Advertisement

ಸೇಡು ತೀರಿಸಿಕೊಳ್ಳುತ್ತಾ ಆರ್‌ಸಿಬಿ? ಪಿಚ್‌ ರಿಪೋರ್ಟ್‌ ಯಾರಿಗೆ ಫೇವರ್‌?

06:49 PM Sep 21, 2020 | Karthik A |

ಮಣಿಪಾಲ: ಈ ಬಾರಿಯ ಡ್ರೀಮ್‌ 11 ಐಪಿಎಲ್‌ ಟೂರ್ನಿಯ ಹೈ ವೋಲ್ಟೇಜ್‌ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಐಪಿಎಲ್‌ 13ನೇ ಋತುವಿನ ಮೂರನೇ ಪಂದ್ಯ ಇಂದು ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ನಡುವೆ ದುಬೈನಲ್ಲಿ ನಡೆಯಲಿದೆ.

Advertisement

ಹಾಗೆ ನೋಡಿದರೆ ಈ ಪಂದ್ಯ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆರ್‌ಸಿಬಿಯ ನಾಯಕ ವಿರಾಟ್‌ ಕೊಹ್ಲಿಗೆ ಸನ್‌ರೈಸರ್ಸ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ ವಿರುದ್ಧ 2016ರ ಫೈನಲ್‌ ಸೋಲಿನ ಪ್ರತೀಕಾರ ತೀರಿಸಿಕೊಳ್ಳಲು ಅವಕಾಶವಿದೆ. ಆ ಪಂದ್ಯದಲ್ಲಿ ಆರ್‌ಸಿಬಿಯನ್ನು 8 ರನ್‌ಗಳಿಂದ ಮಣಿಸುವ ಮೂಲಕ ಎರಡನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳಲು ಸನ್‌ರೈಸರ್ಸ್‌ ಯಶಸ್ವಿಯಾಗಿತ್ತು. ಕಳೆದ ಸೀಸನ್‌ನಲ್ಲಿ ಆರ್‌ಸಿಬಿ 8ನೇ ಸ್ಥಾನದಲ್ಲಿ, ಹೈದರಾಬಾದ್‌ ಎಲಿಮಿನೇಟರ್‌ ಹಂತ ತಲುಪಿತ್ತು.

ಇದಕ್ಕೂ ಮುನ್ನ 2009ರಲ್ಲಿ ಆಸ್ಟ್ರೇಲಿಯಾದ ಮಾಜಿ ವಿಕೆಟ್‌ ಕೀಪರ್‌ ಆಡಮ್‌ ಗಿಲ್‌ಕ್ಟ್ರಿಸ್‌ ಅವರ ನಾಯಕತ್ವದಲ್ಲಿ ಹೈದರಾಬಾದ್‌ ಐಪಿಎಲ್‌ ಪ್ರಶಸ್ತಿಯನ್ನು ಗೆದ್ದಿತ್ತು. ಅನಂತರ ತಂಡವನ್ನು ಡೆಕ್ಕನ್‌ ಚಾರ್ಜರ್ಸ್‌ ಎಂದು ಹೆಸರಿಸಲಾಯಿತು. 2013ರಲ್ಲಿ ಸನ್‌ ಟಿವಿ ನೆಟ್‌ವರ್ಕ್‌ ತಂಡವನ್ನು ಖರೀದಿಸಿ ಮರುನಾಮಕರಣ ಮಾಡಿತು.

50+ ಪಂದ್ಯಗಳನ್ನು ಗೆದ್ದ ನಾಲ್ಕನೇ ನಾಯಕ ಕೊಹ್ಲಿ !
2016ರ ಫೈನಲ್‌ ಪಂದ್ಯದವಲ್ಲದೇ ಆರ್‌ಸಿಬಿ 2011ರಲ್ಲಿ ಡೇನಿಯಲ್‌ ವೆಟ್ಟೋರಿ ಮತ್ತು 2009ರಲ್ಲಿ ಅನಿಲ್‌ ಕುಂಬ್ಳೆ ಅವರ ನಾಯಕತ್ವದಲ್ಲಿ ಫೈನಲ್‌ಗೆ ಕಾಲಿಟ್ಟಿತ್ತು. ಪ್ರತಿ ಬಾರಿಯೂ ತಂಡಕ್ಕೆ ಅದೃಷ್ಟ ಕೈಕೊಡುತ್ತಿದೆ. ಹಾಗೆ ನೋಡಿದರೆ ವಿರಾಟ್‌ ಆರ್‌ಸಿಬಿಯ ಅತ್ಯಂತ ಯಶಸ್ವಿ ನಾಯಕ. ಅವರು 110 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿ 49 ಜಯಗಳಿಸಿದ್ದಾರೆ. ಇಂದು ಹೈದರಾಬಾದ್‌ ವಿರುದ್ಧದ ಪಂದ್ಯವನ್ನು ಗೆದ್ದರೆ ಐಪಿಎಲ್‌ನಲ್ಲಿ ಒಂದು ತಂಡಕ್ಕೆ 50+ ಪಂದ್ಯಗಳನ್ನು ಗೆದ್ದ ನಾಲ್ಕನೇ ನಾಯಕನಾಗಲಿದ್ದಾರೆ. ಇದಕ್ಕೂ ಮೊದಲು ಮಹೇಂದ್ರ ಸಿಂಗ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ಗೌತಮ್‌ ಗಂಭೀರ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ವಿರುದ್ಧ ಹಲವು ಪಂದ್ಯಗಳನ್ನು ಗೆದ್ದಿದ್ದಾರೆ. ಸಿಎಸ್‌ಕೆಗೆ 100 ಪಂದ್ಯಗಳನ್ನು ಗೆದ್ದ ಏಕೈಕ ನಾಯಕ ಧೋನಿ.

ಸ್ಪಿನ್ನರ್‌ಗಳೇ ನಿರ್ಣಾಯಕ
ಎರಡೂ ತಂಡಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ. ಹೈದರಾಬಾದ್‌ ವಿಶ್ವದ ನಂಬರ್‌ ಒನ್‌ ಬೌಲರ್‌ ಮತ್ತು ಲೆಗ್‌ ಸ್ಪಿನ್ನರ್‌ ಆಗಿರುವ ರಶೀದ್‌ ಖಾನ್‌ ಅವರನ್ನು ಹೊಂದಿದೆ. ಇನ್ನು ನಂಬರ್‌ 1 ಆಲ್‌ರೌಂಡರ್‌ ಮತ್ತು ಆಫ್ ಸ್ಪಿನ್ನರ್‌ ಮೊಹಮ್ಮದ್‌ ನಬಿ ಜತೆಗೆ ಎಡಗೈ ಸ್ಪಿನ್ನರ್‌ ನದೀಮ್‌ ಕೂಡ ಇದ್ದಾರೆ. ಅದೇ ಸಮಯದಲ್ಲಿ. ಇನ್ನು ಬೆಂಗಳೂರು ತಂಡದಲ್ಲಿ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಾಹಲ್‌, ಆಡಮ್‌ ಜಂಪಾ ಮತ್ತು ಆಫ್ ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ ಬಲ ತಂಡಕ್ಕೆ ಇದೆ.

Advertisement

ಪಿಚ್‌ ಮತ್ತು ಹವಾಮಾನ ವರದಿ ಹೇಗಿದೆ?
ದುಬೈನಲ್ಲಿ ನಡೆಯುವ ಪಂದ್ಯದ ಸಮಯದಲ್ಲಿ ಆಕಾಶ ನೀಲಿಯಾಗಿ ಸ್ಪಷ್ಟವಾಗಿ ಗೋಚರಿಸಲಿದೆ. ತಾಪಮಾನವು 27ರಿಂದ 37 ಡಿಗ್ರಿ ಸೆಲ್ಸಿಯಸ್‌ ನಡುವೆ ಇರಬಹುದು. ಪಿಚ್‌ ಬ್ಯಾಟಿಂಗ್‌ಗೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಇಲ್ಲಿ ನಿಧಾನಗತಿಯ ವಿಕೆಟ್‌ ಆಗಿರುವುದು ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯ ಮಾಡಲಿದೆ. ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ಮಾಡಲು ಇಷ್ಟಪಡಬಹುದು. ಕಳೆದ 62 ಟಿ 20 ಗಳಲ್ಲಿ ಇಲ್ಲಿ ಮೊದಲು ಬ್ಯಾಟಿಂಗ್‌ ತಂಡದ ಶೇ. 56.45ರಷ್ಟಯ ಗೆಲುವು ಕಂಡಿತ್ತು. ಕಳೆದ 4 ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದುಕೊಂಡಿದ್ದವು.

  • ಒಟ್ಟು ಟಿ 20 ಮುಖಾಮುಖಿ  62
  • ಮೊದಲ ಬ್ಯಾಟಿಂಗ್‌ ತಂಡ ಗೆದ್ದಿರುವ ಪಂದ್ಯ 35
  • ಮೊದಲ ಬೌಲಿಂಗ್‌ ತಂಡ ಗೆದ್ದಿರುವ ಪಂದ್ಯ: 26
  • ಮೊದಲ ಇನ್ನಿಂಗ್ಸ್‌ನಲ್ಲಿ ತಂಡದ ಸರಾಸರಿ ಸ್ಕೋರ್‌: 144
  • ಎರಡನೇ ಇನ್ನಿಂಗ್ಸ್‌ನಲ್ಲಿ ತಂಡದ ಸರಾಸರಿ ಸ್ಕೋರ್‌: 122

ಮುಖಾಮುಖಿ
ರಾಯಲ್‌ ಚಾಲೆಂಜರ್ ಮತ್ತು ಹೈದರಾಬಾದ್‌ ಈ ವರೆಗೆ15 ಪಂದ್ಯಗಳನ್ನು ಆಡಿದೆ. ಅವುಗಳ ಪೈಕಿ 8 ಪಂದ್ಯಗಳನ್ನು ಹೈದರಾಬಾದ್‌ ಗೆದ್ದಿದ್ದರೆ, ಬೆಂಗಳೂರು 6 ಪಂದ್ಯಗಳನ್ನು ಗೆದ್ದಿದೆ. 1 ಪಂದ್ಯವು ಡ್ರಾ ನಲ್ಲಿ ಅಂತ್ಯವಾಗಿದೆ. ಹೈದರಾಬಾದ್‌ನಲ್ಲಿ ವಾರ್ನರ್‌ ಹೊರತುಪಡಿಸಿ ಜಾನಿ ಬೈಸ್ಟೋವ್‌, ಕೇನ್‌ ವಿಲಿಯಮ್ಸನ್‌ ಪ್ರಿಯಮ್‌ ಗಾರ್ಗ್‌ ಮತ್ತು ಮನೀಶ್‌ ಪಾಂಡೆ ಅವರಂತಹ ಬ್ಯಾಟಿಂಗ್‌ ಬಲವಿದೆ. ಭುವನೇಶ್ವರ್‌ ಕುಮಾರ್‌ ಅವರಲ್ಲದೆ ಖಲೀಲ್‌ ಅಹ್ಮದ್‌ ಮತ್ತು ವಿರಾಟ್‌ ಸಿಂಗ್‌ ಕೂಡ ಬೌಲಿಂಗ್‌ನಲ್ಲಿ ಶಕ್ತಿ ತುಂಬಲಿದ್ದಾರೆ.

ಆರ್‌ಸಿಬಿಯಲ್ಲಿ ವಿರಾಟ್‌ ಕೊಹ್ಲಿಯನ್ನು ಹೊರತುಪಡಿಸಿ ಎಬಿ ಡಿವಿಲಿಯರ್ಸ್‌ ಮತ್ತು ಆರನ್‌ ಫಿಂಚ್‌ ನಂತಹ ಶ್ರೇಷ್ಟ ಬ್ಯಾಟ್ಸ್ಮನ್‌‌ಗಳಿದ್ದಾರೆ. ಆಲೌರೌಂಡರ್‌ಗಳಲ್ಲಿ ಕ್ರಿಸ್‌ ಮೋರಿಸ್‌, ಮೊಯಿನ್‌ ಅಲಿ ಮತ್ತು ವಾಷಿಂಗ್ಟನ್‌ ಸುಂದರ್‌ ಅವರನ್ನು ಹೊಂದಿದೆ. ಬೌಲಿಂಗ್‌ ವಿಭಾಗದಲ್ಲಿ, ಯುಜ್ವೇಂದ್ರ ಚಹಲ್‌ ಹೊರತುಪಡಿಸಿ, ಉಮೇಶ್‌ ಯಾದವ್‌ ಮತ್ತು ನವದೀಪ್‌ ಸೈನಿ ಅವರ ಸೇವೆ ಆರ್‌ಸಿಬಿ ಪಾಲಿಗೆ ಇದೆ.  ಐಪಿಎಲ್‌ನಲ್ಲಿ ಅತಿ ಹೆಚ್ಚು 5,412 ರನ್‌ ಗಳಿಸಿದ  ಆಟಗಾರ ಕೊಹ್ಲಿ.

ಒಟ್ಟಾರೆಯಾಗಿ ಹೇಳುವುದಾದರೆ ಇಂದಿನ ಪಂದ್ಯದಲ್ಲಿ ಮನರಂಜನೆಗೆ ಯಾವುದೇ ಕೊರತೆಯಾಗದು. ಪಂದ್ಯದಲ್ಲಿ ಟಾಸ್‌ಗೆಲ್ಲುವ ತಂಡ ಗೆಲುವಿನ ನಗೆ ಬೀರುವ ಸಾಧ್ಯತೆ ಹೆಚ್ಚು.

 

 

Advertisement

Udayavani is now on Telegram. Click here to join our channel and stay updated with the latest news.

Next