ಬೆಂಗಳೂರು: ರಿಯಲ್ ಎಸ್ಟೇಟ್ ವಲಯವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಚಿಂತಿಸಿರುವುದಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಪ್ರಕಟಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕ ಇಳಿಕೆ ಸೇರಿ ಇತರೆ ರಿಯಾಯ್ತಿ ನೀಡದೆ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಉದ್ಯಮದವರು ಮಾತ್ರವಲ್ಲದೇ ಗ್ರಾಹಕರಿಗೂ ತೀವ್ರ ಹೊರೆಯಾಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.
ಸದ್ಯ ಭೂಮಿ, ಅಭಿವೃದ್ಧಿಪಡಿಸಿದ ಭೂಮಿ, ಅಭಿವೃದ್ಧಿಯಾದ ನಿವೇಶನಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿದ್ದು, ಒಟ್ಟಾರೆ ರಿಯಲ್ ಎಸ್ಟೇಟ್ ಉದ್ಯಮವನ್ನು ಜಿಎಸ್‌ಟಿಯಡಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಮುದ್ರಾಂಕ ಮತ್ತು ನೋಂದಣಿ ಶುಲ್ಕ, ಹುಟ್ಟುವಳಿ ತೆರಿಗೆ (ಇನ್‌ಪುಟ್ ಕ್ರೆಡಿಟ್) ಸೌಲಭ್ಯ, ಕಾಮಗಾರಿ ಒಡಂಬಡಿಕೆ, ಕಟ್ಟಡ ನಿರ್ಮಾಣಕ್ಕೆ ಬಳಸುವ ಸಾಮಗ್ರಿ ಮೇಲಿನ ಜಿಎಸ್‌ಟಿ ಸೇರಿ ಎಲ್ಲ ಅಂಶಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಗ್ರಾಹಕರಿಗೆ ಹೊರೆಯಾಗದ, ಆರ್ಥಿಕ ಪ್ರಗತಿಗೂ ಪೂರಕವಾಗಿ ಜಿಎಸ್‌ಟಿ ವ್ಯಾಪ್ತಿಗೆ ತರಬೇಕಿದೆ.
ದೇಶದಲ್ಲಿ ದೊಡ್ಡ ಮೊತ್ತದ ಬಂಡವಾಳ ಹೂಡಿಕೆಯಾಗುತ್ತಿರುವ ವಲಯಗಳಲ್ಲಿ ರಿಯಲ್ ಎಸ್ಟೇಟ್ ಕೂಡ ಪ್ರಮುಖವಾದುದು. ವಿವಿಧ ವಲಯದ ಆರ್ಥಿಕ ವಹಿವಾಟು ಏರಿಳಿತ ಉಂಟಾಗುತ್ತಿರುವ ಹೊತ್ತಿನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವೂ ಲಾಭದಾಯಕ ಇಲ್ಲವೇ ಹೂಡಿಕೆ ಮೊತ್ತಕ್ಕೆ ನಷ್ಟ ಆತಂಕವಿಲ್ಲದ ವಲಯ ಎಂಬ ಅಂಶವೂ ಈ ವಲಯದ ಹಿರಿಮೆ ಹೆಚ್ಚಿಸಿದೆ. ಇದೀಗ ರಿಯಲ್ ಎಸ್ಟೇಟ್ ಕ್ಷೇತ್ರವನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವ ಚರ್ಚೆ ಶುರುವಾಗಿದೆ.
ಸದ್ಯ ಆಯ್ದ ಸೇವೆಗಷ್ಟೇ ಜಿಎಸ್‌ಟಿ: ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಕಾರ್ಯವನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದೆ. ಸ್ವಂತ ಭೂಮಿ ಇರಲಿ, ಜಂಟಿ ಸಹಭಾಗಿತ್ವದ ಭೂಮಿಯಿರಲಿ ಮಾರಾಟ ಉದ್ದೇಶಕ್ಕೆ ಫ್ಲ್ಯಾಟ್, ವಾಣಿಜ್ಯ ಕಟ್ಟಡ ನಿರ್ಮಿಸಿ ಮಾರಾಟ ಮಾಡಿದರೆ, ಕಟ್ಟಡ ನಿಮಾಣ ಕಾಮಗಾರಿ ಒಡಂಬಡಿಕೆ (ವರ್ಕ್ ಕಾಂಟ್ರಾಕ್ಟ್) ಜಿಎಸ್‌ಟಿ ತೆರಿಗೆ ಭರಿಸಬೇಕಾಗುತ್ತದೆ.
ಸದ್ಯ ಮಾರ್ಗಸೂಚಿ ದರದ ಅನ್ವಯ ಶೇ.7ರಷ್ಟು ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಅದು ರಾಜ್ಯ ಸರ್ಕಾರದ ಬೊಕ್ಕಸ ಸೇರುತ್ತದೆ. ಒಂದೊಮ್ಮೆ ಜಿಎಸ್‌ಟಿ ಜಾರಿಯಾದರೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪ್ರಮಾಣ ಗಣನೀಯವಾಗಿ ಇಳಿಸಬೇಕು. ಜತೆಗೆ ಕಟ್ಟಡ ನಿರ್ಮಾಣ ಸಾಮಗ್ರಿ, ಇತರೆ ಗೃಹೋಪಯೋಗಿ ಉಪಕರಣಗಳಿಗೆ ನೀಡುವ ಇನ್‌ಪುಟ್ ಕ್ರೆಡಿಟ್ ನೀಡುವ ವ್ಯವಸ್ಥೆ ಮುಂದುವರಿಸಬೇಕು. ಈ ಕ್ರಮಗಳನ್ನು ಕೈಗೊಳ್ಳದೇ ಏಕಾಏಕಿ ಜಾರಿಗೊಳಿಸಿದರೆ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ. ಗ್ರಾಹಕರಿಗೂ ತೀವ್ರ ಹೊರೆಯಾಗಲಿದೆ ಎಂದು ಭಾರತೀಯ ರಿಯಲ್ ಎಸ್ಟೇಟ್ ಮತ್ತು ಡೆವಲಪರ್ ಸಂಘಗಳ ಒಕ್ಕೂಟದ (ಕ್ರೆಡಾಯ್)ಪ್ರಧಾನ ಕಾರ್ಯದರ್ಶಿ ಸುರೇಶ್ ಹರಿ “ಉದಯವಾಣಿ’ಗೆ ತಿಳಿಸಿದರು.
ದೇಶಾದ್ಯಂತ ಶೇ.10ರಷ್ಟು ವಹಿವಾಟು ಇಳಿಕೆ: ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೆರಾ) ಜಾರಿಯಾದ ನಂತರ ದೇಶಾದ್ಯಂತ ರಿಯಲ್ ಎಸ್ಟೇಟ್ ವ್ಯವಹಾರ ಶೇ.10ರಷ್ಟು ಇಳಿಕೆ ಕಂಡಿದೆ. ಜಿಎಸ್‌ಟಿ ಜಾರಿಯಾಗಿದ್ದರೂ ಹೆಚ್ಚಿನ ಪರಿಣಾಮ ಕಂಡುಬಂದಿಲ್ಲ. ಇತ್ತೀಚೆಗೆ ಉದ್ಯಮ ಚೇತರಿಕೆ ಕಾಣುತ್ತಿತ್ತು. ಇದೀಗ ಸಂಪೂರ್ಣ ಉದ್ಯಮವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಮುಂದಾಗಿರುವುದು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು.
ರಿಯಲ್ ಎಸ್ಟೇಟ್ ಉದ್ಯಮವನ್ನು ತೆರಿಗೆ ವ್ಯಾಪ್ತಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಸಮಗ್ರ ಚರ್ಚೆ ನಡೆಸಿ ಸಾಧಕ- ಬಾಧಕ ಅವಲೋಕಿಸಿ ಗ್ರಾಹಕರು, ಉದ್ಯಮದವರಿಗೂ ಹೊರೆಯಾಗದಂತೆ ದೇಶದ ಆರ್ಥಿಕ ಪ್ರಗತಿಗೆ ಸಹಕಾರಿಯಾಗುವಂತೆ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
-ಬಿ.ಟಿ.ಮನೋಹರ್, ರಾಜ್ಯ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ
– ಎಂ.ಕೀರ್ತಿಪ್ರಸಾದ್