Advertisement

ಬಿಸಿಲಿನ ಆಘಾತ: ಸರಕಾರಿ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್‌

01:17 AM Apr 08, 2024 | Team Udayavani |

ಬೆಂಗಳೂರು: ರಾಜ್ಯದೆಲ್ಲೆಡೆ ಬಿಸಿಲಿನ ಬೇಗೆ ತೀವ್ರವಾಗಿದ್ದು, ಬಿಸಿಲಿನ ಆಘಾತದ ಅಪಾಯ ಎದುರಾಗಿದೆ. ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳು ಈ ನಿಟ್ಟಿನಲ್ಲಿ ಸಜ್ಜಾಗಿವೆ.

Advertisement

ಅತಿಯಾದ ತಾಪದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ 5 ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆ ಮೀಸಲಿಡಲು ಆದೇಶಿಸಲಾಗಿದೆ. ಜತೆಗೆ ತುರ್ತು ಅಗತ್ಯವಿರುವ ಔಷಧಗಳನ್ನು ಶೇಖರಿಸಲು ಸೂಚಿಸಿದ್ದು, ಅತಿಯಾದ ಶಾಖದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ನಿರ್ವಹಣೆಗೆ ವೈದ್ಯಾಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಾ| ರಂದೀಪ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೀಟ್‌ ಸ್ಟ್ರೋಕ್‌ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ತಲಾ 5 ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಮೈಸೂರಿನಲ್ಲಿ ಪ್ರತೀ ತಾಲೂಕು ಆಸ್ಪತ್ರೆಗಳಲ್ಲಿ 2 ಹಾಸಿಗೆ ಮೀಸಲಿಟ್ಟಿದೆ.

ಇದರೊಂದಿಗೆ ಕೋವಿಡ್‌ ಸಮಯದಲ್ಲಿ ತೆರೆಯಲಾಗಿದ್ದ ಐಸಿಯು ಕೇಂದ್ರಗಳನ್ನು ಪುನರ್‌ ಸಜ್ಜುಗೊಳಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲೂ ಅಗತ್ಯ ಔಷಧ ಸಂಗ್ರಹಿಸಿಡಲಾಗಿದೆ. ಒಆರ್‌ಎಸ್‌ ದ್ರಾವಣವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಪಿ.ಸಿ. ಕುಮಾರಸ್ವಾಮಿ “ಉದಯವಾಣಿ’ಗೆ ತಿಳಿಸಿದ್ದಾರೆ.

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಬಿರು ಬಿಸಿಲು, ಉಷ್ಣ ಅಲೆಯಲ್ಲಿ ಬೇಯುತ್ತಿದೆ. ವಿಜಯಪುರ ಜಿಲ್ಲೆಯ ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ 10, ತಾಲೂಕಾಸ್ಪತ್ರೆಗಳಲ್ಲಿ ತಲಾ 5 ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಲಾ 2ರಂತೆ ಹಾಸಿಗೆಗಳನ್ನು ಮೀಸಲಿಡಲಾಗಿದೆ. ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ತತ್‌ಕ್ಷಣವೇ ಸೂಕ್ತ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಹಾಸಿಗೆಗಳನ್ನು ಮೀಸಲಿಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ 2-3 ಹಾಗೂ ಜಿಲ್ಲಾಸ್ಪತ್ರೆಯಲ್ಲಿ 6 ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆಗೆ ಒಳಗಾಗಿ ಬಳಲಿದವರಲ್ಲಿ ಏಳು ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಮುಂದಿನ ಎರಡು ದಿನಗಳಲ್ಲಿ ಇದು ದುಪ್ಪಟ್ಟಾಗುವ ಆತಂಕವಿದೆ. ಗದಗ, ಬೆಳಗಾವಿಗಳಲ್ಲಿಯೂ ಇಂಥದ್ದೇ ಕ್ರಮ ಕೈಗೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next