ಮುಂಬಯಿ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ವಿರುದ್ಧ ಪ್ರಚಾರ ನಡೆಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಅವರು ಈಗ ಮುಂಬರುವ ವಿಧಾನಸಭೆ ಚುನಾವಣೆಗೆ ಸನ್ನದ್ಧರಾಗುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಎಂಎನ್‌ಎಸ್ ಸ್ಪರ್ಧಿಸುತ್ತಿಲ್ಲ. ಆದಾಗ್ಯೂ, ಮೊದಲ ನಾಲ್ಕು ಹಂತಗಳ ಚುನಾವಣೆಯಲ್ಲಿ ರಾಜ್ ಠಾಕ್ರೆ ಅವರು ರಾಜ್ಯದಲ್ಲಿ ಅನೇಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ದಾಳಿ ನಡೆಸುತ್ತ ಬಿಜೆಪಿಗೆ ವಿರುದ್ಧವಾಗಿ ಮತ ಚಲಾಯಿಸಲು ಜನರಲ್ಲಿ ಮನವಿ ಮಾಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್-ಎನ್‌ಸಿಪಿ ಗೆಲುವಿಗೆ ಸಹಾಯ ಮಾಡುವಂತೆ ಠಾಕ್ರೆ ಅವರು ತಮ್ಮ ಕಾರ್ಯಕರ್ತರಿಗೆ ಕರೆಯನ್ನು ನೀಡಿದ ಹಿನ್ನೆಲೆಯಲ್ಲಿ ಎಂಎನ್‌ಎಸ್ ಮತ್ತು ವಿಪಕ್ಷ ಕಾಂಗ್ರೆಸ್-ಎನ್‌ಸಿಪಿ ನಡುವಿನ ಅನೌಪಚಾರಿಕ ಒಪ್ಪಂದವು ಸ್ಪಷ್ಟವಾಗಿ ಕಾಣಲು ಸಿಕ್ಕಿತ್ತು.
ಲೋಕಸಭಾ ಚುನಾವಣೆಗಳು ಸಂಪನ್ನಗೊ ಳ್ಳುವುದರೊಂದಿಗೆ ಠಾಕ್ರೆ ಈಗ ಮುಂಬರುವ ವಿಧಾನಸಭೆ ಚುನಾವಣೆಯ ಕಡೆಗೆ ತಮ್ಮ ಗಮನ ಹರಿಸಿದ್ದಾರೆ. ಸೋಮವಾರ ಅವರು ಥಾಣೆಯಲ್ಲಿ ಚುನಾವಣೆಯ ಅನಂತರ ತಮ್ಮ ಪಕ್ಷದ ಕಾರ್ಯಕರ್ತರ ಮೊದಲ ಸಭೆಯನ್ನು ನಡೆಸಿದರು. ಲೋಕಸಭಾ ಚುನಾವಣೆಯ ಫಲಿತಾಂಶವನ್ನು ಲೆಕ್ಕಿಸದೆ ವಿಧಾನಸಭೆ ಚುನಾವಣೆಗೆ ತಯಾರಿ ಪ್ರಾರಂಭಿಸಿ ಎಂದು ಠಾಕ್ರೆ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಮತದಾರರನ್ನು ತಲುಪುವಂತೆ ಅವರು ತಮ್ಮ ಕಾರ್ಯಕರ್ತರನ್ನು ಕೇಳಿಕೊಂಡರು. ನೀವು ನಿಮ್ಮ ಅಹಂಕಾರವನ್ನು ಬದಿಗಿಟ್ಟು ಜನರ ಹೃದಯಗಳನ್ನು ಗೆಲ್ಲಬೇಕು. ಪಕ್ಷದ ಹೆಸರಿಗೆ ಹಾನಿಯನ್ನುಂಟು ಮಾಡುವ ಯಾವುದೇ ಕೆಲಸಗಳನ್ನು ಮಾಡಬೇಡಿ ಎಂದವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ರಾಜ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯು ಒಂದು ಉಳಿವಿನ ಯುದ್ಧವಾಗಿದೆ. 2006ರಲ್ಲಿ ರಚನೆಯಾದ ಎಂಎನ್‌ಎಸ್ ಪಕ್ಷವು ಪ್ರಸ್ತುತ ಅತ್ಯಂತ ಶೋಚನೀಯ ಮಟ್ಟಕ್ಕೆ ಕುಸಿದಿದೆ. 2009ರಲ್ಲಿ 13 ಶಾಸಕರನ್ನು ಹೊಂದಿದ್ದ ಪಕ್ಷವು 2014ರಲ್ಲಿ ಕೇವಲ ಒಂದು ಶಾಸಕನನ್ನು ಹೊಂದುವ ಮಟ್ಟಿಗೆ ಕುಸಿದಿತ್ತು. ಅಷ್ಟೇ ಅಲ್ಲದೆ, ಪಕ್ಷದ ಈ ಏಕೈಕ ಶಾಸಕ ಶರದ್ ಸೋನಾವಣೆ ಕೂಡ ಪಕ್ಷವನ್ನು ತೊರೆದು ಶಿವಸೇನೆಗೆ ಸೇರಿ¨ªಾರೆ. ಠಾಕ್ರೆ ಅವರು ತಮ್ಮ ಸಭೆಯಲ್ಲಿ ರಾಜ್ಯದ ಬರಗಾಲದ ಬಗ್ಗೆಯೂ ಚರ್ಚಿಸಿದರು.