Advertisement

ಎಬಿಡಿ, ಮ್ಯಾಕ್ಸಿ ಬ್ಯಾಟಿಂಗ್‌ ಮ್ಯಾಜಿಕ್‌; ಆರ್‌ಸಿಬಿ ಹ್ಯಾಟ್ರಿಕ್‌

10:04 PM Apr 18, 2021 | Team Udayavani |

ಚೆನ್ನೈ: ರಾಯಲ್‌ ಚಾಲೆಂಜರ್ ಬೆಂಗಳೂರು ತನ್ನ “ರಾಯಲ್‌ ಗೇಮ್‌’ ಮುಂದು ವರಿಸಿ ಹ್ಯಾಟ್ರಿಕ್‌ ಸಂಭ್ರಮವನ್ನಾಚರಿಸಿದೆ. ರವಿ ವಾರದ ಬಿಗ್‌ ಸ್ಕೋರ್‌ ಮ್ಯಾಚ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು 38 ರನ್ನುಗಳಿಂದ ಮಣಿಸಿ ಗೆಲುವಿನ ನಂಟನ್ನು ಗಟ್ಟಿಗೊಳಿಸಿದೆ.

Advertisement

ಸಾಮಾನ್ಯವಾಗಿ ಬೌಲರ್‌ಗಳಿಗೆ ನೆರವಾಗುತ್ತಿದ್ದ ಚೆನ್ನೈ ಟ್ರ್ಯಾಕ್‌ ಈ ಪಂದ್ಯದ ವೇಳೆ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡಿತು. ಟಾಸ್‌ ಗೆದ್ದ ಕೊಹ್ಲಿ ಮೊದಲೇ ನಿರ್ಧರಿಸಿದಂತೆ ಬ್ಯಾಟಿಂಗ್‌ ಆಯ್ದುಕೊಂಡರು. ಆರ್‌ಸಿಬಿ 4ಕ್ಕೆ 204 ರನ್‌ ಪೇರಿಸಿ ಸವಾಲೊಡ್ಡಿತು. ಕೆಕೆಆರ್‌ 8 ವಿಕೆಟಿಗೆ 166 ರನ್‌ ಗಳಿಸಿ ಸತತ ಎರಡನೇ ಸೋಲನುಭವಿಸಿತು.

ಕೆಕೆಆರ್‌ ಜವಾಬು ಸಾಮಾನ್ಯ ಮಟ್ಟದಲ್ಲಿತ್ತು. ಯಾರಿಂದಲೂ ಕ್ರೀಸ್‌ ಆಕ್ರಮಿಸಿಕೊಳ್ಳಲು ಸಾಧ್ಯ ವಾಗಲಿಲ್ಲ, ಅರ್ಧ ಶತಕ ಕೂಡ ಬರಲಿಲ್ಲ. ಅಗ್ರ ಕ್ರಮಾಂಕದಲ್ಲಿ ರಾಣಾ, ಗಿಲ್‌, ತ್ರಿಪಾಠಿ, ಮಾರ್ಗನ್‌ ಅವರಿಂದ ದೊಡ್ಡ ಜತೆಯಾಟ ದಾಖಲಾಗದಿ ದ್ದುದು ಹಿನ್ನಡೆಯಾಗಿ ಪರಿಣಮಿಸಿತು. ಎರಡು ವರ್ಷಗಳ ಹಿಂದೆ ಇದೇ ಆರ್‌ಸಿಬಿಯನ್ನು ವಿಸ್ಫೋಟಕ ಬ್ಯಾಟಿಂಗ್‌ ಮೂಲಕ ಬೆಚ್ಚಿಬೀಳಿಸಿದ ಆ್ಯಂಡ್ರೆ ರಸೆಲ್‌ ಕ್ರೀಸ್‌ನಲ್ಲಿದ್ದಷ್ಟೂ ಹೊತ್ತು ಕೆಕೆಆರ್‌ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಈ ಬಾರಿ ಕೆರಿಬಿಯನ್‌ ಕ್ರಿಕೆಟಿಗನ ಮ್ಯಾಜಿಕ್‌ ನಡೆಯಲಿಲ್ಲ. ವೇಗಿ ಜಾಮೀಸನ್‌ ದುಬಾರಿಯಾದರೂ ಪಟೇಲ್‌, ಸಿರಾಜ್‌, ಸುಂದರ್‌ ಉತ್ತಮ ನಿಯಂತ್ರಣ ಸಾಧಿಸಿ ತಂಡಕ್ಕೆ ಮೇಲುಗೈ ಒದಗಿಸಿದರು.

ಮ್ಯಾಕ್ಸಿ, ಎಬಿಡಿ ಫಿಫ್ಟಿ
ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಮ್ಯಾಕ್ಸ್‌ವೆಲ್‌ ಮತ್ತು ಎಬಿ ಡಿ ವಿಲಿಯರ್ ಅವರ “ಮುಕ್ಕಾಲು ಶತಕ’ ಸಾಹಸದಿಂದ ಆರ್‌ಸಿಬಿ ಸ್ಕೋರ್‌ ಒಂದೇ ಸಮನೆ ಏರತೊಡಗಿತು. ಪ್ರಸಕ್ತ ಐಪಿಎಲ್‌ನಲ್ಲಿ ಚೆನ್ನೈ ಅಂಗಳದಲ್ಲಿ ಇನ್ನೂರರ ಗಡಿ ದಾಟಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

Advertisement

ಮ್ಯಾಕ್ಸ್‌ವೆಲ್‌ 49 ಎಸೆತಗಳಿಂದ 78 ರನ್‌ ಬಾರಿಸಿ ದರು. ಎಬಿಡಿ ಅವರ ಅಜೇಯ 76 ರನ್‌ ಕೇವಲ 34 ಎಸೆತಗಳಿಂದ ದಾಖಲಾಯಿತು. ಇಬ್ಬರೂ 3 ಸಿಕ್ಸರ್‌, 9 ಫೋರ್‌ ಬಾರಿಸಿದ್ದು ಕಾಕತಾಳೀಯ!

ಇದು ಮ್ಯಾಕ್ಸ್‌ವೆಲ್‌ ಅವರ ಸತತ 2ನೇ ಅರ್ಧ ಶತಕ. ಅವರು ಹೈದರಾಬಾದ್‌ ವಿರುದ್ಧ 59 ರನ್‌ ಬಾರಿಸಿದ್ದರು. ಮುಂಬೈ ಎದುರಿನ ಆರಂಭಿಕ ಪಂದ್ಯದಲ್ಲಿ 39 ರನ್‌ ಹೊಡೆದಿದ್ದರು. ಈ 3 ಇನ್ನಿಂಗ್ಸ್‌ಗಳಿಂದ ಟೀಕಾಕಾರರಿಗೆ ಬ್ಯಾಟಿನಿಂದಲೇ ಉತ್ತರ ನೀಡಿದರು.
ಮ್ಯಾಕ್ಸ್‌ವೆಲ್‌ಗಿಂತ ಡಿ ವಿಲಿಯರ್ ಬ್ಯಾಟಿಂಗ್‌ ಹೆಚ್ಚು ವೇಗದಿಂದ ಕೂಡಿತ್ತು. 223.53ರ ಸ್ಟ್ರೈಕ್‌ರೇಟ್‌ ಹೊಂದಿತ್ತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ಎಬಿಡಿ ಸಿಡಿಸಿದ ಮೊದಲ ಫಿಫ್ಟಿ. ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ 53 ರನ್‌ ಒಟ್ಟುಗೂಡಿತು.

ಪವರ್‌ ಪ್ಲೇ ಬಳಿಕ ಪವರ್‌
ಆರ್‌ಸಿಬಿ ಬ್ಯಾಟಿಂಗ್‌ ರಂಗೇರಿಸಿಕೊಂಡದ್ದೇ ಪವರ್‌ ಪ್ಲೇ ಬಳಿಕ. ಅಲ್ಲಿಯ ತನಕ ಕೆಕೆಆರ್‌ ಉತ್ತಮ ನಿಯಂತ್ರಣ ಸಾಧಿಸಿತ್ತು. ನಾಯಕ ವಿರಾಟ್‌ ಕೊಹ್ಲಿ (5) ಮತ್ತು ರಜತ್‌ ಪಾಟೀದಾರ್‌ (1) ವಿಕೆಟ್‌ ಕಳೆದುಕೊಂಡಾಗ ಬೆಂಗಳೂರು ತಂಡದ ಸ್ಕೋರ್‌ ಕೇವಲ 9 ರನ್‌. ಇವರಿಬ್ಬರು ವರುಣ್‌ ಚಕ್ರವರ್ತಿ ಅವರ ಒಂದೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದರು. ಮೊದಲ 6 ಓವರ್‌ಗಳನ್ನು ಸ್ಪಿನ್ನರ್‌ಗಳಾದ ಹರ್ಭಜನ್‌, ಚಕ್ರವರ್ತಿ ಮತ್ತು ಶಕಿಬ್‌ ಅವರೇ ನಿಭಾಯಿಸಿದ್ದು ವಿಶೇಷವಾಗಿತ್ತು. ಆಗ ಈ ಟ್ರ್ಯಾಕ್‌ ಬ್ಯಾಟಿಂಗಿಗೆ ಸಹಕರಿಸುವ ಯಾವುದೇ ಸೂಚನೆ ನೀಡಿರಲಿಲ್ಲ. ಮೊದಲ 6 ಓವರ್‌ಗಳಲ್ಲಿ ಆರ್‌ಸಿಬಿ ಎರಡಕ್ಕೆ 45 ರನ್‌ ಗಳಿಸಿತ್ತು.

ಆದರೆ ಯಾವಾಗ ಪವರ್‌ ಪ್ಲೇ ಮುಗಿಯಿತೋ, ಅಲ್ಲಿಗೆ ಆರ್‌ಸಿಬಿ ಬ್ಯಾಟಿಂಗ್‌ ಬಿರುಸುಪಡೆದುಕೊಳ್ಳುತ್ತ ಹೋಯಿತು. ಮೊದಲು ಗ್ಲೆನ್‌ ಮ್ಯಾಕ್ಸ್‌ವೆಲ್‌, ಬಳಿಕ ಎಬಿ ಡಿ ವಿಲಿಯರ್ ಸೇರಿಕೊಂಡು ಕೆಕೆಆರ್‌ ಬೌಲರ್‌ಗಳನ್ನು ನಿರ್ದಯವಾಗಿ ದಂಡಿಸತೊಡಗಿದರು. ಕೊನೆಯ 3 ಓವರ್‌ಗಳಲ್ಲಿ 56 ರನ್‌ ಸಿಡಿಸುವ ಮೂಲಕ ಆರ್‌ಸಿಬಿ ಬ್ಯಾಟಿಂಗ್‌ ಪರಾಕ್ರಮ ಮೆರೆಯಿತು.

2ಕ್ಕೆ 9 ರನ್‌ ಮಾಡಿ ಸಂಕಟದಲ್ಲಿದ್ದ ತಂಡಕ್ಕೆ ಪಡಿಕ್ಕಲ್‌-ಮ್ಯಾಕ್ಸ್‌ವೆಲ್‌ ಸೇರಿ ಶಕ್ತಿ ತುಂಬಿದರು. 3ನೇ ವಿಕೆಟಿಗೆ 86 ರನ್‌ ಒಟ್ಟುಗೂಡಿತು. ಪಡಿಕ್ಕಲ್‌ ಗಳಿಕೆ 25 ರನ್‌. 28 ಎಸೆತಗಳ ಈ ಇನ್ನಿಂಗ್ಸ್‌ ಎರಡೇ ಬೌಂಡರಿಗಳನ್ನು ಒಳಗೊಂಡಿತ್ತು. ಈ ಜೋಡಿಯನ್ನು ಪ್ರಸಿದ್ಧ್ ಕೃಷ್ಣ ಬೇರ್ಪಡಿಸಿದರು.

ಮೂರೇ ವಿದೇಶಿ ಆಟಗಾರರು!
ಆರ್‌ಸಿಬಿ ಈ ಪಂದ್ಯದಲ್ಲಿ ಮೂರೇ ವಿದೇಶಿ ಆಟಗಾರರನ್ನು ನೆಚ್ಚಿಕೊಂಡಿತು. ಡೇನಿಯಲ್‌ ಕ್ರಿಸ್ಟಿಯನ್‌ ಅವರನ್ನು ಕೈಬಿಟ್ಟು ಈ ಜಾಗದಲ್ಲಿ ರಜತ್‌ ಪಾಟೀದಾರ್‌ಗೆ ಅವಕಾಶ ನೀಡಿತು. ಅಲ್ಲಿಗೆ ಸ್ವದೇಶಿ ಆಟಗಾರರ ಸಂಖ್ಯೆ ಎಂಟಕ್ಕೆ ಏರಿತು.

ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ ಬೆಂಗಳೂರು
ವಿರಾಟ್‌ ಕೊಹ್ಲಿ ಸಿ ತ್ರಿಪಾಠಿ ಬಿ ಚಕ್ರವರ್ತಿ 5
ದೇವದತ್ತ ಪಡಿಕ್ಕಲ್‌ ಸಿ ತ್ರಿಪಾಠಿ ಬಿ ಪ್ರಸಿದ್ಧ್ 25
ರಜತ್‌ ಪಾಟೀದಾರ್‌ ಬಿ ಚಕ್ರವರ್ತಿ 1
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಹರ್ಭಜನ್‌ ಬಿ ಕಮಿನ್ಸ್‌ 78
ಎಬಿ ಡಿ ವಿಲಿಯರ್ ಔಟಾಗದೆ 76
ಕೈಲ್‌ ಜಾಮಿಸನ್‌ ಔಟಾಗದೆ 11
ಇತರ 8
ಒಟ್ಟು (4 ವಿಕೆಟಿಗೆ) 204
ವಿಕೆಟ್‌ ಪತನ: 1-6, 2-9, 3-95, 4-148.
ಬೌಲಿಂಗ್‌; ಹರ್ಭಜನ್‌ ಸಿಂಗ್‌ 4-0-38-0
ವರುಣ್‌ ಚಕ್ರವರ್ತಿ 4-0-39-2
ಶಕಿಬ್‌ ಅಲ್‌ ಹಸನ್‌ 2-0-24-0
ಪ್ಯಾಟ್‌ ಕಮಿನ್ಸ್‌ 4-0-34-1
ಪ್ರಸಿದ್ಧ್ ಕೃಷ್ಣ 4-0-31-1
ಆ್ಯಂಡ್ರೆ ರೆಸಲ್‌ 2-0-38-0

ಕೋಲ್ಕತಾ ನೈಟ್‌ರೈಡರ್
ನಿತೀಶ್‌ ರಾಣಾ ಸಿ ಪಡಿಕ್ಕಲ್‌ ಬಿ ಚಹಲ್‌ 18
ಶುಭಮನ್‌ ಗಿಲ್‌ ಸಿ ಕ್ರಿಸ್ಟಿಯನ್‌ ಬಿ ಜಾಮೀಸನ್‌ 21
ರಾಹುಲ್‌ ತ್ರಿಪಾಠಿ ಸಿ ಸಿರಾಜ್‌ ಬಿ ಸುಂದರ್‌ 25
ಇಯಾನ್‌ ಮಾರ್ಗನ್‌ ಸಿ ಕೊಹ್ಲಿ ಬಿ ಹರ್ಷಲ್‌ 29
ದಿನೇಶ್‌ ಕಾರ್ತಿಕ್‌ ಎಲ್‌ಬಿಡಬ್ಲ್ಯು ಬಿ ಚಹಲ್‌ 2
ಶಕಿಬ್‌ ಅಲ್‌ ಹಸನ್‌ ಬಿ ಜಾಮೀಸನ್‌ 26
ಆ್ಯಂಡ್ರೆ ರಸೆಲ್‌ ಬಿ ಹರ್ಷಲ್‌ 31
ಪ್ಯಾಟ್‌ ಕಮಿನ್ಸ್‌ ಸಿ ಎಬಿಡಿ ಬಿ ಜಾಮೀಸನ್‌ 6
ಹರ್ಭಜನ್‌ ಸಿಂಗ್‌ ಔಟಾಗದೆ 2
ವರಣ್‌ ಚಕ್ರವರ್ತಿ ಔಟಾಗದೆ 2
ಇತರ 4
ಒಟ್ಟು (8 ವಿಕೆಟಿಗೆ) 166
ವಿಕೆಟ್‌ ಪತನ: 1-23, 2-57, 3-66, 4-74, 5-114, 6-155, 7-161, 8-162.
ಬೌಲಿಂಗ್‌; ಮೊಹಮ್ಮದ್‌ ಸಿರಾಜ್‌ 3-0-17-0
ಕೈಲ್‌ ಜಾಮೀಸನ್‌ 3-0-41-3
ಯಜುವೇಂದ್ರ ಚಹಲ್‌ 4-0-34-2
ವಾಷಿಂಗ್ಟನ್‌ ಸುಂದರ್‌ 4-0-33-1
ಗ್ಲೆನ್‌ ಮ್ಯಾಕ್ಸ್‌ವೆಲ್‌ 2-0-24-0
ಹರ್ಷಲ್‌ ಪಟೇಲ್‌ 4-0-17-2

ಪಂದ್ಯಶ್ರೇಷ್ಠ: ಎಬಿ ಡಿ ವಿಲಿಯರ್

Advertisement

Udayavani is now on Telegram. Click here to join our channel and stay updated with the latest news.

Next