Advertisement

ಪಾಲಿಕೆ ಆಯುಕ್ತರ ಕಚೇರಿಗೆ ಮತ್ತೆ ಬೀಗ

12:27 PM Sep 09, 2017 | Team Udayavani |

ಹುಬ್ಬಳ್ಳಿ: ಶಾಲೆಯೊಂದರ ಜಾಗ ಅತಿಕ್ರಮಿಸಿ ನಿರ್ಮಿಸಿದ ಕಟ್ಟಡ ತೆ‌ರವಿಗೆ ಒತ್ತಾಯಿಸಿ ಪಾಲಿಕೆ ಬಿಜೆಪಿ ಸದಸ್ಯರು ಎರಡನೇ ದಿನವಾದ ಶುಕ್ರವಾರ ಸಹಿತ ಆಯುಕ್ತರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮುಂದುವರಿಸಿದರು. ಪಾಲಿಕೆ ಆಯುಕ್ತರ ಕಚೇರಿ ಹಾಗೂ ಕಾನೂನು ಸಲಹಾ ವಿಭಾಗಕ್ಕೆ ಮುತ್ತಿಗೆ ಹಾಕಿ, ಸಿಬ್ಬಂದಿ ಹೊರಗೆ ಕಳುಹಿಸಿ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಜಂಟಿ ಆಯುಕ್ತರು ಸ್ಥಳಕ್ಕೆ ಆಗಮಿಸಿ ಶನಿವಾರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರವೇ ಪ್ರತಿಭಟನೆ ಹಿಂಪಡೆದುಕೊಂಡರು. 57ನೇ ವಾರ್ಡ್‌ನ ವೀರಾಪುರ ಓಣಿಯ ಸರಕಾರಿ ಶಾಲೆ ಜಾಗ ಹಾಗೂ ರಸ್ತೆ ಒತ್ತುವರಿ ಮಾಡಿರ ತೆರವಿಗೆ ಒತ್ತಾಯಿಸಿ ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಬುಧವಾರದಿಂದಲೇ ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಶಾಸಕ ಅರವಿಂದ ಬೆಲ್ಲದ ಸಹ ಇದಕ್ಕೆ  ಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಅವರು ಶುಕ್ರವಾರ ಬೆಳಗಿನ ಜಾವ 6:00 ಗಂಟೆಗೆ ಅತಿಕ್ರಮಿತ ಕಟ್ಟಡ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆದುಕೊಂಡಿದ್ದರು. ಆದರೆ, ಶುಕ್ರವಾರ ಪಾಲಿಕೆ ಆಯುಕ್ತರು ಪೊಲೀಸ್‌ ರಕ್ಷಣೆ ದೊರೆಯದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ಮಾಡಿರಲಿಲ್ಲ.

ಇದರಿಂದ ಆಕ್ರೋಶಗೊಂಡ ಪಾಲಿಕೆ ಬಿಜೆಪಿ ಸದಸ್ಯರು ಶುಕ್ರವಾರ ಮಧ್ಯಾಹ್ನ ಪಾಲಿಕೆ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಅತಿಕ್ರಮಣ ಕಟ್ಟಡ ತೆರವುಗೊಳಿಸಲೇಬೇಕು. ಇಲ್ಲ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು. ಆಯುಕ್ತರು ಕಾಂಗ್ರೆಸ್‌ನ ಜನಪ್ರತಿನಿಧಿಗಳ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ.

ಕಾನೂನಾತ್ಮಕ ಅಡಚಣೆಯಿಂದಾಗಿ ಕಟ್ಟಡ ತೆರವುಗೊಳಿಸಲು ಬರುವುದಿಲ್ಲವೆಂದು ಕಾನೂನು ಸಲಹೆಗಾರ ಕಚೇರಿ ಸಿಬ್ಬಂದಿ ಮೇಲೆ ಒತ್ತಡ ಹೇರಿ ಲಿಖೀತ ಪತ್ರ ಬರೆಸಿಕೊಳ್ಳುತ್ತಿದ್ದಾರೆಂದು ಪ್ರತಿಭಟನೆ ನಡೆಸಿದರು. ಇದೇ ವೇಳೆ ಕಾನೂನು ಸಲಹಾ ಅಧಿಕಾರಿ ಮತ್ತು ವಿಭಾಗ ಹಾಗೂ ಸಾಮಾನ್ಯ ಆಡಳಿತ ವಿಭಾಗಕ್ಕೆ ಮುತ್ತಿಗೆ ಹಾಕಿ, ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ಕಳುಹಿಸಿ ಬಾಗಿಲು ಹಾಕಿದರು.

Advertisement

ನಂತರ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಸಿಬ್ಬಂದಿಯನ್ನು ಕಚೇರಿಯಿಂದ ಹೊರಗೆ ಕಳುಹಿಸಿ ಬೀಗ ಜಡಿದು ಪೊಲೀಸರ ಕೈಗೆ ಕೀಲಿ ಹಸ್ತಾಂತರಿಸಿದರು. ಆಯುಕ್ತರು ಅಕ್ರಮ ಕಟ್ಟಡ ತೆರವುಗೊಳಿಸುವುದಾಗಿ ಲಿಖೀತ ಭರವಸೆಗೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದರು. 

ಆಯುಕ್ತರು ಜಿಲ್ಲಾಧಿಕಾರಿ ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ತೆರಳಿದ್ದರು. ಹೀಗಾಗಿ ಜಂಟಿ ಆಯುಕ್ತ ಅಜೀಜ ದೇಸಾಯಿ ಸ್ಥಳಕ್ಕೆ ಆಗಮಿಸಿ, ಅಕ್ರಮ ಕಟ್ಟಡ ತೆರವುಗೊಳಿಸಲು ಪೊಲೀಸ್‌ ರಕ್ಷಣೆ ಇಲ್ಲದ್ದರಿಂದ ಮುಂದೂಡಲಾಗಿದೆ. ಶನಿವಾರ ಬೆಳಗ್ಗೆ ಪೊಲೀಸ್‌ ರಕ್ಷಣೆಯೊಂದಿಗೆ ಕಟ್ಟಡ ತೆರವುಗೊಳಿಸಲಾಗುವುದು. 

ಅದರಲ್ಲಿ ಯಾವುದೇ ಮುಲಾಜಿಲ್ಲ ಎಂದು ಭರವಸೆ ನೀಡಿದರು. ಸ್ಥಳದಲ್ಲಿದ್ದ ಎಸಿಪಿ ಎನ್‌.ಬಿ. ಸಕ್ರಿ ಕೂಡ ತೆರವು ಕಾರ್ಯಾಚರಣೆಗೆ ಪೊಲೀಸ್‌ ರಕ್ಷಣೆ ನೀಡಲಾಗುವುದು ಎಂದರು. ನಂತರ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆದರು. ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ, ಸಭಾನಾಯಕ ಮಲ್ಲಿಕಾರ್ಜುನ ಹೊರಕೇರಿ, ಮಾಜಿ ಮಹಾಪೌರರಾದ ಶಿವು ಹಿರೇಮಠ, ಪೂರ್ಣಾ ಪಾಟೀಲ, ಮಂಜುಳಾ ಅಕ್ಕೂರ,

-ಸದಸ್ಯರಾದ ಸುಧೀರ ಸರಾಫ, ಶಿವಾನಂದ ಮುತ್ತಣ್ಣವರ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಶಿವಪ್ಪ ಬಡವನ್ನವರ, ಉಮೇಶಗೌಡ ಕೌಜಗೇರಿ, ಮಹೇಶ ಬುರ್ಲಿ, ಲಕ್ಷಣ ಗಂಡಗಾಳೇಕರ, ಬೀರಪ್ಪ ಖಂಡೇಕರ, ಹೊನ್ನವ್ವ ಅರಕೇರಿ, ಸ್ಮಿತಾ ಜಾಧವ, ಲೀನಾ ಮಿಸ್ಕಿನ, ಶಾಂತಾ ಚನ್ನೋಜಿ, ಮೇನಕಾ ಹುರಳಿ, ಮುಖಂಡರಾದ ಜಯತೀರ್ಥ ಕಟ್ಟಿ, ಉಮೇಶ ದುಶಿ ಮೊದಲಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next