Advertisement

ವೈದ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌: ಡಿಎಚ್‌ಒ

01:15 AM May 09, 2022 | Team Udayavani |

ಕಡಬ: ಬೈಕ್‌ ಅಪಘಾತದ ಗಾಯಾಳುವಿಗೆ ಗಾಯದ ಕಲ್ಲು-ಮಣ್ಣನ್ನು ಸ್ವಚ್ಛಗೊಳಿಸದೆ ಹೊಲಿಗೆ ಹಾಕಿದ್ದ ಕಡಬ ಸರಕಾರಿ ಆಸ್ಪತ್ರೆಯ ಸಿಬಂದಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಗಾಯಾಳುವಿಗೆ ತತ್‌ಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಿ ಖಾಸಗಿ ವೈದ್ಯರಲ್ಲಿಗೆ ಹೋಗುವಂತೆ ಸೂಚನೆ ನೀಡಿದ್ದಾಗಿ, ಗಾಯಾಳು ಈ ಸೂಚನೆಯನ್ನು ಪಾಲಿಸದೆ ಮನೆಗೆ ತೆರಳಿದ್ದರು ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹೇಳಿದ್ದಾರೆ.

ಗಾಯಾಳು ಕೆಲವು ದಿನಗಳ ಬಳಿಕ ಗಾಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಖಾಸಗಿ ವೈದ್ಯರನ್ನು ಭೇಟಿಯಾಗಿದ್ದಾರೆ. ಅಲ್ಲಿ ಎಕ್ಸ್‌ರೇ ಮಾಡಿ ಪರಿಶೀಲನೆ ಮಾಡಿದಾಗ ಗಾಯವಿರುವ ಭಾಗದಲ್ಲಿ ಕಲ್ಲು ಮತ್ತು ಮಣ್ಣಿನ ಕಣಗಳು ಪತ್ತೆಯಾಗಿದ್ದು, ಸೋಂಕು ಆಗಿರುವುದು ಗೊತ್ತಾಗಿದೆ. ಮೇಲ್ನೋಟಕ್ಕೆ ಇದು ವೈದ್ಯಾಧಿಕಾರಿಗಳು ಮತ್ತು ಸಿಬಂದಿಯ ನಿರ್ಲಕ್ಷ್ಯ ಎಂದು ಕಂಡುಬಂದಿದ್ದು, ಸಂಬಂಧಿಸಿದ ಅಧಿಕಾರಿ ಗಳಿಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಅಲ್ಲದೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ತಿಳಿಸಿದ್ದೇನೆ. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ನಡೆದಿರುವುದು ದೃಢಪಟ್ಟಲ್ಲಿ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಡಿಎಚ್‌ಒ ಹೇಳಿದರು.

ತಪ್ಪು ಮಾಹಿತಿ: ಗಾಯಾಳು
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಪುರುಷೋತ್ತಮ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಡಬ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದಿದ್ದಾರೆ. ಕಡಬ ಸರಕಾರಿ ಆಸ್ಪತ್ರೆಯಲ್ಲಿ ನನ್ನ ಗಾಯಕ್ಕೆ ಸ್ಟಿಚ್‌ ಮಾಡಿದ ಬಳಿಕ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿಲ್ಲ. ಅಲ್ಲದೆ ನನಗೂ ಆ ಸಂದರ್ಭದಲ್ಲಿ ಬೇರೆಡೆಗೆ ಹೋಗುವ ಅಗತ್ಯ ಕಾಣಲಿಲ್ಲ. ಎರಡು ದಿನಗಳ ಬಳಿಕ ನೋವು ಜಾಸ್ತಿಯಾಗಿದ್ದು, ಆಗಲೂ ಕಡಬ ಸರಕಾರಿ ಆಸ್ಪತ್ರೆಗೆ ಎರಡು ಬಾರಿ ಭೇಟಿ ನೀಡಿದ್ದೆ. ಆ ಸಂದರ್ಭದಲ್ಲಿ ಬೇರೆ ಆಸ್ಪತ್ರೆಗೆ ಯಾಕೆ ಹೋಗಿಲ್ಲ ಎಂದು ಅಲ್ಲಿನ ವೈದ್ಯರು ಕೇಳಿರಲಿಲ್ಲ. ಎಕ್ಸ್‌ರೇ ಯನ್ನು ಅಲ್ಲಿ ತೋರಿಸಿದಾಗಲೂ ಏನೂ ಹೇಳಿರಲಿಲ್ಲ.

ಆ ಬಳಿಕ ಗಾಯ ಉಲ್ಬಣಗೊಂಡಾಗ ನಾನೇ ಮತ್ತೆ ಎಕ್ಸ್‌ರೇ ಮಾಡಿಸಿ ಬೇರೆ ಖಾಸಗಿ ಆಸ್ಪತ್ರೆಗೆ ತೆರಳಿದಾಗ ಗಾಯವನ್ನು ಶುಚಿಗೊಳಿಸದೆಯೇ ಹೊಲಿಗೆ ಹಾಕಿರುವುದು ಬೆಳಕಿಗೆ ಬಂದಿತ್ತು. ಕಡಬ ಆಸ್ಪತ್ರೆಯ ವೈದ್ಯರು ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಲಾಗುವುದು ಎಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next