Advertisement

ಪ್ರತಿ ಖರೀದಿಗೆ ರಸೀದಿ ಪಡೆದ್ರೆ ಜಿಎಸ್‌ಟಿ ಲಾಭ 

03:45 AM Jun 27, 2017 | Team Udayavani |

ಬೆಂಗಳೂರು: 90ರ ದಶಕದ ನಂತರ ಭಾರತದಲ್ಲಾಗುತ್ತಿರುವ ಮಹತ್ವದ ತೆರಿಗೆ ಸುಧಾರಣಾ ಕ್ರಮವಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ದಿನಗಣನೆ ಶುರುವಾಗಿದ್ದು, ಹೊಸ ತೆರಿಗೆ ಪದ್ಧತಿಯ ಲಾಭ- ನಷ್ಟದ ಲೆಕ್ಕಾಚಾರ ಶುರುವಾಗಿದೆ.

Advertisement

ಜಿಎಸ್‌ಟಿ ಜಾರಿ ನಂತರ ಯಾವ್ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ, ಇಳಿಯಲಿದೆ ಎಂಬ ಬಗ್ಗೆಯೂ ಲೆಕ್ಕಾಚಾರ ಪ್ರಾರಂಭವಾಗಿದೆ. ಜಿಎಸ್‌ ಟಿಯಿಂದ ಜನಸಾಮಾನ್ಯರಿಗೆ ಲಾಭವಿದೆಯಾ ಎಂಬ ಪ್ರಶ್ನೆಗೆ, ಪ್ರತಿ ವ್ಯವಹಾರಕ್ಕೂ ಗ್ರಾಹಕರು ಬಿಲ್‌ ಕೇಳಿ ಪಡೆದರೆ ಕ್ರಮೇಣ ಬಹುತೇಕ ವಸ್ತುಗಳ ಬೆಲೆ ಇಳಿಕೆಯಾಗುವ ಇಲ್ಲವೇ ಸ್ಥಿರವಾಗುವ ಸಾಧ್ಯತೆ
ಹೆಚ್ಚಾಗಿದೆ. ಇದು ಜನಸಾಮಾನ್ಯರಿಗಾಗುವ ಲಾಭ ಎಂದು ಆರ್ಥಿಕತಜ್ಞರು ವಿಶ್ಲೇಷಿಸುತ್ತಾರೆ.

ಅತ್ಯಗತ್ಯವಾದ ಆಹಾರ ಪದಾರ್ಥಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಈ ಹಿಂದೆಯೇ ಹೊರ ಗಿಟ್ಟಿರುವುದರಿಂದ ಜಿಎಸ್‌ಟಿ ಜಾರಿಯಾದರೂ ಅದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಆದರೆ, ಜನಸಾಮಾನ್ಯರ ದಿನನಿತ್ಯದ ಬಳಕೆಯ ಸೀರೆ ಸೇರಿದಂತೆ ಜವಳಿ ಉತ್ಪನ್ನಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ತುಸು ದುಬಾರಿಯಾಗಲಿದೆ. ಕೃಷಿಯಿಂದ ನೇರವಾಗಿ ಜನರಿಗೆ ತಲುಪುವ ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಯವಾಗುವುದಿಲ್ಲ. ಆದರೆ ಕೃಷಿ ಉತ್ಪನ್ನವನ್ನು ಮೌಲ್ಯವರ್ಧಿತ ಇಲ್ಲವೇ ಸಂಸ್ಕರಿಸಿ ನಾನಾ ವೈವಿಧ್ಯದ, ಉಪ ಉತ್ಪನ್ನಗಳನ್ನಾಗಿ ರೂಪಿಸಿ ಮಾರಾಟ ಮಾಡಿದರೆ ಅದು ತೆರಿಗೆ ವ್ಯಾಪ್ತಿಗೆ ಒಳಪಡಲಿದೆ ಎಂದು ಹೇಳುತ್ತಾರೆ.

ಹಾಲು ಖರೀದಿಗೆ ರಸೀದಿ ನೀಡಬೇಕು: ಹಾಲು ತೆರಿಗೆ ವ್ಯಾಪ್ತಿಯಿಂದ ಹೊರಗಿದೆ. ಆದರೆ ಬ್ರ್ಯಾಂಡ್‌ ಸಹಿತ ಹಾಲಿನ ಉತ್ಪನ್ನಗಳು (ತುಪ್ಪ, ಪೇಡಾ, ಸಿಹಿ ತಿನಿಸು ಇತರೆ) ತೆರಿಗೆ ವ್ಯಾಪ್ತಿಗೆ ಒಳಪಡಲಿವೆ. ಹಾಲು ಮಾರಾಟಗಾರರು ಪ್ರತಿ ಗ್ರಾಹಕರಿಗೂ ಬಿಲ್‌ ನೀಡುವುದು ಕಡ್ಡಾಯವಾಗಲಿವೆ. ಹಾಲು ವ್ಯಾಪಾರದ ವಹಿವಾಟು ವಾರ್ಷಿಕ 20 ಲಕ್ಷ ರೂ. ಮೀರಿದರೆ ಮಾರಾಟಗಾರರು ಆದಾಯ ಘೋಷಣೆ ಮಾಡಿಕೊಳ್ಳುವುದು ಕಡ್ಡಾಯ. ಅಂದರೆ ನಿತ್ಯ 500 ಲೀಟರ್‌ ಹಾಲು ಮಾರಾಟಗಾರರು ಜಿಎಸ್‌ಟಿ ಜಾರಿ ಬಳಿಕ ಆದಾಯ ಘೋಷಣೆ ಅನಿವಾರ್ಯವಾಗಲಿದೆ.

Advertisement

ತಿಂಡಿ- ತಿನಿಸು ಹೆಚ್ಚಾಗುವ ಸಾಧ್ಯತೆ: ಜಿಎಸ್‌ಟಿ
ತೆರಿಗೆಯಿಂದ ಹೋಟೆಲ್‌ ಉದ್ದಿಮೆದಾರರಿಗೆ ಹೊರೆಯಾಗುವ ಸಾಧ್ಯತೆ ಇದೆ. ವಾರ್ಷಿಕ ವಹಿವಾಟು 75 ಲಕ್ಷ ರೂ. ಮೀರಿದರೆ ಶೇ.5ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಹಾಗೆಯೇ ಹವಾನಿಯಂತ್ರಿತ ವ್ಯವಸ್ಥೆಯಿರುವ ರೆಸ್ಟೋರೆಂಟ್‌ಗೆ ಶೇ.18 ಹಾಗೂ ಹವಾನಿಯಂತ್ರಣ ವ್ಯವಸ್ಥೆರಹಿತ ರೆಸ್ಟೋರೆಂಟ್‌, ಹೋಟೆಲ್‌ಗೆ ಶೇ.12ರಷ್ಟು ತೆರಿಗೆ ವಿಧಿಸಿರುವುದರಿಂದ ತಿಂಡಿ- ತಿನಿಸು, ಉಪಾಹಾರ ದರ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಮತ.

ಸೌಂದರ್ಯವರ್ಧಕ, ಪ್ರಸಾದನ ಸೇವೆ ದುಬಾರಿ:
ಜಿಎಸ್‌ಟಿ ಅಡಿ ಚಿನ್ನಾಭರಣದ ಮೇಲೆ ಶೇ.3ರಷ್ಟು ತೆರಿಗೆ ವಿಧಿಸಲಾಗುತ್ತದೆ. ಸೌಂದರ್ಯವರ್ಧಕಗಳು, ಬ್ಯೂಟಿಪಾರ್ಲರ್‌ ಸೇರಿದಂತೆ ಪ್ರಸಾದನ ಸೇವೆಗಳು ದುಬಾರಿಯಾಗಲಿವೆ. ಅದೇ ರೀತಿ ಮೊಬೈಲ್‌, ಟಿವಿ ಸೇರಿದಂತೆ ಆಯ್ದ ಎಲೆಕ್ಟ್ರಾನಿಕ್‌ ಉಪಕರಣಗಳ ಬೆಲೆಯೂ ಹೆಚ್ಚಳವಾಗಲಿದೆ.ಹಾಗಾಗಿ ಸದ್ಯ ಸಗಟು ವ್ಯಾಪಾರಿಗಳು ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ವಿಶೇಷ ರಿಯಾಯ್ತಿ ಘೋಷಿಸಿ ಮಾರಾಟ ಮಾಡಲಾರಂಭಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಔಷಧಗಳು ಅಗ್ಗ ಸಾಧ್ಯತೆ
ಜಿಎಸ್‌ಟಿ ಜಾರಿ ಬಳಿಕ ಔಷಧಗಳ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ. ಏಕೆಂದರೆ ಈವರೆಗೆ ಔಷಧಗಳ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಜತೆಗೆ ಹೆಚ್ಚುವರಿ ತೆರಿಗೆ ವಿಧಿಸುತ್ತಿರು ವುದರಿಂದ ಗ್ರಾಹಕರು ದುಬಾರಿ ಬೆಲೆ ನೀಡಬೇಕಾಗಿದೆ. ಆದರೆ ಜಿಎಸ್‌ಟಿ ಬಳಿಕ ಹೆಚ್ಚುವರಿ ತೆರಿಗೆಗೆ ಅವಕಾಶವಿಲ್ಲದ ಕಾರಣ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಆರ್ಥಿಕ ತಜ್ಞ ಆರ್‌.ಜಿ.ಮುರಳೀಧರ್‌ ತಿಳಿಸಿದ್ದಾರೆ.

ಬಿಲ್‌ ಕೇಳಿ ಪಡೆಯಿರಿ
ಜಿಎಸ್‌ಟಿ ಜುಲೈ 1ರಿಂದ ಜಾರಿಗೆ ಬರಲಿದ್ದು, ಆರಂಭಿಕ ಮೂರು ತಿಂಗಳಲ್ಲಿ ತೆರಿಗೆ ಪ್ರಮಾಣ ಗಳಲ್ಲಿ ತುಸು ವ್ಯತ್ಯಯವಾಗುವ ಸಾಧ್ಯತೆ ಇದೆ. ಗ್ರಾಹಕರು ಪ್ರತಿ ಖರೀದಿಗೂ ರಸೀದಿ ಕೇಳಿ ಪಡೆಯಬೇಕು. ಹಾಗೆಯೇ ವ್ಯಾಪಾರಿಗಳೂ ಕಡ್ಡಾಯವಾಗಿ ರಸೀದಿ ನೀಡಬೇಕೆಂಬ ನಿಯಮವಿದೆ. ಇದನ್ನು ಎಲ್ಲ ಗ್ರಾಹಕರು- ವ್ಯಾಪಾರಿಗಳು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಬೆಲೆಗಳು ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿಯೊಂದು ವ್ಯವಹಾರವೂ ದಾಖಲಾಗಿ ಅದಕ್ಕೆ ಸೂಕ್ತ ತೆರಿಗೆ ಪಾವತಿಯಾದರೆ ಕ್ರಮೇಣ ಬೆಲೆಗಳು ಸ್ಪರ್ಧಾತ್ಮಕವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಜಿಎಸ್‌ಟಿ ಜಾರಿಯಾಗುವ ಆರಂಭಿಕ 2-3 ತಿಂಗಳಲ್ಲಿ ತೆರಿಗೆ ವ್ಯವಹಾರ ಸ್ಥಿರತೆ ಕಾಯ್ದು ಕೊಳ್ಳುವ ನಿರೀಕ್ಷೆ ಇದೆ. ಪ್ರತಿಯೊಬ್ಬ ಗ್ರಾಹಕರೂ ಪ್ರತಿ ಖರೀದಿಗೂ ಬಿಲ್‌ ಕೇಳಿ ಪಡೆಯುವುದನ್ನು ರೂಢಿಸಿ ಕೊಳ್ಳಬೇಕು. ಇದರಿಂದ ಬೆಲೆ ಇಳಿಕೆಯಾಗುವ ಜತೆಗೆ ಸ್ಥಿರತೆ ಕಾಯ್ದುಕೊಳ್ಳಲಿದೆ. ದೇಶದ ತೆರಿಗೆ ವ್ಯವಸ್ಥೆಯಲ್ಲಿ ಹೊಸ ಶಕೆ ಆರಂಭವಾಗಲಿದ್ದು, ರಾಷ್ಟ್ರದ ಆರ್ಥಿಕತೆಯಲ್ಲಿ ಹೊಸ ಬದಲಾವಣೆ ತರುವ ನಿರೀಕ್ಷೆ ಇದೆ.
– ಆರ್‌.ಜಿ.ಮುರಳೀಧರ್‌,
ಆರ್ಥಿಕ ತಜ್ಞರು

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next