Advertisement

ಬಂಡಾಯಕ್ಕೆ ಲಕ್ಷ್ಯ ನೀಡಬೇಕಿಲ್ಲ: ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌

09:14 PM Aug 26, 2023 | Team Udayavani |

ಮುಂಬೈ: ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಯಲ್ಲಿನ ಬಿರುಕಿನ ಕುರಿತು ಪ್ರಶ್ನೆಗಳು ಮೂಡುತ್ತಲಿರುವ ನಡುವೆಯೇ ಶನಿವಾರ ಎನ್‌ಸಿಪಿ ನಾಯಕ ಶರದ್‌ ಪವಾರ್‌, ಕಟುವಾಗಿಯೇ ಎಲ್ಲಾ ಪ್ರಶ್ನೆಗಳಿಗೆ ತೆರೆ ಎಳೆದಿದ್ದಾರೆ. ಪಕ್ಷವನ್ನು ಕೆಲವು ಶಾಸಕರು ತೊರೆದಿರುವುದು ಸತ್ಯ, ಆದರೆ ಪಕ್ಷ ವಿಭಜನೆಗೊಂಡಿಲ್ಲ. ಬರೀ ಕೆಲವು ಶಾಸಕರೇ ಇಡೀ ಪಕ್ಷವಲ್ಲ. ಜತೆಗೆ ಬಂಡಾಯ ಎದ್ದು ಹೋದವರಿಗೆ ಪದೇ ಪದೆ ಅವರ ಹೆಸರುಗಳನ್ನು ತೆಗದುಕೊಂಡು ಪ್ರಾಮುಖ್ಯತೆ ನೀಡುವ ಅಗತ್ಯವೂ ಇಲ್ಲ ಎಂದಿದ್ದಾರೆ.

Advertisement

ಎನ್‌ಸಿಪಿ ವಿಭಜನೆಗೊಂಡಿಲ್ಲ, ಅಜಿತ್‌ ಪವಾರ್‌ ಕೂಡ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಶರದ್‌ ಅವರ ಪುತ್ರಿ ಸುಪ್ರಿಯಾ ಸುಳೆ ಹೇಳಿದ್ದಾರೆಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಶರದ್‌ ಶನಿವಾರ ಸ್ಪಷ್ಟನೆ ನೀಡಿ, ಅಂಥ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದಿದ್ದಾರೆ.

ಇದೇ ವೇಳೆ ಬಿಜೆಪಿ ಮೈತ್ರಿಸರ್ಕಾರದ ವಿರುದ್ಧವೂ ವಾಗ್ಧಾಳಿ ನಡೆಸಿದ ಅವರು ” ಬಿಜೆಪಿ ಜತೆಗೆ ಕೈ ಜೋಡಿಸಿ ಹೋದವರ ಬಗ್ಗೆ ಮಹಾರಾಷ್ಟ್ರದ ಜನರು ಅಸಮಾಧಾನಗೊಂಡಿರುವುದು ತಿಳಿಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಇದಕ್ಕೆ ಜನರು ಪ್ರತಿಕ್ರಿಯೆ ನೀಡಿ, ಬಿಜೆಪಿಗೆ ಅದರ ಸ್ಥಾನ ಏನೆಂದು ತಿಳಿಸುತ್ತಾರೆ’ ಎಂದಿದ್ದಾರೆ.

ಇನ್ನು ಶಿವಸೇನೆ ಉದ್ಧವ್‌ ಠಾಕ್ರೆ ಬಣದ ನಾಯಕ ಸಂಜಯ್‌ ರಾವತ್‌ ಕೂಡ ಶರದ್‌ ಅವರಿಗೆ ಬೆಂಬಲ ಸೂಚಿಸಿ, ಎನ್‌ಸಿಪಿ ತೊರೆದಿರುವವರ ವಿರುದ್ಧ ಶರದ್‌ ಗೆರಿಲ್ಲಾ ಯುದ್ಧ ಆರಂಭಿಸಿದ್ದಾರೆ, ಅವರೆಂದಿಗೂ ಬಿಜೆಪಿ ಸೇರ್ಪಡೆಗೊಳ್ಳುವುದಿಲ್ಲ ಎಂದು ಸಂಜಯ್‌ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next