Advertisement

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

12:01 AM Oct 30, 2020 | mahesh |

ಹೊಸದಿಲ್ಲಿ: ಭಾರತವು 2024ರ ವೇಳೆಗೆ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯಾಗಲಿದೆ… -ಇದು ಪ್ರಧಾನಿ ಮೋದಿ ಅವರ ಖಚಿತ ವಿಶ್ವಾಸ. ಆಂಗ್ಲ ದಿನಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಕೊರೊನಾ ಪೂರ್ವ, ಪ್ರಸ್ತುತ ಮತ್ತು ಕೊರೊನೋತ್ತರ ವಿಚಾರಗಳ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Advertisement

2024ರ ವೇಳೆಗೆ ಭಾರತ 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ನೇತ್ಯಾತ್ಮಕ ಚಿಂತನೆ ಇರಿಸಿಕೊಂಡಿರುವವರಿಗೆ ಮಾತ್ರ ಇಂಥ ಅನುಮಾನಗಳು ಬರುತ್ತವೆ ಎಂದರು. ಆದರೆ ನಮ್ಮ ಸರಕಾರವು ಹಾಕಿಕೊಂಡಿರುವ ಗುರಿ ಗಳನ್ನು ಸಾಧಿಸುವಲ್ಲಿ ಯಶಸ್ಸು ಕಂಡಿದೆ. ಮುಂದಿನ ವರ್ಷದಿಂದಲೇ ನಾವು ತ್ವರಿತಗತಿಯಲ್ಲಿ ಕೆಲಸ ಮಾಡಿ ನಮ್ಮ ಗುರಿ ಸಾಧಿಸುತ್ತೇವೆ ಎಂದಿದ್ದಾರೆ.

ಆರೋಗ್ಯ ಕಾರ್ಯಕರ್ತರ ಕೆಲಸವನ್ನು ಉದಾಹರಣೆಯಾಗಿ ನೀಡಿದ ಅವರು, ಕೊರೊನಾ ಸೇನಾನಿಗಳು ದಿನಕ್ಕೆ 18-20 ತಾಸು ಕೆಲಸ ಮಾಡುತ್ತಿದ್ದಾರೆ. ಇವರನ್ನೇ ಮಾದರಿಯಾಗಿ ಇರಿಸಿಕೊಂಡು ನಾವೂ ಕೆಲಸ ಮಾಡಿದರೆ ಗುರಿ ಸಾಧಿಸುವುದು ಕಷ್ಟವೇನಲ್ಲ ಎಂದರು.

ಭಾರತೀಯರು ಸ್ವ-ಕೇಂದ್ರಿತರಲ್ಲ
ಆತ್ಮನಿರ್ಭರ ಭಾರತ ಯೋಜನೆ ಬಗ್ಗೆ ಮಾತನಾಡಿದ ಮೋದಿ, ಇದು ನಾವು ಸ್ವಾವಲಂಬಿಗಳಾಗಬೇಕು ಎಂದು ರೂಪಿಸಿದ ಯೋಜನೆ. ಇದಕ್ಕೆ ಉದಾಹರಣೆ ಔಷಧ ಕ್ಷೇತ್ರ. ಹೆಚ್ಚಿನ ಹಣ ವೆಚ್ಚ ಮಾಡದೆ ಕೊರೊನಾಕ್ಕೆ ಔಷಧ ಉತ್ಪಾದನೆ ಮತ್ತು ಲಸಿಕೆಯ ಸಂಶೋಧನೆ ನಡೆಸುತ್ತಿದ್ದೇವೆ. ನಮ್ಮ ವೈದ್ಯರೂ ಜಗತ್ತಿನ ಉಳಿದ ದೇಶಗಳಿಗೆ ಅರಿವು ಮೂಡಿಸುತ್ತಿದ್ದಾರೆ. ಇದು ನಿಜವಾದ ಆತ್ಮ ನಿರ್ಭರ ಕಲ್ಪನೆ ಎಂದರು.

ಜನ ಚೇತನ, ಜನ ಭಾಗೀದಾರಿ
ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಅದನ್ನು ಕೊರೊನಾ ತೋರಿಸಿಕೊಟ್ಟಿದೆ. ಜನತಾ ಕರ್ಫ್ಯೂ, ದೀಪ ಹಚ್ಚುವುದು ಇದಕ್ಕೆ ಉದಾಹರಣೆಗಳು. ಈ ಮೂಲಕ ಕೊರೊನಾ ನಿಯಂತ್ರಣದ ವಿಚಾರದಲ್ಲಿ ಇಡೀ ದೇಶದ ಜನತೆ ಒಟ್ಟಾಗಿ ನಿಂತರು. ಅತ್ಯಂತ ಕಡಿಮೆ ಅವಧಿಯಲ್ಲೇ ಜನರಲ್ಲಿ ಅರಿವು ಮೂಡಿಸುವುದಕ್ಕೂ ಸಾಧ್ಯವಾಯಿತು ಎಂದಿದ್ದಾರೆ.

Advertisement

ಲಾಕ್‌ಡೌನ್‌ ಸಮಯೋಚಿತ
ದೇಶಾದ್ಯಂತ ಸೋಂಕು ಹರಡುವ ಮುನ್ನವೇ ಲಾಕ್‌ಡೌನ್‌ ಘೋಷಿಸಿದೆವು. ಆಗ ನಮ್ಮಲ್ಲಿ ನೂರರ ಲೆಕ್ಕದಲ್ಲಿ ಸೋಂಕು ಪ್ರಕರಣಗಳಿದ್ದವು. ಆದರೆ ಬೇರೆ ದೇಶಗಳು ಪರಿಸ್ಥಿತಿ ಕೈಮೀರಿದಾಗ ಲಾಕ್‌ಡೌನ್‌ ಘೋಷಿಸಿದವು. ಹಾಗಾಗಿ ಅದು ಪರಿಣಾಮಕಾರಿಯಾಗಲಿಲ್ಲ ಎಂದು ಮೋದಿ ಹೇಳಿದರು.

ಅನ್‌ಲಾಕ್‌ ಜಾರಿ ಮಾಡಿದ್ದು ಕೂಡ ಸಮರ್ಪಕ ವಾಗಿದೆ. ಹಂತ ಹಂತವಾಗಿ ಅನ್‌ಲಾಕ್‌ ಮಾಡಿದ್ದರಿಂದಾಗಿ ಆರ್ಥಿಕತೆಯೂ ಹಳಿಗೆ ಬರುತ್ತಿದೆ. ಇದಕ್ಕೆ ಆಗಸ್ಟ್‌ ಮತ್ತು ಸೆಪ್ಟಂಬರ್‌ ತಿಂಗಳ ಪ್ರಗತಿ ಸಾಕ್ಷಿ. ಲಾಕ್‌ಡೌನ್‌ ವೇಳೆ ದೇಶ ಹಲವು ಪಾಠಗಳನ್ನು ಕಲಿತಿದೆ. ಜನ ಸ್ವಯಂಪ್ರೇರಿತರಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮಾಡಿದರು. ಕೇಂದ್ರ – ರಾಜ್ಯ ಸರಕಾರಗಳೂ ಈ ವಿಷಯದಲ್ಲಿ ಜತೆಗೂಡಿ ಕೆಲಸ ಮಾಡುತ್ತಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next