Advertisement

ಬೆಳೆಯುವ ನಗರಗಳಿಗೆ ನದಿಯ ನೆನಪಿರಲಿ

11:53 AM Jun 04, 2018 | Harsha Rao |

ನೀರಿಲ್ಲದೇ ನಗರ ಬೆಳೆಯುವುದಿಲ್ಲ. ನಮ್ಮ ಪೇಟೆ, ಪಟ್ಟಣಗಳು ಕಾಲುವೆಗಳನ್ನು ಕಬಳಿಸಿ, ಮರಗಳನ್ನು ಕಡಿದು, ಕೆರೆಗಳನ್ನು ಅತಿಕ್ರಮಿಸಿ ಬದುಕುತ್ತಿವೆ. ಜಲಕ್ಷಾಮದ ತುರ್ತು ದಿನಗಳಲ್ಲಿಯೂ ತ್ಯಾಜ್ಯ ನೀರಿನ ಸಂಸ್ಕರಣೆಯ ಕೆಲಸವನ್ನು ಮರೆತಿವೆ. ದೂರದ ನದಿಯಿಂದ ನೀರು ಪಡೆಯುವುದು ಯೋಜನೆಗಳ ಸುಲಭ ದಾರಿಯಾಗಿದೆ. ನಗರ ಭೂ ಬಳಕೆಯಲ್ಲಿ ನೀರಿನ ನ್ಯಾಯ ಮಾಯವಾಗಿದೆ. ಕೃಷಿ ನೀರಾವರಿ ಅಣೆಕಟ್ಟೆಯ ನೀರಿಗೆ ನಗರಗಳು ದೊಡ್ಡ ಗ್ರಾಹಕರಾಗಿ ಬೆಳೆಯುತ್ತಿವೆ.

Advertisement

ನದಿ  ಅರಣ್ಯ ಸಂರಕ್ಷಣೆಯ ಗಂಭೀರ ಚರ್ಚೆಗಳಲ್ಲಿ ನಗರಗಳ ಜಾಣ ಮೌನ ಎಂದಿನಂತೆ ಮುಂದುವರಿದಿದೆ. ನೀರಿಗಾಗಿ ನಡೆದ ಗಲಾಟೆಯಲ್ಲಿ ಕೊಲೆ ಪ್ರಕರಣವೊಂದು ದಾಖಲಾದ ಕೋಲಾರದ ವ್ಯಥೆಯಾಗಲಿ, ಕಲುಶಿತ ನೀರು ಕುಡಿದು ಸಾವನ್ನಪ್ಪಿದ ಭದ್ರಾವತಿಯ ತಂದೆ ಮಗನ ಕಥೆಯಾಗಲಿ ಯಾರಿಗೂ ಬೇಕಾಗಿಲ್ಲ. ಬೆಂಗಳೂರು ಹೊರವಲಯದ ಗಾರ್ಮೆಂಟ್‌ ಕಾರ್ಖಾನೆಯಲ್ಲಿ ಇತ್ತೀಚೆಗೆ ನೂರಾರು ಜನ ನೀರು ಸೇವನೆಯಿಂದ ಅಸ್ವಸ್ಥರಾದುದನ್ನು ಆಲಿಸಲು ಯಾರಿಗೂ ಬಿಡುವಿಲ್ಲ. ಬಹುತೇಕ ನಗರವಾಸಿಗಳಿಗೆ “ಭವಿಷ್ಯದಲ್ಲಿ ನೀರಿಲ್ಲ’ ಎಂಬುದಕ್ಕಿಂತ ಇಂದು ನೀರು ಬಂದಿದೆಯೇ ಎಂಬುದಷ್ಟೇ ಮುಖ್ಯವಾಗಿದೆ. ವೃತ್ತಿ ಹೋರಾಟ, ಬೆಲೆ ಏರಿಕೆಯ ಜಂಜಡದಲ್ಲಿ ಬದುಕುವ ಬಡ, ಮಧ್ಯಮ ವರ್ಗದವರಿಗಂತೂ ನೀರಿನ ನೋವು ಕೇಳಲು ಬಿಡುವಿಲ್ಲ. ಕಾವೇರಿ, ಕೃಷ್ಣಾ ನದಿಗಳಲ್ಲಿ ನೀರಿಲ್ಲದಿದ್ದರೂ ನಗರಾಡಳಿತ ಏನಾದರೂ ತುರ್ತು ಕ್ರಮ ಕೈಗೊಳ್ಳುವ ವಿಶ್ವಾಸ ಇವರದು. ಸಾವಿರಾರು ಜನಕ್ಕೆ ನೀರಿಲ್ಲವೆಂದರೆ ಸರಕಾರ ಕೈಕಟ್ಟಿ ಕೂಡ್ರಲು ಸಾಧ್ಯವಿಲ್ಲ . ಇನ್ನೂ ಆಳಕ್ಕೆ ಹೊಸ ಕೊಳವೆಬಾವಿ ಕೊರೆಸಬಹುದು, ದೂರದಿಂದ ಟ್ಯಾಂಕರ್‌ ಮೂಲಕ ತುರ್ತಾಗಿ ನೀರು ನೀಡುತ್ತದೆಂಬ ಹುಚ್ಚು ನಂಬಿಕೆಯಿದೆ.

ನಿಗದಿತ ಶುಲ್ಕ 
ಪಾವತಿಸಿದರೆ ಕೆಲಸ ಮುಗಿಯಿತು. ನೀರು ಒದಗಿಸುವ ಹೊಣೆ ನಗರಾಡಳಿತದ್ದೆಂಬ ನಂಬಿಕೆ ಮತ್ತು ವರ್ತನೆ ಹಲವು ಮಂದಿಯದ್ದಾಗಿದೆ.  ನಲ್ಲಿಯಲ್ಲಿ ನೀರು ಬಾರದಿದ್ದಾಗ  ನಡೆಯುವಷ್ಟು ಚರ್ಚೆ ಅದೇ ನಲ್ಲಿಯಲ್ಲಿ ನೀರು ವ್ಯರ್ಥವಾಗಿ ಹರಿಯುವಾಗ ನಡೆಯುವುದಿಲ್ಲ. ದುಡ್ಡು ಕೊಟ್ಟರೆ ಎಲ್ಲವೂ ಸಿಗುವ ವ್ಯವಸ್ಥೆಗೆ ನೀರಿನ ಮೂಲ ಮರೆತು ಬದುಕುವ ಧೈರ್ಯ ಬಂದಿದೆ. ನಾವೆಲ್ಲ ಕುಡಿಯುವ ಒಂದು ಗ್ಲಾಸ್‌ ನೀರನ್ನು ಎಷ್ಟು ಆಳದಿಂದ ಎತ್ತಲಾಗಿದೆ? ಅದು ಎಷ್ಟು ಕಿಲೋ ಮೀಟರ್‌ ದೂರದಿಂದ ಬಂದಿದೆ? ನದಿ ಪರಿಸರ ಪರಿಸ್ಥಿತಿ ಹೇಗಿದೆ?ಇಂಥ ಪ್ರಶ್ನೆಗಳು ಹಲವರಿಗೆ ಹುಟ್ಟುವುದಿಲ್ಲ.  ಗ್ರಾಮೀಣ ಪ್ರದೇಶದ ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರ್‌, ಪಟ್ಟಣದ ವ್ಯಕ್ತಿಗೆ 70 ಲೀಟರ್‌, ನಗರಸಭೆ ನಿವಾಸಿಗೆ 100 ಲೀಟರ್‌ ಹಾಗೂ ನಗರಪಾಲಿಕೆ ಪ್ರದೇಶದ ನಿವಾಸಿಗಳಿಗೆ 135 ಲೀಟರ್‌ ನೀರು ಒದಗಿಸುವುದು ಯೋಜನೆಗಳ ಗುರಿಯಾಗಿದೆ. ಜನಗಣತಿ ಲೆಕ್ಕದಲ್ಲಿ ದಿನಕ್ಕೆ ಎಷ್ಟು ಮಿಲಿಯನ್‌ ಲೀಟರ್‌ ಒದಗಿಸಬೇಕೆಂಬ ಯೋಜನೆ ರೂಪಿಸುವುದು ಎಂಜಿನಿಯರ್‌ಗಳಿಗೆ ಅಭ್ಯಾಸವಾಗಿದೆ. ಆಳದ ನೀರೆತ್ತುವ ಅಥವಾ ದೂರದ ಜಲಾಶಯದಿಂದ ನೀರು ತರಲು ಯೋಜಿಸುವ ತಂತ್ರಜ್ಞರಿಗೆ ಮಳೆ ನೀರು ಹಿಡಿಯುವುದರ ಪ್ರಾಮುಖ್ಯತೆಯ ಕುರಿತು ಗೊತ್ತಿರುವುದಿಲ್ಲ. ಅಂತರ್ಜಲ ಹೆಚ್ಚಿಸುವ ಅರಿವಿಲ್ಲ. ಹೀಗಾಗಿ ಇವರ ಶಾಶ್ವತ ನೀರಾವರಿ ಯೋಜನೆಗಳು ಐದು ವರ್ಷವೂ ನೀರು ನೀಡುವುದಿಲ್ಲ.  ರಾಜ್ಯದ ಭೌಗೋಳಿಕ ವಿಸ್ತೀರ್ಣದ ಮೂರರಲ್ಲಿ  ಎರಡು ಭಾಗ ವಾರ್ಷಿಕ 750ಮಿಲಿ ಮೀಟರ್‌ ಮಾತ್ರ ಮಳೆ ಸುರಿಯುವ ಪ್ರದೇಶವಾಗಿದೆ. ನೀರಿನ ಬೇಡಿಕೆ ದಿನೇ ದಿನೆ ಏರುತ್ತಿದೆ. ಕೊಳವೆ ಬಾವಿ, ಕೆರೆ, ಜಲಾಶಯಗಳಿಂದ ನೀರಿನ ಪೂರೈಕೆಯಾಗುತ್ತಿದೆ. 

ಗ್ರಾಮೀಣ ಭಾಗದಿಂದ ನಗರ ಪ್ರದೇಶಗಳಿಗೆ ಆಗುತ್ತಲೇ ಇರುವ  ವಲಸೆ ಆತಂಕಕಾರಿಯಾಗಿದೆ. ಕ್ರಿ.ಶ. 2001ರಲ್ಲಿ ನಡೆದ  ಜನಗಣತಿ ಪ್ರಕಾರ 35,56,960 ಮನೆಗಳು ನಗರದಲ್ಲಿದ್ದವು. 2011ರಲ್ಲಿ ನಡೆದ ಜನಗಣತಿಯ ಪ್ರಕಾರ ಮನೆಗಳ ಸಂಖ್ಯೆ 53, 15, 715 ಕ್ಕೆ ಏರಿದೆ. ಅಂತರ್ಜಲ ಕುಸಿತದಿಂದ ತೆರೆದ ಬಾವಿಗಳ ಬಳಕೆ ಕಡಿಮೆಯಾಗಿದೆ. ನಗರ ನಿವಾಸಿಗಳಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಕುಟುಂಬಗಳು ಕೇಂದ್ರೀಕೃತ ಕುಡಿಯುವ ನೀರಿನ ವ್ಯವಸ್ಥೆಯನ್ನೇ ನಂಬಿ ಬದುಕಿವೆ.  ನೀರಿನ ಮೂಲ, ವಸತಿ ನೆಲೆಯಿಂದ ಹೆಚ್ಚು ಹೆಚ್ಚು ದೂರಾಗುತ್ತ ಹೋದಂತೆ ನೀರಿನ ಕುರಿತಂತೆ ಇರುವ ಅಜಾnನವೂ ಹೆಚ್ಚುತ್ತಿದೆ. 

ಕ್ರಿ. ಶ. 1960ರಲ್ಲಿ 261 ಕೆರೆಗಳಿದ್ದ ಬೆಂಗಳೂರಲ್ಲಿ  ಈಗ ಅರ್ಧದಷ್ಟೂ ಉಳಿದಿಲ್ಲ. ಕೆರೆಗಳಿಗೆ ಬೆಂಕಿ ಬೀಳುವಷ್ಟು ಮಾಲಿನ್ಯ ವ್ಯಾಪಿಸಿದೆ. ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಪಡೆಯುತ್ತಿದ್ದ ನಗರಕ್ಕೆ ಇಂದು ಕಾವೇರಿ ವಿವಿಧ ಹಂತದ ಯೋಜನೆಗಳು ಮುಗಿದರೂ ನೀರಿನ  ಸಮಸ್ಯೆ ಉಳಿದಿದೆ. ಕೊಡಗು, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ನಗರಗಳು ಕಾವೇರಿಯಿಂದ ಬದುಕಬೇಕು. ಕೃಷಿಗಿಂತ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಇದೆ.

Advertisement

ನಗರದ ನೀರಿನ ಸಮಸ್ಯೆ ಬೆಳೆದಂತೆ ಕೃಷಿ ನೀರಾವರಿ ಸಮಸ್ಯೆ ಗಡಚಾಗುತ್ತಿದೆ. ಇಂದು 300-400 ಕಿಲೋ ಮೀಟರ್‌ ದೂರದ ಮಂಗಳೂರಿನ ಸಮುದ್ರ ತಟದ ನೇತ್ರಾವತಿಯಿಂದಲೋ , ಸಾಗರದ ಲಿಂಗನಮಕ್ಕಿ ಜಲಾಶಯದಿಂದಲೋ ನೀರು ಪಡೆಯುವ  ಹೊಸ ಕನಸುಗಳನ್ನು ಬೆಂಗಳೂರು ಕಾಣುತ್ತಿದೆ. ಅಭಿವೃದ್ಧಿಯ ಆಟ ಹೇಗಿದೆಯೆಂದರೆ, ಸಣ್ಣ ಮಳೆ ಸುರಿದರೆ ಪ್ರವಾಹದ ಸಮಸ್ಯೆ ಅನುವಿಭಸುವ ಈ ನಗರ ನೀರಿಗಾಗಿ ಹೊಸ ನದಿಗಳನ್ನು ಸದಾ ಹುಡುಕುತ್ತಿದೆ.
ಇಂದು ಎಲ್ಲ ಪೇಟೆ, ಪಟ್ಟಣಗಳೂ ನದಿಗಳನ್ನೇ ನಂಬಿ ಬದುಕುತ್ತಿವೆ. ವಿಜಾಪುರ ಆದಿಲ್‌ಶಾಗಳ ನಗರ. ಇಲ್ಲಿಗೆ ಕ್ರಿ. ಶ. 1815ರಲ್ಲಿ ಕ್ಯಾಪ್ಟನ್‌ ಸೈಕ್‌ ಭೇಟಿ ನೀಡಿದ್ದರು. ಕೋಟೆಯ ಒಳಗಡೆ 700 ಮೆಟ್ಟಿಲುಳ್ಳ ಬಾವಿಗಳನ್ನು , 300 ಸೇದು ಬಾವಿಗಳನ್ನು ನೋಡಿದ್ದಾಗಿ ಅವರು ದಾಖಲಿಸಿದ್ದಾರೆ. ಅಲೀಖಾನ್‌ ಬಾವಡಿ, ಇಬ್ರಾಮ್‌ಪುರ ಬಾವಡಿ, ಇಲಾಲ ಬಾವಡಿ, ಗುಮ್ಮಟ ಬಾವಡಿ, ಚಾಂದ್‌ ಬಾವಡಿ, ತಾಜ್‌ ಬಾವಡಿ ಹೀಗೆ ಪಟ್ಟಿಗಳಿವೆ. ನಮ್ಮ ಆಡಳಿತದ ಕೇಂದ್ರೀಕೃತ ನೀರಾವರಿ ಯೋಜನೆಯ ದೋಷದಿಂದ ಶತಮಾನಗಳ ನೀರಾವರಿಯ ಪಾರಂಪರಿಕ ವ್ಯವಸ್ಥೆಯನ್ನು ನಿರ್ವಹಿಸಲು ಸೋತಿದೆ.   ಬೀದರ್‌ ಜಿಲ್ಲೆಯಲ್ಲಿ ಮಾಂಜಾÅ ನದಿಗೆ ಕೃಷಿ ನೀರಾವರಿಗೆಂದು ರೂಪಿಸಿದ ಅಣೆಕಟ್ಟೆಯ ನೀರಿನಿಂದ ನಗರ ಕುಡಿಯುವ ನೀರು ಪಡೆಯುತ್ತಿದೆ. ಶಿವಮೊಗ್ಗ, ಭದ್ರಾವತಿ, ಹರಿಹರ, ದಾವಣಗೇರಿ, ಕೊಪ್ಪಳ, ಗಂಗಾವತಿ, ಹೊಸಪೇಟೆ, ಸಿಂಧನೂರುಗಳಿಗೆ ತುಂಗಭದ್ರಾ ನೀರು ನೀಡಬೇಕು. ಇಂದು ಬೆಳಗಾವಿ, ಬಾಗಲಕೋಟೆ, ಗೋಕಾಕ್‌, ರಾಯಚೂರು, ಯಾದಗಿರಿ ಸೇರಿದಂತೆ ಹಲವು ನಗರಗಳು ಕೃಷ್ಣಾ ನದಿಯ ನೀರನ್ನೇ ನಂಬಿವೆ. ನದಿಗಳು ಒಣಗಿದರೆ ಸಹಜವಾಗಿ ನಗರದ ಸಮಸ್ಯೆ ಹೆಚ್ಚುತ್ತದೆ. ರಾಜ್ಯದ ಸುಮಾರು ಮೂರು ಕೋಟಿ ಜನ ನಗರ, ಮಹಾನಗರಗಳಲ್ಲಿ ಬದುಕುತ್ತಿದ್ದಾರೆ. ಬಿಕ್ಕಟ್ಟಿನ ಈ ದಿನಗಳಲ್ಲಿ ಜಲ ಸಂರಕ್ಷಣೆ ಮೂಲಕ ನದಿ ಉಳಿಸುವ ಕಾರ್ಯಕ್ಕೆ ನಗರಗಳು ಮುಂದಾಗಬೇಕಿದೆ. 

ಹಳ್ಳಿಗಳಲ್ಲಿ ಕೃಷಿ ಮುಖ್ಯವೃತ್ತಿ. ಒಟ್ಟೂ ಭೂಮಿಯ ಶೇಕಡಾ ಒಂದರಷ್ಟು ಪ್ರದೇಶದಲ್ಲಿಯೂ ಮನೆಗಳಿರುವುದಿಲ್ಲ.

ಸುರಿದ ಮಳೆ ನೀರು ಕಾಡು, ಗುಡ್ಡ, ಕೃಷಿ ಭೂಮಿಗಳಲ್ಲಿ ಇಂಗಲು ಅವಕಾಶವಿದೆ. ಆದರೆ ನಗರದ ಶೇ. 85 ರಷ್ಟು ಪ್ರದೇಶದಲ್ಲಿ ಕಾಂಕ್ರೀಟ್‌ ಕಟ್ಟಡಗಳು, ರಸ್ತೆಗಳು ಆವರಿಸಿವೆ. ಮಳೆ ನೀರು ರಸ್ತೆ ಗಟಾರಗಳ ಮೂಲಕ ಮನೆಯ ತ್ಯಾಜ್ಯ ನೀರಿನ ಜೊತೆ ಹರಿಯುತ್ತದೆ. ಕೆರೆಗೆ ನೀರು ಪೂರೈಸುವ ಕಾಲುವೆಗಳ ಅತಿಕ್ರಮಣವಾಗಿವೆ. ಮಳೆ ಸುರಿದರೂ ನೀರು ಇಂಗದ ಸ್ಥಿತಿ ಇದೆ. ನೀರಿನ ಸಮಸ್ಯೆಗೆ ಪರಿಹಾರವಾಗಿ ಮನೆಯ ಛಾವಣಿ ನೀರನ್ನು ಸಂಗ್ರಹಿಸಿ ಬಳಸುವ ಪ್ರಜ್ಞೆ ಬೆಳೆಯಬೇಕು.  ನೀರಿನ ಮಿತಬಳಕೆ, ಭೂಮಿಗೆ ನೀರಿಂಗಿಸುವುದು, ಮಳೆ ನೀರು ಸಂಗ್ರಹ, ಕೆರೆಗಳ ಸಂರಕ್ಷಣೆಯಿಂದ ನಗರದ ಜನ ನೀರ ನೆಮ್ಮದಿಯ ದಾರಿ ಅನುಸರಿಸಬಹುದು. ಭವಿಷ್ಯದ ನದಿ ಸಂರಕ್ಷಣೆಗೆ ಜಲಸಾಕ್ಷರ ನಗರ ಕಟ್ಟುವ ಸವಾಲು ನಮ್ಮೆದುರಿದೆ. ಪುಟಾಣಿ ಮಕ್ಕಳ ಮೂಲಕ ನದಿ ಪ್ರೀತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಹೋಟೆಲ್‌, ದೇಗುಲ, ಉದ್ಯಾನ, ಸರಕಾರಿ ಕಚೇರಿಗಳಲ್ಲಿ ನಗರದ ನೀರಿನ ಮೂಲದ ಪರಿಚಯ ವಿವರಿಸುವ ಫ‌ಲಕ ಪ್ರದರ್ಶಿಸಿ ನದಿಯ ಪರಿಸರ ಪರಿಸ್ಥಿತಿ ತಿಳಿಸಬಹುದು. ನಾಳೆಗಾಗಿ ನೀರುಳಿಸುವ ಕರ್ತವ್ಯದಲ್ಲಿ ನಗರಗಳನ್ನು ಜೋಡಿಸಬೇಕು.  

ನೀರು ಹಾಗೂ ನದಿಯ ಬಗ್ಗೆ ಮಾತಾಡುವಾಗ ಹಳೆಯ ಜಗಳವೊಂದು ನೆನಪಾಗುತ್ತಿದೆ. ಹಳ್ಳಿಗರು ನಗರಕ್ಕೆ ಬರಬಾರದು. ಕೃಷಿ ಉತ್ಪನ್ನಗಳನ್ನು ನಗರದಲ್ಲಿ ಮಾರಾಟ ಮಾಡಬಾರದೆಂದು ಶಿರಸಿಯ ಪೌರಾಯುಕ್ತನೊಬ್ಬ 15 ವರ್ಷಗಳ ಹಿಂದೆ ಅಬ್ಬರಿಸಿದ್ದನು. ಶಿರಸಿ ನಗರಕ್ಕೆ ದಿನಕ್ಕೆ 14 ಲಕ್ಷ ಗ್ಯಾಲನ್‌ ನೀರು ಒದಗಿಸಲು ಏಷ್ಯನ್‌ ಡೆವಲೆಪ್‌ಮೆಂಟ್‌ ಬ್ಯಾಂಕ್‌ ನೆರವಿನ 32 ಕೋಟಿ ರೂಪಾಯಿಯ ಕುಡಿಯುವ ನೀರಿನ ಯೋಜನೆ ಮಂಜೂರಾಗಿತ್ತು. ಹಳ್ಳಕ್ಕೆ ಆರು ಮೀಟರ್‌ ಅಣೆಕಟ್ಟು ನಿರ್ಮಿಸಿ ನೀರು ಒದಗಿಸುವ ಯೋಜನೆಯದು. ಬೇಸಿಗೆಯಲ್ಲಿ ಹಳ್ಳ ಒಣಗುತ್ತಿತ್ತು,  ನದಿ ಪಾತ್ರದ ಹಳ್ಳಿಗರಿಗೆ ನೀರಿರಲಿಲ್ಲ. ಇದನ್ನು ವಿರೋಧಿಸಿ ನಮ್ಮ ಹೋರಾಟಗಳು ವರ್ಷಗಳ ಕಾಲ ನಡೆದವು. ನಗರದ ಕೆರೆಗಳನ್ನು ಕೊಳಚೆಗುಂಡಿಯಾಗಿಸಲು ಬಿಟ್ಟು ದೂರದ ನದಿಯಿಂದ ನೀರು ತರುವುದು ಸರಿಯಲ್ಲವೆಂದು ನಾವು ಜೋರಾಗಿ ವಾದಿಸಿದೆವು. ನಗರಕ್ಕೆ ಕುಡಿಯಲು ನೀರು ನೀಡದಿದ್ದರೆ ನಗರಕ್ಕೆ ಬರಬಾರದೆಂಬ ಉಗ್ರ ಹೇಳಿಕೆಗಳು ಹೊರಬಿದ್ದವು! 

ಕೆರೆಗಳ ಹೂಳೆತ್ತಿದರೆ ಅಂತರ್ಜಲ ಉಳಿಯುತ್ತದೆ. ತೆರೆದ ಬಾವಿಗಳಲ್ಲಿ ನೀರು ದೊರೆಯುತ್ತದೆ. ದೂರದ ನದಿ ನೀರಿನ ಅವಲಂಬನೆ ಕಡಿಮೆಯಾಗುತ್ತದೆ.  ಕೋಟ್ಯಂತರ ರೂಪಾಯಿಗಳನ್ನು ಅಣೆಕಟ್ಟೆಗೆ ವಿನಿಯೋಗಿಸುವ ಬದಲು ಇರುವ ಕೆರೆಗಳನ್ನು ಸುಧಾರಿಸಿದರೆ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಯುತ್ತದೆಂದು ಎಷ್ಟೇ ವಿವರಿಸಿದರೂ ಕೇಳುವವರಿರಲಿಲ್ಲ. ಬೆಂಗಳೂರಿನಲ್ಲಿ ಕೆರೆಗಳನ್ನು ಮುಚ್ಚಿ ಬಸ್‌ ನಿಲ್ದಾಣಗಳನ್ನು ಮಾಡಿಲ್ಲವೇ? ಜನಕ್ಕೆ ಬದುಕುವುದಕ್ಕೆ ಜಾಗವಿಲ್ಲದಾಗ ಕೆರೆ ಉಳಿಸುವುದು ಮೂರ್ಖತನವೆಂದು  ಹಲವರು ಮಾತಾಡುತ್ತಿದ್ದರು.  

ಪರಿಸ್ಥಿತಿ ಈಗ ಬದಲಾಗಿದೆ. ರಾಜ್ಯವೇ ಗಮನಿಸುವಂತೆ ಶಿರಸಿ ನಗರದ ಎಲ್ಲ ಕೆರೆಗಳ ಹೂಳು ತೆಗೆಯಲಾಗಿದೆ. ಆದರೆ, ಇದಕ್ಕಾಗಿ ಸರಕಾರದ ಯೋಜನೆಗಳು ಬರಲಿಲ್ಲ. ಕಳೆದ ವರ್ಷ ಆರಂಭವಾದ ಶಿರಸಿ ಜೀವಜಲ ಕಾರ್ಯಪಡೆ “ಒಂದು ಕ್ಷಣ ಸರಕಾರ ಮರೆಯೋಣ. ನೀರಿಗಾಗಿ ನಾವೇನು ಮಾಡಬೇಕೆಂದು ಯೋಚಿಸೋಣ’ ತತ್ವ ನಂಬಿದೆ. ಆನೆಹೊಂಡ, ಶಂಕರತೀರ್ಥ, ರಾಯಪ್ಪನಕೆರೆ, ಬಶೆಟ್ಟಿಕೆರೆ, ಬೆಳ್ಳಕ್ಕಿಕೆರೆ, ಸುಪ್ರಸನ್ನ ನಗರ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ಕಾಯಕಲ್ಪ ನೀಡಿದೆ. ಅಂದಾಜು ಒಂದು ಕೋಟಿ ಇಪ್ಪತ್ತೆ„ದು ಲಕ್ಷ ರೂಪಾಯಿ ಸಾರ್ವಜನಿಕ ದೇಣಿಗೆ ಹಣದಲ್ಲಿ ಮಹತ್ವದ ಕೆಲಸ ನಡೆದಿದೆಯೆಂದು ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ್‌ ವಿವರಿಸುತ್ತಾರೆ. ನೀರಿಗಾಗಿ ನಗರ ಎದ್ದು ನಿಂತಿದೆ. ಕೆರೆಗೆ ಪುನಃ ಹೂಳು ಬರದಂತೆ, ಕಸಕಡ್ಡಿಗಳನ್ನು ಚೆಲ್ಲದಂತೆ ಜನರ ಕಣ್ಗಾವಲಿದೆ. ಕೆರೆ ನಮ್ಮದೆಂಬ ಪ್ರೀತಿ ಹಬ್ಬುತ್ತಿದೆ. ಕೆರೆ ಪುನಶ್ಚೇತನದಿಂದ ಕೆರೆ ಸುತ್ತಲಿನ ಒಂದೆರಡು ಕಿಲೋ ಮೀಟರ್‌ ಸುತ್ತಳತೆಯ ಬಾವಿಗಳಲ್ಲಿ ಅಂತರ್ಜಲ ಸುಧಾರಣೆಯಾಗಿ ಜಲಕ್ಷಾಮ ಗೆಲ್ಲುವ ಧೈರ್ಯ ಬಂದಿದೆ. ಕೆರೆ ಕಾಯಕದ ಮೂಲಕ ನದಿ ನೀರಿನ ಬಳಕೆ ನಿಯಂತ್ರಿಸುವ ನಿದರ್ಶನ ದೊರಕಿದೆ. ಸಣ್ಣ ಮಾದರಿಯ ದೊಡ್ಡ ಪಾಠ ಎಲ್ಲ ನಗರಗಳೂ ಅನುಸರಿಸಬೇಕಲ್ಲವೇ?

ಶಿವಾನಂದ ಕಳವೆ

ಮುಂದಿನ ಭಾಗ- ಹಸಿರು ಕಾಲುವೆಯ ಹೊಣೆ ಯಾರದು?

Advertisement

Udayavani is now on Telegram. Click here to join our channel and stay updated with the latest news.

Next