ದಾವಣಗೆರೆ: ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಕೋರಿ ಕೇಂದ್ರಕ್ಕೆ ಮಾಡಿದ್ದ ಶಿಫಾರಸ್ಸನ್ನು ವಾಪಸ್ ಕಳಿಸಿರುವುದು ಒಳ್ಳೆಯದು ಎಂದು ಅಖೀಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳುಹಿಸಿಕೊಟ್ಟ ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸನ್ನು ಕೇಂದ್ರ ಹಿಂದಕ್ಕೆ ಕಳಿಸಿರುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೂ, ಹಿಂದಕ್ಕೆ ಕಳುಹಿಸಿರುವುದು ಒಳ್ಳೆಯದ್ದೇ ಆಗಿದೆ ಎಂದರು.
ಅಖೀಲ ಭಾರತ ವೀರಶೈವ ಮಹಾಸಭಾ ಹಿಂದಿನಿಂದಲೂ ವೀರಶೈವರು-ಲಿಂಗಾಯತರು ಒಂದೇ ಎಂಬುದನ್ನು ಹೇಳುತ್ತಲೇ ಬರುತ್ತಿದೆ. ವೀರಶೈವ-ಲಿಂಗಾಯತ ಒಂದಾಗುವುದಿದ್ದರೆ ಅದಕ್ಕೆ ಮಹಾಸಭಾದ ಬೆಂಬಲವಿದೆ. ಎಲ್ಲರೂ ಒಟ್ಟಾಗಿ ಹೋಗುವುದು ಒಳ್ಳೆಯದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಕೋರಿ ಕೇಂದ್ರಕ್ಕೆ ಮಾಡಿದ್ದ ಶಿಫಾರಸನ್ನು ವಾಪಸ್ ಕಳುಹಿಸಿರುವುದರಿಂದ ಇದು ಯಾರ ಸೋಲು-ಗೆಲುವು ಎಂದು ಹೇಳಲಿಕ್ಕೆ ಹೋಗುವುದೇ ಇಲ್ಲ. ವೀರಶೈವರು-ಲಿಂಗಾಯತರು ಒಟ್ಟಾಗಿ ಹೋಗಬೇಕು ಎಂಬುದು ನಮ್ಮ ಇಚ್ಛೆ ಎಂದು ತಿಳಿಸಿದರು.
ಒಟ್ಟಾಗಿ ಹೋಗುವುದರ ಬಗ್ಗೆ ಕುಳಿತು ಚರ್ಚೆ ಮಾಡೋಣ ಎಂದ ಅವರು, ಒಂದಾಗಲು ಏನಾದರೂ ಷರತ್ತು ಹಾಕಿದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಷರತ್ತು ಎಂದು ಹೇಳಿದರೆ ಅವರ ಮನೆಯಲ್ಲಿ ಅವರು ಇರುತ್ತಾರೆ. ನಮ್ಮ ಮನೆಯಲ್ಲಿ ನಾವು ಇರುತ್ತೇವೆ ಅಷ್ಟೇ ಎಂದು ಹೇಳಿದರು.
ವೀರಶೈವರು-ಲಿಂಗಾಯತರು ಒಟ್ಟಾಗಿ ಹೋಗಬೇಕು ಎಂಬುದಾಗಿ ಜಾಮದಾರ್ ಈಗ ಹೇಳುತ್ತಾನೆ. ಅಧಿಕಾರಿಯಾಗಿದ್ದಾಗ ಎಷ್ಟು ಜನರಿಗೆ ಸಹಾಯ ಮಾಡಿದ್ದಾನೆ, ಅವನನ್ನೇ ಕೇಳಿ ಎಂದು ತುಸು ಖಾರವಾಗಿಯೇ ಪ್ರತಿಕ್ರಿಯಿಸಿದರು.