ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡನೆಗೂ ಮುನ್ನ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಏತನ್ಮಧ್ಯೆ ಡಿಸೆಂಬರ್ 9ರಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡುವ ವೇಳೆ ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನಗಳಲ್ಲಿ ಅಲ್ಪಸಂಖ್ಯಾತ ಹಿಂದೂ, ಸಿಖ್, ಜೈನ, ಬೌದ್ಧ ಹಾಗೂ ಪಾರ್ಸಿಗಳ ಮೇಲೆ ಯಾವ ರೀತಿ ಹಿಂಸಾಚಾರ ನಡೆಸಲಾಯಿತು, ಅವರಿಗಾದ ಅನ್ಯಾಯ ಏನು ಎಂಬ ಬಗ್ಗೆ ಬಾಂಗ್ಲಾದೇಶದ ಭೋಲಾ ಘಟನೆಯನ್ನು ನೆನಪಿಸಿದ್ದರು.
ಏನಿದು ಭೋಲಾ ಘಟನೆ:
1975ರಲ್ಲಿ ಬಾಂಗ್ಲಾದೇಶದಲ್ಲಿ ಬಂಗಾಬಂಧು ಶೇಕ್ ಮುಜಿಬುರ್ ರೆಹಮಾನ್ ಅವರ ಹತ್ಯೆಯ ನಂತರ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಹಿಂಸಾಚಾರ ನಡೆಸಲು ಆರಂಭಿಸಿದ್ದರು. ಆ ಬಳಿಕ ಬಾಂಗ್ಲಾದಲ್ಲಿ ಸತತವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ವ್ಯವಸ್ಥಿತವಾಗಿ ಹಿಂಸಿಸಲಾಯಿತು ಎಂದರು.
ಆ ದ್ವೇಷದ ಕಾವು ಮುಂದುವರಿದ ಪರಿಣಾಮ ಬಾಂಗ್ಲಾದ ಭೋಲಾ ಗ್ರಾಮದಲ್ಲಿದ್ದ ಸುಮಾರು 200 ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಕಿರುಕುಳ ನೀಡಿದ್ದರು. ಭೋಲಾ ಅತ್ಯಾಚಾರ ಮತ್ತು ಹಿಂಸಾಚಾರ ಘಟನೆ ನಡೆದದ್ದು 2001ರಲ್ಲಿ ಎಂದು ಗೃಹ ಸಚಿವರು ಉಲ್ಲೇಖಿಸಿದ್ದರು.
ಅದು ಬಾಂಗ್ಲಾದೇಶದಲ್ಲಿ ಖಾಲೀದಾ ಜಿಯಾ ನೇತೃತ್ವದ ಬಾಂಗ್ಲಾದೇಶ್ ನ್ಯಾಶನಲ್ ಪಕ್ಷ ಅಧಿಕಾರದ ಗದ್ದುಗೆ ಏರಿದ ನಂತರ ಹಿಂದೂಗಳ ಮೇಲೆ ಹಿಂಸಾಚಾರ ನಡೆಸಿದ್ದರು. ಬಿಎನ್ ಪಿ ಹಾಗೂ ಜಮಾತ್ ಎ ಇಸ್ಲಾಮಿ ಕಾರ್ಯಕರ್ತರು ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಅಟ್ಟಾಡಿಸಿ ಹೊಡೆದಿದ್ದರು ಎಂದು ವಿವರಿಸಿದ್ದರು.
ಬಾಂಗ್ಲಾದ ಬಾಗೇರ್ಹಾಟ್, ಬಾರಿಸಾಲ್, ಬೋಗ್ರಾ, ಬ್ರಾಹ್ಮಣ್ ಬಾರಿಯಾ, ಚಿಟ್ ಗಾಂವ್, ಫಾಣಿ, ಘಾಜಿಪುರ್, ಜೆಸೋರ್, ಖುಲ್ನಾ, ಮುನ್ಶಿಗಂಜ್, ಭೋಲಾ, ನಾರಾಯಣ್ ಗಂಜ್ ಮತ್ತು ಸಿರಾಗಂಜ್ ಜಿಲ್ಲೆಗಳಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು ಎಂದರು.
2001ರ ಅಕ್ಟೋಬರ್ ನಲ್ಲಿ ಭೋಲಾ ಜಿಲ್ಲೆಯ ಲಾಲ್ ಮೋಹನ್ ಪ್ರಾಂತ್ಯದಲ್ಲಿ ಮುಸ್ಲಿಂ ಗುಂಪು ಹಿಂದುಗಳ ಮನೆ ಮೇಲೆ ದಾಳಿ ನಡೆಸಿ ವಸ್ತುಗಳನ್ನೆಲ್ಲಾ ಲೂಟಿ ಮಾಡಿದ್ದರು. ಮರಗಳನ್ನು ಕತ್ತರಿಸಿ ಹಾಕಿದ್ದರು. ಬೆಳೆಗಳನ್ನು ನಾಶ ಮಾಡಿದ್ದರು. ಭೋಲಾದ ಚಾರ್ ಫಾಸ್ಸನ್ ಎಂಬಲ್ಲಿ ಬಿಎಸ್ ಪಿ ಬೆಂಬಲಿಗರು 200 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು. ಇದರಲ್ಲಿ 8 ವರ್ಷದ ಬಾಲಕಿಯಿಂದ ಹಿಡಿದು 70 ವರ್ಷದ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ತಿಳಿಸಿದರು.