ನವದೆಹಲಿ: ದೆಹಲಿ ವಿಧಾನಸಭೆಯ ಇಪ್ಪತ್ತು ಆಪ್ ಶಾಸಕರ ಅನರ್ಹತೆಗೆ ರಾಷ್ಟ್ರಪತಿ ಕೋವಿಂದ್ ಅವರು ಒಪ್ಪಿಗೆ ನೀಡುತ್ತಿದ್ದಂತೆ, ರಾಷ್ಟ್ರ ರಾಜಧಾನಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು ಶುರುವಾಗಿವೆ. ಮೂರು ಪಕ್ಷಗಳೂ ಉಪಚುನಾವಣೆಗೆ ಸಿದ್ಧವಾಗುತ್ತಿವೆ.
ಆಮ್ ಆದ್ಮಿ ಪಕ್ಷ ಮಾತ್ರ ಸೋಮವಾರದ ದೆಹಲಿ ಹೈಕೋರ್ಟ್ ತೀರ್ಮಾನ ನೋಡಿಕೊಂಡು ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದೆ. ಅಲ್ಲದೆ, ಹೈಕೋರ್ಟ್‌ನಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದೂ ಅನರ್ಹಗೊಂಡ ಶಾಸಕ ಮದನ್‌ಲಾಲ್ ಹೇಳಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ಅಜಯ್ ಮಾಕೇನ್, ನಾವು ಉಪಚುನಾವಣೆಗೆ ಸಿದ್ಧರಿದ್ದೇವೆ ಎಂದಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಆಪ್ ಮತ್ತು ಬಿಜೆಪಿ ಕೈಜೋಡಿಸಿವೆ. ಈ 20 ಶಾಸಕರನ್ನು ರಾಜ್ಯಸಭೆ ಚುನಾವಣೆಗೂ ಮುನ್ನವೇ ಅನರ್ಹ ಮಾಡಬಹುದಿತ್ತು. ಆದರೆ ರಾಜ್ಯಸಭೆಯಲ್ಲಿ ಆಪ್‌ಗೆ ಸ್ಥಾನ ಸಿಗುವಂತೆ ಮಾಡಿ ಮುಂದೆ ಲಾಭ ಮಾಡಿಕೊಳ್ಳಲು ಬಿಜೆಪಿ ಈ ರೀತಿ ನಾಟಕವಾಡಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕೂಡ ಪ್ರತಿಕ್ರಿಯಿಸಿದ್ದು, ಲಾಭ ಮಾಡಿಕೊಂಡ ಕಾರಣದಿಂದಲೇ ಶಾಸಕರು ಅನರ್ಹತೆ ಶಿಕ್ಷೆ ಅನುಭವಿಸಿದ್ದಾರೆ ಎಂದಿದೆ. ರಾಷ್ಟ್ರಪತಿಯ ನಿರ್ಧಾರವು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸುವಂಥದ್ದಾಗಿದ್ದು, ಅನರ್ಹರಾಗಿರುವ ಆಪ್ ಶಾಸಕರು ತಾವು ಪಡೆದಿರುವ ಎಲ್ಲಾ ರೀತಿಯ ಆರ್ಥಿಕ ಸೌಲಭ್ಯಗಳನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದೆ.
20 ಶಾಸಕರ ಅನರ್ಹತೆ ಬೇರೆ ರಾಜ್ಯಗಳಲ್ಲಾದರೆ?
ಲಾಭದಾಯಕ ಹುದ್ದೆಗೆ ಸಂಬಂಧಿಸಿ ಆಮ್ ಆದ್ಮಿ ಪಕ್ಷ ದ 20 ಶಾಸಕರ ಅನರ್ಹತೆ ವಿಚಾರವೇ ದೇಶಾದ್ಯಂತ ಚರ್ಚೆಯಾಗುತ್ತಿದೆ. ಅದೃಷ್ಟವಶಾತ್ ದೆಹಲಿಯಲ್ಲಿ ಆಪ್ 70ರಲ್ಲಿ 67 ಸ್ಥಾನಗಳನ್ನು ಗೆದ್ದಿದ್ದರಿಂದ ಸರ್ಕಾರ ಉಳಿಸಿಕೊಳ್ಳುವಲ್ಲಿ ಬಚಾವ್ ಆಗಿದೆ. ಆದರೆ ದೇಶದ ಇತರೆ ರಾಜ್ಯಗಳಲ್ಲಿ ಏನಾದರೂ ಇದೇ ರೀತಿ 20 ಶಾಸಕರನ್ನು ಒಮ್ಮೆಗೇ ಅನರ್ಹ ಮಾಡಿದ್ದರೆ ಏನಾಗುತ್ತಿತ್ತು ಗೊತ್ತೇ? ಕರ್ನಾಟಕವೂ ಸೇರಿ 13 ರಾಜ್ಯಗ ಳಲ್ಲಿ ಸರ್ಕಾರಗಳು ಪತನವಾಗುತ್ತಿದ್ದವು.