ಥಿಗಳಿಗೂ ನೆರವಾಗುತ್ತದೆ. 
-ಧೀರಜ್‌ಕುಮಾರ್‌, ಅತಿಥಿ ಉಪನ್ಯಾಸಕರು, ಮಂಗಳೂರು ವಲಯ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next